ರಾಜಕೀಯದಿಂದ ಹಿಂದೆ ಸರಿದ​ ರಜಿನಿ ನಿರ್ಧಾರದಿಂದ ಮನನೊಂದು ಅಭಿಮಾನಿ ಸಾವು!

Rajini
Published on

ಚೆನ್ನೈ: ರಾಜಕೀಯದಿಂದ ಹಿಂದೆ ಸರಿದ ಸೂಪರ್​ಸ್ಟಾರ್​ ರಜಿನಿಕಾಂತ್​ ನಿರ್ಧಾರದಿಂದ ಮನನೊಂದು ಅಭಿಮಾನಿಯೊಬ್ಬ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ವಿಲ್ಲುಪುರಂನ ಪನಂಪಟ್ಟುದಲ್ಲಿ ನಡೆದಿದೆ.

ರಾಜ್‌ಕುಮಾರ್ ಮೃತ ರಜಿನಿಕಾಂತ್​ ಅಭಿಮಾನಿ. ರಾಜಕೀಯದಿಂದ ಹಿಂದೆ ಸರಿಯುವುದಾಗಿ ರಜಿನಿ ಘೋಷಣೆ ಮಾಡಿದಾಗಿನಿಂದ​ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಾಜ್​ಕುಮಾರ್​, ಸ್ನೇಹಿತರ ಜತೆ ಮದ್ಯ ಸೇವಿಸಿದ ನಂತರ ಮಲಗಲು ಹೋದವ ಮತ್ತೇ ಮೇಲೇಳಲೇ ಇಲ್ಲ. ಅಲ್ಲದೆ, ಫೇಸ್​ಬುಕ್​ನಲ್ಲೂ ನನ್ನ ಜೀವನ ಕೊನೆಯ ದಿನವೆಂದು ಬರದುಕೊಂಡಿರುವುದು ತಿಳಿದುಬಂದಿದೆ.

ಇನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜಿನಿ, ರಾಜಕಾರಣದ ಹೊರತಾಗಿ ಜನಸೇವೆ ಮಾಡುವೆ. ಆರೋಗ್ಯ ಸ್ಥಿತಿ ಸರಿಯಾಗಿಲ್ಲದ ಕಾರಣ ಮತ್ತು ಕೋವಿಡ್ ಪರಿಸ್ಥಿತಿಯ ಕಾರಣ ಸದ್ಯ ಚುನಾವಣಾ ಕಣಕ್ಕೆ ಇಳಿದು ಕೆಲಸಮಾಡಲಾರೆ. ಹೀಗಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ಅಣ್ಣಾತ್ತೆ ಚಿತ್ರೀಕರಣದ ಸಂದರ್ಭದಲ್ಲಿ ರಕ್ತದೊತ್ತಡದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಇದ್ದು ಚಿಕಿತ್ಸೆ ಪಡೆದಿದ್ದರು. ಬಿಡುಗಡೆಯಾಗುವ ವೇಳೆ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಡಾಕ್ಟರ್ ಸಲಹೆ ನೀಡಿದ್ದರು ಎಂಬುದನ್ನು ಅವರು ಹೇಳಿದ್ದರು.

ರಜಿನಿಕಾಂತ್​ ಅಭಿಮಾನಿಯ ಸಾವಿನ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net