ಬಿಗ್​ಬಾಸ್​ ಬೆಡಗಿ ಚೈತ್ರಾ ಕೊಟ್ಟೂರು ಮದ್ವೆಯಾದ ಮೊದಲ ರಾತ್ರಿಯೇ ಗಲಾಟೆ; ನಂಗೆ ಅವಳು ಬೇಡ ಅಂತ ಗಂಡ, ಅವನೇ ಬೇಕು ಎಂದು ಚೈತ್ರಾ ಪಟ್ಟು!

chaityra
Published on

ಕೋಲಾರ: ಬಿಗ್​ಬಾಸ್​ ಬೆಡಗಿ ಚೈತ್ರಾ ಕೊಟ್ಟೂರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸದ್ದಿಲ್ಲದೆ ಸರಳವಾಗಿ ಮದುವೆಯಾಗಿದ್ದು, ಮದುವೆಯಾದ ಮೊದಲ ರಾತ್ರಿಯೇ ಗಲಾಟೆ-ಗದ್ದಲ ಉಂಟಾಗಿ, ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

ಬಿಗ್​ಬಾಸ್​ ಸೀಸನ್​-7ರಲ್ಲಿ ಸ್ಪರ್ಧಿಸಿದ್ದ ಚೈತ್ರಾ ಕೊಟ್ಟೂರು ಮಂಡ್ಯ ಮೂಲದ ನಾಗಾರ್ಜುನ್ ಎಂಬವರ ಜತೆ ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಇದೀಗ ಇಬ್ಬರೂ ಕೋಲಾರದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮದುವೆ ವಿಷಯವೇ ವಿವಾದಕ್ಕೀಡಾಗಿದೆ.

ನಾಗಾರ್ಜುನ್​ಗೆ ಚೈತ್ರಾ ಜತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಆದರೆ ಕೆಲವೊಂದು ಸಂಘಟನೆಗಳವರು ಸೇರಿ ನಾಗಾರ್ಜುನ್ ಅವರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಬಲವಂತದಲ್ಲಿ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. ಸಂಘಟನೆಗಳ ಬೆದರಿಕೆಗೆ ಮಣಿದ ನಾಗಾರ್ಜುನ್ ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿದ್ದಾರೆ ಎನ್ನಲಾಗಿದೆ.

ನಾಗಾರ್ಜುನ್ ಮನೆಯವರಿಗೂ ಈ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ಅವರು ಇಂದು ಕೋಲಾರದ ಕುರುಬರಪೇಟೆಯಲ್ಲಿರುವ ಚೈತ್ರಾ ಮನೆಗೆ ಬಂದು ತರಾಟೆಗೆ ತೆಗೆದುಕೊಂಡಿದ್ದರಿಂದ ಮದುವೆ ಭಿನ್ನಾಭಿಪ್ರಾಯದ ವಿಚಾರ ಪೊಲೀಸ್ ಠಾಣೆಗೂ ತಲುಪಿದೆ. ನಾಗಾರ್ಜುನ್ ಕುಟುಂಬದವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೀಗಾಗಿ ಪೊಲೀಸರು ಚೈತ್ರಾ-ನಾಗಾರ್ಜುನ್ ದಂಪತಿಯನ್ನು ಠಾಣೆಗೆ ಕರೆಸಿದ್ದಾರೆ. ಅಲ್ಲಿ ನಾಗಾರ್ಜುನ್​ ಈ ಮದುವೆ ಇಷ್ಟವಿಲ್ಲ, ನಾನು ಚೈತ್ರಾ ಜತೆ ಬಾಳುವುದಿಲ್ಲ ಎಂದು ಹೇಳುತ್ತಿದ್ದರೆ, ನನಗೆ ನಾಗಾರ್ಜುನ್ ಇಷ್ಟ, ನಾನು ಅವನ ಜತೆಗೇ ಇರುತ್ತೇನೆ ಎಂದು ಚೈತ್ರಾ ಪಟ್ಟು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net