More

    ಮಲೆನಾಡಲ್ಲಿ ಮಳೆಗೆ ಒಂಬತ್ತು ಮನೆ ಪೂರ್ಣ ಕುಸಿತ

    ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಒಂಬತ್ತು ಮನೆಗಳು ಸಂಪೂರ್ಣವಾಗಿ ಕುಸಿದಿದ್ದು 20ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಮನೆಗಳ ಗೋಡೆ ಕುಸಿತದ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆಯಲಾಗುತ್ತಿದ್ದು ಸಂತ್ರಸ್ತರಿಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
    ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಈಗಾಗಲೇ ಆರಂಭವಾಗಿದೆ. ಮೆಕ್ಕೆಜೋಳ ಸೇರಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಬೀಜ ಮತ್ತು ರಸಗೊಬ್ಬರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನಿ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದರು.
    ಕಳೆದ ಏಳು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ವಾರದಲ್ಲಿ ವಾಡಿಕೆ ಮಳೆಗಿಂತ 10 ಮಿ.ಮೀ. ಮಳೆ ಹೆಚ್ಚಾಗಿದೆ. ವಾಡಿಕೆ ಮಳೆಯ ಪ್ರಕಾರ ಜಿಲ್ಲೆಯಲ್ಲಿ 173 ಮಿಮಿ ಮಳೆ ಆಗಬೇಕಿತ್ತು. ವಾರದಿಂದ 185 ಮಿ.ಮೀ. ಮಳೆಯಾಗಿದೆ. ಮುಂದಿನ ವಾರವೂ ಹವಾಮಾನ ಇಲಾಖೆ ಉತ್ತಮ ಮಳೆಯಾಗಲಿದೆ ಎಂದು ವರದಿ ನೀಡಿದೆ. ಹಾಗಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
    ತುಂಗಾ ನದಿಗೆ ಕಳೆದ ವರ್ಷ ಈ ಬಾರಿ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಈ ಬಾರಿ 22 ಸಾವಿರ ಕ್ಯೂಸೆಕ್ ನೀರು ಹರಿದುಬಂದಿರುವುದು ಇದುವರೆಗೆ ದಾಖಲಾಗಿದೆ. ಈಗ ನೀರಿನ ಪ್ರಮಾಣ ಕೊಂಚ ತಗ್ಗಿದೆ. ನದಿಗೆ 13 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಲಿಂಗನಮಕ್ಕಿಯಲ್ಲಿ 22,157 ಕ್ಯೂಸೆಕ್ ನೀರು ಒಳಹರಿವಿದೆ. ಕಳೆದ ಬಾರಿ ಈ ದಿನಕ್ಕೆ ನೀರಿನ ಮಟ್ಟ 1,772.60 ಅಡಿಯಷ್ಟಿತ್ತು. ಹಾಲಿ 1,748 ಅಡಿ ನೀರು ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts