More

    ಮೂಲಸೌಕರ‌್ಯ ಒದಗಿಸಲು ನಿರ್ಲಕ್ಷೃ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಸಜೀಪಮುನ್ನೂರು ಗ್ರಾಮದ ಮಡಿವಾಳಪಡ್ಪು ಸರ್ಕಾರ ವಿವಿಧ ನೀರಾವರಿ ಯೋಜನೆ ಹಾಗೂ ಬೃಹತ್ ಕಂಪನಿಗಳಿಗೆ ನದಿಯಿಂದ ನೀರು ಮೇಲೆತ್ತುವ ಪಂಪ್‌ಹೌಸ್‌ಗಳನ್ನು ಹೊಂದಿರುವ ಸ್ಥಳ. ನೇತ್ರಾವತಿ ನದಿ ಕಿನಾರೆಯಲ್ಲಿರುವ ಈ ಪ್ರದೇಶವನ್ನು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳುವ ಸರ್ಕಾರ ಹಾಗೂ ಕಂಪನಿಗಳು ಇಲ್ಲಿನ ರಸ್ತೆ ಮತ್ತಿತರ ಮೂಲಸೌಲಭ್ಯ ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷೃ ವಹಿಸಿದೆ ಎಂದು ಮಡಿವಾಳಪಡ್ಪು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಡಿವಾಳ ಪಡ್ಪುವಿನಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿವಿಗೆ ನೀರು ಸರಬರಾಜು ಮಾಡುವ ಪಂಪ್‌ಹೌಸ್, ಇನ್ಫೋಸಿಸ್ ಸಂಸ್ಥೆಗೆ ನೀರು ಪೂರೈಕೆ ಮಾಡುವ ಪಂಪ್‌ಹೌಸ್, ಸಣ್ಣ ನೀರಾವರಿ ಇಲಾಖೆಯಡಿ ಸಜೀಪಮೂಡ ಗ್ರಾಮದ ಏತನೀರಾವರಿ ಯೋಜನೆಗೆ ನೀರೊದಿಗಿಸವ ಪಂಪ್‌ಹೌಸ್ ಹಾಗೂ ಸ್ಥಳೀಯ ಕೃಷಿಕರಿಗೆ ನೀರು ನೀಡುವ ಒಟ್ಟು 4 ಪಂಪ್‌ಹೌಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಪಂಪ್‌ಹೌಸ್ ನಿರ್ಮಾಣಕ್ಕಾಗಿ ಬಿಟ್ಟು ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಈ ಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಿ, ಮೂಲಸೌಲಭ್ಯಕ್ಕೆ ಸಹಕಾರ ನೀಡುವುದಾಗಿ ಸರ್ಕಾರ ಹಾಗೂ ಕಂಪನಿ ಆ ಸಂದರ್ಭ ಭರವಸೆಯನ್ನೂ ನೀಡಿತ್ತು. ಆದರೆ ಈಗ ಇದ್ದ ಡಾಂಬರು ರಸ್ತೆಯೂ ಹಾಳಾಗಿ ಹಲವು ವರ್ಷ ಕಳೆದರೂ ಶಾಶ್ವತ ರಸ್ತೆ ನಿರ್ಮಾಣಕ್ಕೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ.

     ಡಾಂಬರು ಮಾಯ: ಮಡಿವಾಳ ಪಡ್ಪುವಿನಿಂದ ಪಂಪ್‌ಹೌಸ್, ಕೂಸನಕಟ್ಟೆಗೆ ಈ ಹಿಂದೆ ಉತ್ತಮವಾದ ಡಾಂಬರು ರಸ್ತೆಯಿತ್ತು. ಇಲ್ಲಿ ಪಂಪ್‌ಹೌಸ್ ನಿರ್ಮಾಣಗೊಳ್ಳಲು ಆರಂಭವಾದ ಬಳಿಕ ಸರಕು ಹೊತ್ತು ತರುವ ಘನವಾಹನಗಳ ಸಂಚಾರದಿಂದಾಗಿ ಡಾಂಬರು ಕಿತ್ತು ಹೋಗಿದ್ದು, ಇಲ್ಲಿ ರಸ್ತೆ ಇತ್ತೋ ಎನ್ನುವ ಕುರುಹು ಇಲ್ಲದಷ್ಟು ಕುರೂಪಗೊಂಡಿದೆ. ರಸ್ತೆಗೆ ಹಾಕಿದ್ದ ಜಲ್ಲಿ ಕಲ್ಲುಗಳು ಎಲ್ಲೆಂದರಲ್ಲಿ ಚದುರಿ ಹೋಗಿದೆ. ಪಂಪ್‌ಹೌಸ್ ನಿರ್ಮಾಣದ ಬಳಿಕ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಿಸಿಕೊಡುವುದಾಗಿ ಹೇಳಿದ್ದ ಕಂಪನಿಗಳು ಬಳಿಕ ಮೌನವಾಗಿವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈಗಲೂ ಪಂಪ್‌ಹೌಸ್‌ಗೆ ಭೇಟಿ ನೀಡುತ್ತಾರೆ. ಆದರೆ ರಸ್ತೆ ನಿರ್ಮಾಣದ ಬಗ್ಗೆ ಚಕಾರವೆತ್ತುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
    ಸಜೀಪಮುನ್ನೂರು ಗ್ರಾಮಕ್ಕೆ ನಾಲ್ಕೈತ್ತಾಯ ದೈವ ಬಂದ ಐತಿಹಾಸಿಕ ಮಹತ್ವ ಇರುವ ಮಡಿವಾಳ ಪಡ್ಪು ಕೂಸನಕಟ್ಟೆಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನೇಮೋತ್ಸವ ನಡೆಯುತ್ತಿದ್ದು, ಮುಂದಿನ ವರ್ಷವೂ ಇಲ್ಲಿ ನೇಮ ನಡೆಯಲಿದೆ. ಇಲ್ಲಿನ ಕಟ್ಟೆಯನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಶ್ರದ್ಧಾಕೆಂದ್ರವಾಗಿ ಅಭಿವೃದ್ಧಿಪಡಿಸುವ ಇರಾದೆ ಸ್ಥಳೀಯ ನಿವಾಸಿಗಳದ್ದಾಗಿದ್ದರೂ ಇಲ್ಲಿಗೆ ವಾಹನ ಬರಲು ಸರಿಯಾದ ರಸ್ತೆಯಿಲ್ಲದೆ ಇರುವುದು ಅಡ್ಡಿಯಾಗಿದೆ. ಆದ್ದರಿಂದ ಮುಂದಿನ ನೇಮೋತ್ಸವಕ್ಕಿಂತ ಮುಂಚಿತವಾಗಿ ಇಲ್ಲಿ ಪಂಪ್‌ಹೌಸ್ ಹೊಂದಿರುವ ಸಂಸ್ಥೆಗಳು ಜಂಟಿಯಾಗಿ ಸರ್ವಋತು ಬಳಕೆಯ ರಸ್ತೆ ನಿರ್ಮಿಸಿಕೊಡ ಬೇಕು, ತಪ್ಪಿದ್ದಲ್ಲಿ ಪಂಪ್‌ಹೌಸ್‌ಗೆ ಬೀಗ ಜಡಿಯುವುದಾಗಿ ಮಡಿವಾಳ ಪಡ್ಪು ನಿವಾಸಿಗಳು ಎಚ್ಚರಿಸಿದ್ದಾರೆ.
    ಬೀದಿ ದೀಪಗಳು ಉರಿಯದೆ ಸಂಜೆಯ ವೇಳೆ ಇಲ್ಲಿ ನಡೆದಾಡುವುದೇ ಕಷ್ಟಕರ. ರಸ್ತೆ ಮಧ್ಯೆ ನೀರಿನ ಪೈಪ್‌ಲೈನ್ ಅಳವಡಿಸಿದ್ದು, ಪೈಪ್ ಲೀಕೇಜ್ ಆಗಿ ರಸ್ತೆಯಿಂದ ನೀರು ಜಿನುಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟವರು ಬಗೆಹರಿಸಬೇಕು ಎಂದು ಮಾಧ್ಯಮದ ಮುಂದೆ ಒತ್ತಾಯಿಸಿದ್ದಾರೆ.

    ಕಳೆಗಂಟಿಗಳ ಸಾಮ್ರಾಜ್ಯ: ಅಡಕೆ ಹಾಗೂ ತೆಂಗು ತೋಟಗಳಿಂದ ಸಮೃದ್ಧವಾಗಿದ್ದ ಈ ಪ್ರದೇಶ ನಿರ್ವಹಣೆ ಕೊರತೆಯಿಂದ ಕಳೆಗಂಟಿಗಳ ಸಾಮ್ರಾಜ್ಯವಾಗಿದೆ. ಪಂಪ್‌ಹೌಸ್‌ಗಳಿಗೆ ಪ್ರತ್ಯೇಕ ವಿದ್ಯುತ್ ಪರಿರ್ವತಕಗಳಿದ್ದು, ಅದರ ರಕ್ಷಣಾ ಬೇಲಿಗಳ ಸುತ್ತ ಬಳ್ಳಿಗಳು ಬೆಳೆದು ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಇನ್ಫೋಸಿಸ್ ಸಂಸ್ಥೆಗೆ ಒಂದು ಎಕರೆಯಷ್ಟು ಜಮೀನು ಇದ್ದು ಅದರ ತುಂಬಾ ಪೊದೆಗಳು ತುಂಬಿಕೊಂಡಿವೆ. ಹಾವು ಮೊದಲಾದ ವಿಷಕಾರಿ ಜಂತುಗಳ ಆವಾಸ ಸ್ಥಾನವಾಗಿದ್ದು, ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಕಳೆಗಂಟಿಗಳನ್ನು ತೆಗೆದು ಪರಿಸರ ಸ್ವಚ್ಛವಾಗಿಟ್ಟಿಕೊಂಡು ನಿರ್ವಹಣೆ ನೋಡಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಮಂಗಳೂರು ವಿವಿ, ಇನ್ಫೋಸಿಸ್, ಏತನೀರಾವರಿ ಯೋಜನೆಯ ಪಂಪ್‌ಹಸ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ರಸ್ತೆ ಸಂಪೂರ್ಣ ನಾದುರಸ್ತಿ ಸ್ಥಿತಿಗೆ ತಲುಪಿದೆ. ಇಲ್ಲಿ ಕಳೆಗಂಟಿ ಗಿಡಗಳು ಬೆಳೆದು ನಿರ್ವಹಣೆಯ ಕೊರತೆಯಿಂದ ಜನ ಬರಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ರಸ್ತೆ ನಿರ್ಮಿಸಿಕೊಟ್ಟು ಪರಿಸರದ ನಿರ್ವಹಣೆ ನೋಡಿಕೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.
    ಸುರೇಶ್ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts