More

    ಸುರಂಗ ಮಾರ್ಗದಿಂದ ಸರಕು ನಿರ್ವಹಣೆ ಹೆಚ್ಚಳ, ಎನ್‌ಎಂಪಿಟಿ ಅಧ್ಯಕ್ಷ ಅಕ್ಕರಾಜು ವಿಶ್ವಾಸ

    ಮಂಗಳೂರು: ಶಿರಾಡಿ ಸುರಂಗ ಮಾರ್ಗ ಯೋಜನೆ ಕಾರ್ಯಗತಗೊಂಡರೆ ನವಮಂಗಳೂರು ಬಂದರು ಮಂಡಳಿ ಸರಕು ನಿರ್ವಹಣೆ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದು ನವಮಂಗಳೂರು ಬಂದರು ಮಂಡಳಿ(ಎನ್‌ಎಂಪಿಟಿ) ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ವಾರ್ಷಿಕ 68 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆಯ ಗುರಿ ಇದ್ದು, ಸುಗಮ ಸಂಪರ್ಕ ವ್ಯವಸ್ಥೆಯ ಕೊರತೆಯಿಂದ ಈ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ರಾಜ್ಯದ ವಿವಿಧೆಡೆಗಳ ಗಮನಾರ್ಹ ಪ್ರಮಾಣದ ಸರಕು ಸಮೀಪದ ತಮಿಳುನಾಡು ಬಂದರು ಮೂಲಕ ಸಾಗಿಸಲ್ಪಡುತ್ತಿದೆ ಎಂದರು.
    ಸುರಂಗ ಮಾರ್ಗ ಯೋಜನೆ ಪೂರ್ಣಗೊಂಡರೆ ಎನ್‌ಎಂಪಿಟಿ 2025 ವೇಳೆಗೆ ವಾರ್ಷಿಕ ಕನಿಷ್ಠ 45 ಮಿಲಿಯನ್ ಮೆಟ್ರಿಕ್ ಟನ್ ಮತ್ತು 2030ಕ್ಕೆ ಸುಮಾರು 77 ಮೆಟ್ರಿಕ್ ಟನ್ ಸರಕು ನಿರ್ವಹಿಸಲು ಸಾಧ್ಯವಾಗಬಹುದು ಎಂದರು.

    ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗಲಿರುವ ಶಿರಾಡಿ ಘಾಟಿ ಸುರಂಗ ಮಾರ್ಗದಿಂದ ಪಶ್ಚಿಮ ಘಟ್ಟದಲ್ಲಿರುವ ಪ್ರಾಣಿಗಳು ಹಾಗೂ ಪರಿಸರಕ್ಕೆ ತೊಂದರೆ ಇಲ್ಲ. ಈ ಮಾರ್ಗ ಜೀವವೈವಿಧ್ಯತೆಯ ದೃಷ್ಟಿಯಿಂದ ಸುರಕ್ಷಿತವಾಗಲಿದೆ ಎಂದರು.

    ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳಿಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇದು ಕರ್ನಾಟಕದ ವಿವಿಧ ಭಾಗಗಳಿಗೆ ಸರಕು ಸಾಗಾಟಕ್ಕೆ ಪೂರಕವಾಗಿದ್ದರೆ, ಗೋವಾ ಗಡಿಯಿಂದ ಕೇರಳ ಗಡಿಯವರೆಗೆ 3443 ಕೋಟಿ ರೂ. ವೆಚ್ಚದ 278 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿ ಆಗುವುದರಿಂದ ಬೇಲೆಕೇರಿ, ಕಾರವಾರ ಬಂದರುಗಳೊಂದಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ ಎಂದರು.
    ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ)ಮಂಗಳೂರು ವಿಭಾಗದ ಅಧ್ಯಕ್ಷ ಪ್ರಕಾಶ್ ಕಲ್ಬಾವಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts