More

    ಜಾಗೃತಿ ಕೊರತೆ, ಬೀದಿಗಿಳಿದ ಜನ

    ಮಂಗಳೂರು: ‘ಕರೊನಾ ಸೆಕ್ಷನ್’ ಲೆಕ್ಕಿಸದೆ ಕರಾವಳಿಯಲ್ಲಿ ಸಾರ್ವಜನಿಕರು ಮಂಗಳವಾರವೂ ಬೀದಿಗಿಳಿದರು.
    ದಕ್ಷಿಣ ಕನ್ನಡ ಮತ್ತು ಗಡಿಯ ಕಾಸರಗೋಡಿನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ, ಜನರು ಜಾಗೃತರಾಗದಿರುವುದು ಕಂಡುಬಂತು. ಕೆಲವು ರಿಕ್ಷಾ, ವಾಹನಗಳು ಸಂಚರಿಸಿದವು. ಸರ್ಕಾರದ ಲಾಕ್‌ಡೌನ್ ಪೂರ್ಣಪ್ರಮಾಣದಲ್ಲಿ ಜಾರಿಯಾಗಲಿಲ್ಲ. ಹೆಜಮಾಡಿ, ಫರಂಗಿಪೇಟೆ, ಜಪ್ಪಿನಮೊಗರು ಮುಂತಾದೆಡೆ ಹೆದ್ದಾರಿಗಳನ್ನು ಬಂದ್ ಮಾಡಿ ಕಾಯುತ್ತಿದ್ದರೂ ಶೇ.100 ಲಾಕ್‌ಡೌನ್ ಮಾಡುವುದು ಪೊಲೀಸರಿಗೆ ಸಾಧ್ಯವಾಗಿಲ್ಲ. ಬೀದಿಗಿಳಿದ ಕೆಲವರನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಯೋಗ ಮಾಡಬೇಕಾಯಿತು.

    ಮಧ್ಯಾಹ್ನವರೆಗೂ ಕಂಡುಬಂದ ಜನಸಂಚಾರ ಸಂಜೆಗೆ ಕಡಿಮೆಯಾಯಿತು. 12 ಗಂಟೆ ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಬೀದಿಯಲ್ಲಿದ್ದ ಜನರನ್ನು ಓಡಿಸಿದರು. ಸೋಮವಾರಕ್ಕೆ ಹೋಲಿಸಿದರೆ ಜನ ಸಂಚಾರದಲ್ಲಿ ಸ್ವಲ್ಪ ಇಳಿಕೆ
    ಕಂಡುಬಂದಿದೆ. ಹೆದ್ದಾರಿಗಳಲ್ಲಿಯೂ ಖಾಸಗಿ ವಾಹನಗಳ ಸಂಚಾರ ವಿರಳವಾಗಿತ್ತು. ಸತತ ಮೂರನೇ ದಿನವೂ ಖಾಸಗಿ-ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು, ಅಲ್ಲೊಂದು ಇಲ್ಲೊಂದು ಆಟೋಗಳು ಸಂಚರಿಸಿದವು. ಹೆಚ್ಚಿನವರು ತಮ್ಮ ಸ್ವಂತ ವಾಹನದಲ್ಲೇ ಓಡಾಟ ನಡೆಸಿದ್ದಾರೆ. ಪೊಲೀಸರು ಅಲ್ಲಲಿ ಬ್ಯಾರಿಕೇಡ್‌ಗಳನ್ನು ಇರಿಸಿ, ವಾಹನ ಸಂಚಾರಕ್ಕೆ ತಡೆಯೊಡಿದ್ದರು. ಹೆಚ್ಚಿನ ಎಲ್ಲ ಜಂಕ್ಷನ್‌ಗಳಲ್ಲೂ ಪೊಲೀಸರಿದ್ದು, ಅನವಶ್ಯಕ ತಿರುಗಾಡುತ್ತಿದ್ದವರನ್ನು ಹಿಂದಕ್ಕೆ ಕಳುಹಿಸುತ್ತಿದ್ದರು. ಬ್ಯಾಂಕ್‌ಗಳಲ್ಲಿ ಮಧ್ಯಾಹ್ನವರೆಗೆ ಮಾತ್ರ ಗ್ರಾಹಕರಿಗೆ ವ್ಯವಹಾರ ನಡೆಸಲು ಅವಕಾಶವಿತ್ತಾದರೂ, ಬೆರಳೆಣಿಕೆ ಗ್ರಾಹಕರಷ್ಟೇ ಇದ್ದರು.

    ಬೆಳಗ್ಗೆ ವಾಹನ ಸಂಚಾರ ಕಂಡು ಬಂದ ನಗರದ ಪ್ರಮುಖ ಜಂಕ್ಷನ್ ಮಧ್ಯಾಹ್ನ ಬಳಿಕ ಬಹುತೇಕ ಖಾಲಿಯಾಗಿತ್ತು. ಯಾರೂ ಬೀದಿಗೆ ಇಳಿಯಬಾರದು ಎಂದು ಪೊಲೀಸರು ಅನೌನ್ಸ್ ಮಾಡಿ, ಹಲವರಿಗೆ ಲಾಠಿ ಏಟಿನ ರುಚಿಯನ್ನೂ ತೋರಿಸಿದ್ದಾರೆ. ನಗರದಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದರೂ, ಹೆದ್ದಾರಿಗಳಲ್ಲಿ ಲಾರಿಗಳ ಓಡಾಟಕ್ಕೆ ತಡೆಯಾಗಿಲ್ಲ. ಮಧ್ಯಾಹ್ನ ಬಳಿಕ ಅವಶ್ಯಕ ಸೇವೆಗಳಾದ ಮೆಡಿಕಲ್ ಮತ್ತು ಪೆಟ್ರೋಲ್ ಬಂಕ್‌ಗಳು ಮಾತ್ರ ಓಪನ್ ಆಗಿದ್ದವು. ಪೆಟ್ರೋಲ್ ಬಂಕ್‌ಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆಯಿದ್ದರು.

    ಉಡುಪಿ ಜನಸಂಚಾರ ವಿರಳ: ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಇದ್ದರೂ, ಮಂಗಳವಾರ ಅಗತ್ಯ ಸೇವೆಗಳಿಗೆ ವಿನಾಯತಿ ನೀಡಿದ ಕಾರಣ, ಸಂತೆ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಎಂದಿನಂತೆ ನಡೆದಿದೆ. ನೂರಾರು ಸಂಖ್ಯೆಯಲ್ಲಿ ವ್ಯಾಪಾರಿಗಳು ತರಕಾರಿ ಖರೀದಿಗೆ ಜಮಾಯಿಸಿದ್ದರು. ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವಂತೆ ಸರ್ಕಾರ ಪದೇ ಪದೆ ಮನವಿ ಮಾಡುತ್ತಿದ್ದರೂ ಜನರು ಗಂಭೀರವಾಗಿ ಪರಿಗಣಿಸಿದಂತಿಲ್ಲ.

    ನಗರದಲ್ಲಿ ಖಾಸಗಿ, ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರಿಂದ ನಗರದ ಸರ್ವೀಸ್ ಮತ್ತು ಸಿಟಿ ಬಸ್ಸು ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಜನಸಂಚಾರ ವಿರಳವಾಗಿದ್ದರೂ ಬೆರಳೆಣಿಕೆ ವಾಹನಗಳು ರಸ್ತೆಗಿಳಿದಿದ್ದವು. ಆದರೆ ತರಕಾರಿ, ಅಗತ್ಯ ವಸ್ತು ಖರೀದಿಗೆ ಜನ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು. ಹೋಟೆಲ್‌ಗಳು ಸಂಪೂರ್ಣ ಬಂದ್ ಆಗಿದ್ದವು. ದಿನಸಿ ಅಂಗಡಿ, ಹಾಲಿನ ಡೇರಿ, ಮೆಡಿಕಲ್ ಶಾಪ್, ತರಕಾರಿ ಅಂಗಡಿ ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಪೆಟ್ರೋಲ್ ಪಂಪ್ ತೆರೆದಿದ್ದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಮಾಲ್ ವಿರುದ್ಧ ಕೇಸು: ನಗರದ ಬಿಗ್ ಬಜಾರ್ ಮಾಲ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿನಸಿ ವಿಭಾಗದಲ್ಲಿ ಎಸಿ ಹಾಕಿರುವುದನ್ನು ಕಂಡು ಗರಂ ಆದರು. ಸಿಬ್ಬಂದಿ ಸಂಖ್ಯೆಯೂ ನಿಗದಿತ 25ಕ್ಕಿಂತ ಹೆಚ್ಚಿದ್ದು, ತರಕಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂತು. ಇದನ್ನು ಕಂಡು ಮ್ಯಾನೇಜರನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಜಿಲ್ಲಾಡಳಿತ ಸೂಚನೆ ಪಾಲಿಸದ ಹಿನ್ನಲೆಯಲ್ಲಿ ಕೇಸು ದಾಖಲಿಸುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಆದೇಶ ಪಾಲಿಸದ ಕಾರಣ ಬಿಗ್ ಬಜಾರ್ ಮ್ಯಾನೇಜರ್ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗತ್ಯವಸ್ತುಗಳ ಕಾಯ್ದೆ ಉಲ್ಲಂಘನೆ ಮಾಡಿದ ಬಗ್ಗೆ ದೂರು ನೀಡಲಾಗಿದೆ.

    ಜಿಲ್ಲಾಧಿಕಾರಿ, ಎಸ್ಪಿ ಗಸ್ತು: ಮಧ್ಯಾಹ್ನ ವೇಳೆ ನಗರಾದ್ಯಂತ ಜಿಲ್ಲಾಧಿಕಾರಿ ಜಗದೀಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಗಸ್ತು ನಡೆಸಿದರು. ಈ ಸಂದರ್ಭ ದಿನಸಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ದರ ಹಾಗೂ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು. ರಿಲಯನ್ಸ್ ಅಂಗಡಿಗೆ ಭೇಟಿ ನೀಡಿ ತರಕಾರಿ ಹಾಗೂ ದಿನಸಿ ಸಾಮಗ್ರಿ ದರ ಏರಿಕೆ ಮಾಡದಂತೆ ಸೂಚನೆ ನೀಡಿದರು. ಒಬ್ಬ ಗ್ರಾಹಕನಿಗೆ 10 ನಿಮಿಷ ಮಾತ್ರ ಖರೀದಿಗೆ ಅವಕಾಶ ನೀಡಬೇಕು. ಅಂತರವನ್ನು ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ತರಕಾರಿ ಹಾಗೂ ದಿನಸಿ ಸಾಮಗ್ರಿ ವಾಹನಗಳನ್ನು ಗಡಿಭಾಗದಲ್ಲಿ ಪೊಲೀಸರು ತಡೆ ಹಿಡಿದಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದರು.

    ಮಾಸ್ಕ್ ಹಾಕಿಕೊಂಡು ತಿರುಗುವವರೇ ಅಧಿಕ: ಕಳೆದ ಎರಡು ದಿನಗಳಲ್ಲಿ ನಗರದಲ್ಲಿ ಮಾಸ್ಕ್ ಹಾಕಿಕೊಂಡು ತಿರುಗಾಡುವವರ ಸಂಖ್ಯೆ ಹೆಚ್ಚಾಗಿದೆ. ವಾಹನಗಳಲ್ಲಿ ಸಾಗುವವರು, ರಸ್ತೆ ಬದಿ ತಿರುಗಾಡುವ ಹೆಚ್ಚಿನವರು ಮಾಸ್ಕ್ ಧರಿಸಿರುವುದು ಕಾಣಸಿಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಸಂಘ ಸಂಸ್ಥೆಗಳು-ದಾನಿಗಳು ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿದ್ದು, ಇದಕ್ಕೆ ಕಾರಣವಾಗಿದೆ. ಕೆಲವರು ಉತ್ತಮ ದರ್ಜೆಯ ಹೆಚ್ಚು ಮೌಲ್ಯದ ಮಾಸ್ಕ್ ಗಳನ್ನು ಧರಿಸಿ ಓಡಾಡುತ್ತಿದ್ದಾರೆ.

    ಟ್ರಾಫಿಕ್ ನಿಯಮ ಉಲ್ಲಂಘನೆ: ಕಳೆದ ಕೆಲವು ದಿನಗಳಲ್ಲಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಮಾಣ ಹೆಚ್ಚಾಗಿದೆ. ಭಾನುವಾರ ಜನತಾ ಕರ್ಫ್ಯೂ ಮಧ್ಯೆಯೂ ಕೆಲವವರು ರಸ್ತೆಗಳಲ್ಲಿ ದ್ವಿಚಕ್ರವಾಹನಗಳಲ್ಲಿ ಹೆಲ್ಮೆಟ್ ರಹಿತವಾಗಿ ಓಡಾಡಿದ್ದು, ಸೋಮವಾರ- ಮಂಗಳವಾರವೂ ಇದು ಮುಂದುವರಿದಿದೆ. ಏಕ ಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುವವರ ಸಂಖ್ಯೆಯೂ ಅಧಿಕವಾಗಿದೆ.

    ಆದೇಶ ಉಲ್ಲಂಘನೆ 7 ಬಂಧನ
    ಮಂಗಳೂರು: ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ 144 ನಿರ್ಬಂಧಕಾಜ್ಞೆ ಹಾಗೂ ಪೊಲೀಸರ ನಿರ್ದೇಶನವನ್ನು ಉಲ್ಲಂಘಿಸಿದ ಆರೋಪದಲ್ಲಿ 7 ಮಂದಿಯನ್ನು ಮಂಗಳೂರು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
    ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲೂಕಿನ ದಿನ್ನೆಕೊಪ್ಪಲು ನಿವಾಸಿ,
    ನಗರದ ಚಿತ್ರಮಂದಿರದ ವಾಚ್‌ಮೆನ್ ಆಗಿದ್ದ ಜೇಮ್ಸ್ (45), ಚಿಕ್ಕಮಗಳೂರು ಜಿಲ್ಲೆಯ ಪಗ್ಗವಳ್ಳಿ ಚೆನ್ನಪುರ ನಿವಾಸಿ ವಿಮೇಶ (30), ಮೂಲತಃ ಮಧ್ಯಪ್ರದೇಶದ ದೊಬಾ ಹಾಹಯ ಬುಜಾಲ್ಲೆ ನಿವಾಸಿ ಪ್ರಸ್ತುತ ಕುದ್ರೋಳಿ ಜೆಎಂ ರಸ್ತೆಯಲ್ಲಿ ವಾಸವಿದ್ದ ಅಮೀರ ಹಾಜು ಅನ್ಸಾರಿ, ರಾಜಸ್ಥಾನದ ಬಲರಾಮ ಚೌಧರಿ (32), ಅಸ್ಸಾಂ ರಾಜ್ಯದ ರಾಹುಲ್ ಪಾಂಡೆ (18), ಉಳ್ಳಾಲದ ಸಿದ್ದಿಕ್, ತೊಕ್ಕೊಟ್ಟಿನ ವಿನಯ್ ಬಂಧಿತರು.

    ರಾಜ್ಯ ಸರ್ಕಾರದ ಸೂಚನೆ ಮೇರಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಜಿಲ್ಲಾದ್ಯಂತ ಕರ್ಫ್ಯೂ ಆದೇಶ ನೀಡಿದ್ದರೂ ಗಂಭೀರವಾಗಿ ಪರಿಗಣಿಸದೆ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಆದೇಶ ಪಾಲನೆ ಮಾಡದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಸೋಮವಾರವೇ ಎಚ್ಚರಿಕೆ ನೀಡಿದ್ದರು.

    ಮಾರಿಗುಡಿ ಹೆಸರಲ್ಲಿ ಅಪಪ್ರಚಾರ
    ಪಡುಬಿದ್ರಿ: ‘ಕರೊನಾ ಮದ್ದಿನ ವಿಚಾರವಾಗಿ ಕಾಪು ಮಾರಿಗುಡಿಯಲ್ಲಿ ತಾಯಿಯ ಅಪ್ಪಣೆಯಾಗಿದೆ. ಸಂಜೆಯೊಳಗೆ ಚಹಾಗೆ ಬೆಲ್ಲ, ಅರಸಿನ ಹಾಕಿ ಕುಡಿಯಬೇಕು’ ಎಂಬ ವದಂತಿ ವಿಷಯವು ಸತ್ಯಕ್ಕೆ ದೂರವಾಗಿದೆ. ‘ಕರೊನಾ ಹಿನ್ನೆಲೆಯಲ್ಲಿ ಕೇವಲ ಸುಗ್ಗಿ ಮಾರಿಪೂಜೆ ಧಾರ್ಮಿಕ ವಿಧಿ
    ಸರಳವಾಗಿ ನಡೆದಿದೆಯಾದರೂ, ಮೂರೂ ಮಾರಿಗುಡಿಗಳಲ್ಲಿ ಮಂಗಳವಾರ  ಯಾವುದೇ ದರ್ಶನ ಸೇವೆ ನಡೆದಿಲ್ಲ’ ಎಂದು ಮೂರೂ ಮಾರಿಗುಡಿಗಳ ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ್ದಾರೆ. ಭಕ್ತರು ಇಂತಹ ವಿಚಾರಗಳಿಗೆ ಕಿವಿಗೊಡದಿರುವಂತೆ ಅವರು ಮನವಿ ಮಾಡಿದ್ದಾರೆ.
    ಘಟನೆಯ ಕುರಿತು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಯನ್ನು ಪೊಲೀಸರೂ ಅಲ್ಲಗಳೆದಿದ್ದು, ಮೂರು ಮಾರಿಗುಡಿಗಳಿಂದ ದೂರು ಬಂದರೆ ಪ್ರಕರಣ ದಾಖಲಿಸುವುದಾಗಿ ಕಾಪು ಠಾಣಾಧಿಕಾರಿ ರಾಜಶೇಖರ ಸಾಗನೂರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂದೇಶದಿಂದ ಹಲವೆಡೆ ಜನರು ಬೆಲ್ಲ, ಅರಸಿನ ಹಾಕಿ ಚಹಾ ಸೇವಿಸಿದ ಘಟನೆಯೂ ನಡೆದಿದೆ. ಕೇವಲ ಮನೆಯಲ್ಲಿ ಕುಳಿತು ವದಂತಿ ಹಬ್ಬಿಸುವ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ದುಷ್ಕರ್ಮಿಗಳು ಮೊದಲಾಗಿ ಕರೊನಾ ವಿಚಾರದಲ್ಲಿ ಜನಜಾಗೃತಿ ಮೂಡಿಸುವ ಹಾಗೂ ಜನರ ಒಳಿತಿಗಾಗಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಗೌರವಿಸುವ ಕೆಲಸ ಮಾಡಬೇಕು. ಯಾವುದೇ ದೇವಸ್ಥಾನಗಳು ದೇಶದ ಜನತೆಯ ಸುಬಿಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸುವ ಕೆಲಸ ಮಾಡುತ್ತದೆ ಎಂದು ಪ್ರಸಾದ್ ಶೆಣೈ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts