More

    ನಿರ್ಭಯಾ ಪ್ರಕರಣ: ಅಪರಾಧಿ ಪವನ್​ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್​ ಅರ್ಜಿ ವಜಾ, ನಿಗದಿಯಂತೆ ನಾಳೆ ಗಲ್ಲುಶಿಕ್ಷೆ ಆಗುತ್ತಾ?

    ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್​ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್​ ಅರ್ಜಿಯನ್ನು ಸುಪ್ರೀಂಕೋರ್ಟ್​ ಸೋಮವಾರ ತಿರಸ್ಕರಿಸಿದೆ.

    ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಅಪರಾಧಿ ಪವನ್​ ಗುಪ್ತ ಶುಕ್ರವಾರ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದ. ಅಪರಾಧ ನಡೆದಂತಹ ಸಮಯದಲ್ಲಿ ಶಾಲಾ ಪ್ರಮಾಣ ಪತ್ರದ ಪ್ರಕಾರ ನನಗೆ 16 ವರ್ಷ 2 ತಿಂಗಳು ವಯಸ್ಸಾಗಿತ್ತು. ಹೀಗಾಗಿ ಬಾಲಾಪರಾಧಿ ಅಡಿಯನ್ನು ನನ್ನನ್ನು ಪರಿಗಣಿಸಿ ಎಂದು ಪವನ್​ ಕೋರಿದ್ದ.

    ಮಾರ್ಚ್​ 3ಕ್ಕೆ ಮರಣದಂಡನೆ
    ಈಗಾಗಲೇ ಗಲ್ಲುಶಿಕ್ಷೆ ಎರಡು ಬಾರಿ ಮುಂದಕ್ಕೆ ಹೋಗಿದ್ದು, ಫೆ.17ರಂದು ವಿಚಾರಣಾಧೀನ ನ್ಯಾಯಾಲಯ ಹೊಸದಾಗಿ ಡೆತ್​ ವಾರೆಂಟ್​ ಅನ್ನು ವಿತರಿಸಿದೆ. ಅದರನ್ವಯ ಮಾರ್ಚ್​ 3ರಂದು ಪವನ್​ ಗುಪ್ತಾ(26) ಸೇರಿ ಉಳಿದ ಮೂವರು ಅಪರಾಧಿಗಳಾದ​ ಮುಕೇಶ್​ ಕುಮಾರ್​ ಸಿಂಗ್(32)​, ವಿನಯ್​ ಕುಮಾರ್​ ಶರ್ಮ(26) ಮತ್ತು ಅಕ್ಷಯ್​ ಕುಮಾರ್(31)​ಗೆ ಗಲ್ಲು ಶಿಕ್ಷೆ ನಿಗದಿಯಾಗಿದೆ.

    ಕ್ಷಮಾಧಾನ ಕೋರಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಮುಕೇಶ್​, ವಿನಯ್​ ಮತ್ತು ಅಕ್ಷಯ್ ಸಲ್ಲಿಸಿದ್ದ ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಉಳಿದಂತೆ ಪವನ್​ ಗುಪ್ತಾ ಕ್ಷಮಾಧಾನ ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಏನೇ ಕಾನೂನು ಪ್ರಕ್ರಿಯೆ ಇದ್ದರೂ ಒಂದು ವಾರದೊಳಗೆ ಮುಗಿಸಿಕೊಳ್ಳಬೇಕೆಂಬ ಸುಪ್ರಿಂಕೋರ್ಟ್​ ಗಡುವು ಮುಗಿದು ಹೋಗಿದೆ. ಹೀಗಾಗಿ ನಾಳೆ ಅಪರಾಧಿಗಳಿಗೆ ಗಲ್ಲುಶಿಕ್ಷೆ ಕಾಯಂ ಆಗಿದೆ. ​

    ಗಲ್ಲುಶಿಕ್ಷೆ ಮತ್ತೆ ಮುಂದಕ್ಕೆ ಹೋಗುತ್ತಾ?
    ಕಳೆದ ಮಂಗಳವಾರ ನ್ಯಾಯಮೂರ್ತಿ ಆರ್​. ಭಾನುಮತಿ, ಅಶೋಕ್​ ಭೂಷಣ್​ ಮತ್ತು ನವೀನ್​ ಸಿನ್ಹಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ನಿರ್ಭಯಾ ಪಾಲಕರು ಕೂಡ ಇದನ್ನೇ ಪ್ರಶ್ನಿಸಿ ಅರ್ಜಿ ದಾಖಲಿಸಿದ್ದಾರೆ.

    ಈ ಸಂಬಂಧ ಸುಪ್ರೀಂಕೋರ್ಟ್​ ಮಾ.5 ರಂದು ವಿಚಾರಣೆ ನಡೆಸುವುದಾಗಿ ಹೇಳಿದ್ದು, ಈಗಾಗಲೇ ಮಾ.3 ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಹೊರಡಿಸಿರುವ ವಾರಂಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಪ್ರಕರಣವೇನು?
    23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು 2012r ಡಿಸೆಂಬರ್​ 16ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು.

    ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts