

ಲಖನೌ: ಸೋನಾಭದ್ರಾದಲ್ಲಿ ಸರ್ಕಾರ ಚಿನ್ನದ ನಿಕ್ಷೇಪಕ್ಕಿಂತಲೂ ಹೆಚ್ಚಿನದನ್ನು, ಅಮೂಲ್ಯವಾದುನ್ನು ನಿರೀಕ್ಷಿಸುತ್ತಿದೆ ಸರಕಾರ. ಸೋನಾಭದ್ರಾದ ಎರಡು ಗ್ರಾಮಗಳ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಟನ್ ಚಿನ್ನದ ನಿಕ್ಷೇಪ ಖಾತ್ರಿಯಾಗಿದ್ದು, ಈ ಬಗ್ಗೆ ಜನರ ಗಮನಸೆಳೆದಿರುವಾಗಲೇ ಯುರೇನಿಯಂ ನಿಕ್ಷೇಪದ ವಿಚಾರ ಬಹಿರಂಗವಾಗಿದೆ.
ಸೋನಾಭದ್ರಾದ ಲಿಲಾಸಿ-ಸಂಗೋಬಂಧ್ ದಾರಿ ಮಧ್ಯೆ ಸಿಗುವ ಕುದ್ರಿ ಬೆಟ್ಟದಲ್ಲಿ ಯುರೇನಿಯಂ ನಿಕ್ಷೇಪ ಇದೆ ಎಂಬ ಮಾಹಿತಿ ಇದೆ. ಇದಕ್ಕೆ ಸಂಬಂಧಿಸಿ ಬೆಟ್ಟದ ಮೂರು ಪ್ರದೇಶಗಳಲ್ಲಿ ಉತ್ಖನನ ಆರಂಭವಾಗಿದೆ. ಇದಕ್ಕೆ ಹೊರತಾಗಿ ಮೂರು ರಾಜ್ಯಗಳ ಗಡಿಭಾಗದ ಜಿಲ್ಲೆಗಳಲ್ಲೂ ಈ ಬಗ್ಗೆ ಸರ್ವೇಕ್ಷಣೆ ನಡೆದಿದೆ.
ದೆಹಲಿಯಲ್ಲಿರುವ ಸೆಂಟ್ರಲ್ ಅಟೋಮಿಕ್ ಎನರ್ಜಿ ಡಿಪಾರ್ಟ್ಮೆಂಟ್ನ ತಂಡ ಛತ್ತೀಸ್ಗಢ, ಮಧ್ಯಪ್ರದೇಶ, ಬಿಹಾರ ರಾಜ್ಯಗಳಲ್ಲಿ ಈ ಸೋನಾಭದ್ರ ಜಿಲ್ಲೆಯ ನೆರೆಭಾಗದಲ್ಲಿ ಯುರೇನಿಯಂ ಪತ್ತೆಗೆ ಶೋಧಕಾರ್ಯ ಮುಂದುವರಿಸಿದೆ. ಇದಕ್ಕಾಗಿ ಈ ತಂಡ ಹೆಲಿಕಾಪ್ಟರ್ನಲ್ಲಿ ಏರೋ ಮ್ಯಾಗ್ನೆಟಿಕ್ ಸಿಸ್ಟಂ ಬಳಕೆ ಮಾಡಿದ್ದು, ಇದರಲ್ಲಿ ಸಿಕ್ಕ ಮಾಹಿತಿ ಪ್ರಕಾರ ಕುದ್ರಿಯಲ್ಲಿ 100 ಟನ್ ಯುರೇನಿಯಂ ನಿಕ್ಷೇಪವನ್ನು ನಿರೀಕ್ಷಿಸಲಾಗುತ್ತಿದೆ. ಯುರೇನಿಯಂ ಒಂದು ಕಿಲೋ ಇದ್ದರೆ 24 ಮೆಗಾವಾಟ್ ವಿದ್ಯುತ್ ಉತ್ಪಾದಿಸಬಹುದು.
ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ ಬೆಟ್ಟ: ಒಂದೊಮ್ಮೆ ಇಲ್ಲಿ ಚಿನ್ನ, ಯುರೇನಿಯಂ ಮತ್ತು ಇತರೆ ಖನಿಜಗಳ ನಿಕ್ಷೇಪ ಉತ್ಖನನ ಶುರುವಾದರೆ ಕುದ್ರಿ ಬೆಟ್ಟ ಅಸ್ತಿತ್ವ ಕಳೆದುಕೊಳ್ಳಲಿದೆ. ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಸ್ಥಳಾಂತರಿಸಬಹುದು. ಹಲವು ರೀತಿಯ ಆತಂಕ ಈಗ ಅಲ್ಲಿನ ಜನರನ್ನು ಕಾಡತೊಡಗಿದೆ. (ಏಜೆನ್ಸೀಸ್)