ನವದೆಹಲಿ: ಅಂಬಾನಿ ಕುಟುಂಬ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದು ಎಂಬುದು ಎಲ್ಲರಿಗೂ ತಿಳಿದಿದೆ. ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಯಾವುದೇ ಸಮಾರಂಭ ನಡೆಯಲಿ ಅಂಬಾನಿ ಕುಟುಂಬ ನೀಡುವ ಉಡುಗೊರೆ ದುಬಾರಿಯಾಗಿರುತ್ತದೆ. ರಾಮ್ಚರಣ್-ಉಪಾಸನ ದಂಪತಿಗೆ ಮಗು ಜನಿಸಿದಾಗ 1 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಚಿನ್ನದ ತೊಟ್ಟಿಲನ್ನೇ ಅಂಬಾನಿ ಕುಟುಂಬ ಉಡುಗೊರೆ ನೀಡಿತ್ತು. ಅಂತಹುದರಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ನೀಡುವ ಉಡುಗೊರೆ ಇನ್ನುಷ್ಟು ದುಬಾರಿಯಾಗಿರುತ್ತದೆ ಎಂದು ನೀವೇ ಯೋಚಿಸಿ. ಅಂಬಾನಿ ಕುಟುಂಬದ ಸದಸ್ಯರು ಅನೇಕ ವರ್ಷಗಳಿಂದ ನೀಡಿರುವ ಲಕ್ಷುರಿ ಉಡುಗೊರೆಗಳ ಬಗ್ಗೆ ಈ ಸ್ಟೋರಿಯಲ್ಲಿ ನಾವೀಗ ತಿಳಿದುಕೊಳ್ಳೋಣ.
451 ಕೋಟಿ ರೂ. ನೆಕ್ಲೇಸ್
ಶ್ಲೋಕಾ ಮೆಹ್ತಾ ಅವರು 2019ರಲ್ಲಿ ಆಕಾಶ್ ಅಂಬಾನಿಯನ್ನು ಮದುವೆಯಾದಾಗ, ನೀತಾ ಅಂಬಾನಿ ಅವರು ತಮ್ಮ ಸೊಸೆಗೆ 91 ವಜ್ರಗಳನ್ನು ಒಳಗೊಂಡ ವಿಶ್ವದ ಅತ್ಯಂತ ದುಬಾರಿ ನೆಕ್ಲೇಸ್‌ಗಳಲ್ಲಿ ಒಂದಾದ ಮೌವಾಡ್ ಎಲ್ ಇನ್‌ಕಂಪ್ಯಾಬಲ್ ಉಡುಗೊರೆ ನೀಡಿದರು. ಇದರ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗುತ್ತದೆ. ಏಕೆಂದರೆ, ಬರೋಬ್ಬರಿ 451 ಕೋಟಿ ರೂ. ಮೌಲ್ಯದ್ದಾಗಿದೆ. ಈ ನೆಕ್ಲೇಸ್ 407.48 ಕ್ಯಾರಟ್ ಹಳದಿ ವಜ್ರ, 229.52 ಕ್ಯಾರಟ್ ಬಿಳಿ ವಜ್ರ, 18 ಕಾರಟ್ ಗುಲಾಬಿ ಚಿನ್ನದ ಕವಲುಗಳಿಂದ ಮಾಡಲ್ಪಟ್ಟಿದೆ. ಈ ನೆಕ್ಲೇಸ್ ಅನ್ನು 2022ರಲ್ಲಿ ಸೋಥೆಬೈಸ್ ಜ್ಯುವೆಲ್ಲರಿ ಕಂಪನಿಯಲ್ಲಿ ಪ್ರದರ್ಶಿಸಲಾಯಿತು.
ಖಾಸಗಿ ಜೆಟ್ ಉಡುಗೊರೆ
2007ರಲ್ಲಿ ನೀತಾ ಅಂಬಾನಿ ಅವರು 44ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಪತಿ ಮುಕೇಶ್ ಅಂಬಾನಿ ಅವರು 240 ಕೋಟಿ ರೂ. ಮೌಲ್ಯದ ಏರ್ಬಸ್ (A319) ಐಷಾರಾಮಿ ಖಾಸಗಿ ಜೆಟ್ ಅನ್ನು ನೀತಾ ಅಂಬಾನಿ ಅವರಿಗೆ ಉಡುಗೊರೆಯಾಗಿ ನೀಡಿದರು.
ದುಬಾರಿ ಕಾರು ಗಿಫ್ಟ್
ಮುಕೇಶ್ ಅಂಬಾನಿ ಅವರು ಇತ್ತೀಚೆಗಷ್ಟೇ ನೀತಾ ಅಂಬಾನಿ ಅವರಿಗೆ 10 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ದೀಪಾವಳಿ ವಿಶೇಷವಾಗಿ ಈ ಉಡುಗೊರೆ ನೀಡಿದ್ದಾರೆ ಎಂದು ವರದಿಯಾಗಿದೆ. ನೀತಾ ಅಂಬಾನಿಯವರ ಈ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರಾಗಿದೆ.
ಪ್ಯಾಂಥೆರೆ ಡಿ ಕಾರ್ಟಿಯರ್ ಬ್ರೂಚ್ ಉಡುಗೊರೆ
2023ರ ಜನವರಿ 19ರಂದು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ತಮ್ಮ ದೀರ್ಘಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜತೆ ಮುಂಬೈನಲ್ಲಿರುವ ತಮ್ಮ ಅಂಟಿಲಿಯಾ ನಿವಾಸದಲ್ಲಿ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಂದರ್ಭದಲ್ಲಿ, ಸಹೋದರ ಆಕಾಶ್ ಅಂಬಾನಿ ಅವರು ಅನಂತ್ ಅಂಬಾನಿಗೆ 13,218,876 ರೂ ಮೌಲ್ಯದ 18 ಕ್ಯಾರಟ್ ಪ್ಯಾಂಥೆರೆ ಡಿ ಕಾರ್ಟಿಯರ್ ಬ್ರೂಚ್ ಅನ್ನು ಉಡುಗೊರೆಯಾಗಿ ನೀಡಿದರು.
ಇದೇ ಸಮಯದಲ್ಲಿ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗನಿಗೆ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಕಾರನ್ನು ಉಡುಗೊರೆಯಾಗಿ ನೀಡಿದರು. ಈ ಐಷಾರಾಮಿ ಕಾರಿನ ಬೆಲೆ 4.5 ಕೋಟಿ ರೂಪಾಯಿ ಎಂದು ವರದಿಗಳು ತಿಳಿಸಿವೆ. ಹೀಗಾಗಿ ಸಾಕಷ್ಟು ಉಡುಗೊರೆಗಳನ್ನು ಅಂಬಾನಿ ಕುಟುಂಬ ವಿನಿಮಯ ಮಾಡಿಕೊಂಡಿದೆ. ಲೆಕ್ಕ ಹಾಕುತ್ತಾ ಹೋದರೆ ಮುಗಿಯುವುದೇ ಇಲ್ಲ. ಅಷ್ಟೊಂದು ದುಬಾರಿ ಉಡುಗೊರೆಗಳನ್ನು ಅಂಬಾನಿ ಕುಟುಂಬ ಪರಸ್ಪರ ವಿನಿಮಯ ಮಾಡಿಕೊಂಡು ಬರುತ್ತಲೇ ಇದೆ. (ಏಜೆನ್ಸೀಸ್)
ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ತಿರುಪತಿ ಬಾಲಾಜಿ ದರ್ಶನ ಪಡೆದ ಜಾಹ್ನವಿ ಕಪೂರ್!