More

    ಗಾಂಧಿ ಭದ್ರಕೋಟೆಯಲ್ಲಿ ಹೊಸಬರ ಹಣಾಹಣಿ; ಬಿಜೆಪಿ ಮಣಿಸಲು ಕಾಂಗ್ರೆಸ್​ ಕಸರತ್ತು

    ಪಿಲಿಭಿತ್: ಉತ್ತರಪ್ರದೇಶದ ‘ಪಿಲಿಭಿತ್ ಹುಲಿ ಸಂರಕ್ಷಣಾ ಪ್ರದೇಶ’ವನ್ನು ಒಳಗೊಂಡಿರುವ ಪಿಲಿಭಿತ್ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಹಳೇ ಹುಲಿಗಳಿಲ್ಲದ ಕಾರಣ ಹೊಸಬರ ಮಧ್ಯೆ ಹಣಾಹಣಿ ಏರ್ಪಟ್ಟಿದೆ. ಹೆಚ್ಚೂ ಕಡಿಮೆ ಕಳೆದ ಮೂರು ದಶಕಗಳಿಂದ ಗಾಂಧಿ ಕುಟುಂಬದ ಭದ್ರಕೋಟೆ ಆಗಿರುವ ಈ ಕ್ಷೇತ್ರದಲ್ಲಿ ಈ ಸಲ ಗಾಂಧಿ ಕುಟುಂಬದ ಪ್ರತಿನಿಧಿ ಇಲ್ಲದೇ ಚುನಾವಣೆ ನಡೆಯುತ್ತಿದೆ. ಹಾಲಿ ಸಂಸದರಾಗಿರುವ ವರುಣ್ ಗಾಂಧಿಗೆ ಈ ಸಲ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಸಚಿವ ಜಿತಿನ್ ಪ್ರಸಾದ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಭಾಗವತ್ ಶರಣ್ ಗಂಗ್ವಾರ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಜಿತಿನ್ ಮೂರು ವರ್ಷಗಳ ಹಿಂದಷ್ಟೇ ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದು ಸಚಿವರಾಗಿರುವವರು. ಇನ್ನೊಂದೆಡೆ ಪಿಲಿಭಿತ್​ನಿಂದ 40 ಕಿ.ಮೀ. ದೂರದ ಬಲ್ರಾಂಪುರ ಗ್ರಾಮದ ಭಾಗವತ್ ಶರಣ್ ಬರೇಲಿಯ ನವಾಬ್​ಗಂಜ್ ಕ್ಷೇತ್ರದಲ್ಲಿ ಐದು ಸಲ ಗೆದ್ದು ಶಾಸಕರಾಗಿದ್ದರೂ ಪಿಲಿಭಿತ್​ಗೆ

    ಕ್ಷೇತ್ರಕ್ಕೆ ಹೊಸಬರು. ಅದಾಗ್ಯೂ ಅವರು ‘ನಾನು ಐದು ಅವಧಿಗೆ ಶಾಸಕನಾಗಿದ್ದು, ಉತ್ತರಪ್ರದೇಶ ರಾಜ್ಯ ಸರ್ಕಾರದಲ್ಲಿ ಎರಡು ಸಲ ಸಚಿವನಾಗಿದ್ದೇನೆ. ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನ್ನ ಕೆಲಸದ ಬಗ್ಗೆ ನೀವು ಇಲ್ಲಿ ಕೇಳಬಹುದು. ನನ್ನ ಕುರಿತು ಯಾವುದೇ ವಿವಾದಗಳೂ ಇಲ್ಲ’ ಎಂಬುದನ್ನೇ ಮುಂದಿಟ್ಟುಕೊಂಡು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

    ‘ಕ್ಷೇತ್ರಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ, ಪಿಲಿಭಿತ್​ನ ಅಭಿವೃದ್ಧಿಗಾಗಿ ಯಾವುದೇ ಪ್ರಯತ್ನವನ್ನೂ ತಪ್ಪಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ನಾನು ಅವರ ದೂತನಂತೆ ನಿಮ್ಮ ಮುಂದಿದ್ದೇನೆ’ ಎನ್ನುವ ಜಿತಿನ್, ಮೋದಿಯ ವರ್ಚಸ್ಸಿನಲ್ಲೇ ಗೆಲ್ಲುವ ಕನಸಿನಲ್ಲಿದ್ದಾರೆ. ‘ದಶಕಗಳಿಂದ ಇಲ್ಲಿ ಪಕ್ಷ ಗೆಲ್ಲುತ್ತಿದೆ. ಪಕ್ಷದ ವರಿಷ್ಠರು ಕಠಿಣ ಆಯ್ಕೆ ಪ್ರಕ್ರಿಯೆ ಮೂಲಕ ಅಭ್ಯರ್ಥಿಯನ್ನು ಆರಿಸಿದ್ದಾರೆ. ನಾವು ಶಿಸ್ತಿನ ಸಿಪಾಯಿಗಳು, ಪಕ್ಷ ನಿರ್ಧರಿಸಿದಾಗ ಎಲ್ಲರೂ ಅನುಸರಿಸುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿಖ್ ಪ್ರಾಬಲ್ಯದ ಕೃಷಿ ಪ್ರಧಾನ ಕ್ಷೇತ್ರ: ಪಿಲಿಭಿತ್ ಕೃಷಿ ಪ್ರಧಾನ ಕ್ಷೇತ್ರವಾಗಿದ್ದು, ಇಲ್ಲಿನ ರಸ್ತೆಗಳಲ್ಲಿ ಬೇರೆ ವಾಹನಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾ್ಯಕ್ಟರ್​ಗಳು ಕಾಣಿಸುತ್ತವೆ. ಪಿಲಿಭಿತ್ ಹುಲಿ ಸಂರಕ್ಷಣಾ ಪ್ರದೇಶ ಇರುವುದರಿಂದ ಇಲ್ಲಿನ ಕೃಷಿಕರಿಗೆ ಹುಲಿಗಳ ಆತಂಕ ನಿತ್ಯದ ಸಮಸ್ಯೆ ಆಗಿದೆ. ಇಲ್ಲಿ ಸಿಖ್ ಸಮುದಾಯ ಪ್ರಮುಖವಾಗಿದ್ದು, ಅವರಲ್ಲಿ ಕೃಷಿಕರು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಅವರು ನಿರ್ಣಾಯಕರಾಗಿ ಪರಿಣಮಿಸಲಿದ್ದಾರೆ. ಪಿಲಿಭಿತ್ ಭಾಗವಾಗಿರುವ ಟೆರೈ ಪ್ರದೇಶ ಸಾಕಷ್ಟು ಸಿಖ್ ಜನಸಂಖ್ಯೆ ಹೊಂದಿದ್ದು, ಅವರಲ್ಲಿ ಬಹಳಷ್ಟು ಮಂದಿ ವಿಭಜನೆ ನಂತರ ಪುನರ್ವಸತಿ ಪಡೆದ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 1984ರ ಗಲಭೆಗಳನ್ನು ಇಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು ಹಾಗೂ ಹಿಂಸಾಚಾರದ ಹಿಂದಿನ ಪಕ್ಷವಾದ ಕಾಂಗ್ರೆಸ್ ಜತೆ ಎಸ್​ಪಿ ಹೇಗೆ ಮೈತ್ರಿ ಮಾಡಿಕೊಂಡಿದೆ ಎಂಬುದನ್ನೂ ಹೇಳಿದ್ದರು. ಇದು ಕೂಡ ಈ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

    ಗಾಂಧಿ ಕುಟುಂಬದ ಭದ್ರಕೋಟೆ: ಪಿಲಿಭಿತ್ ಕ್ಷೇತ್ರವು 1996ರಿಂದಲೂ ಗಾಂಧಿ ಕುಟುಂಬದವರನ್ನು ಗೆಲ್ಲಿಸುವ ಮೂಲಕ ಅವರ ಭದ್ರಕೋಟೆ ಆಗಿ ಪರಿಣಮಿಸಿದೆ. ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಅಥವಾ ಅವರ ಪುತ್ರ ವರುಣ್ ಗಾಂಧಿ ಇಲ್ಲಿ ಸ್ಪರ್ಧಿಸಿ ಗೆದ್ದಿದ್ದು, ಮೇನಕಾ ಗಾಂಧಿಗೆ ಬಿಜೆಪಿ ಈ ಸಲ ಉತ್ತರಪ್ರದೇಶದ ಸುಲ್ತಾನ್​ಪುರ ಕ್ಷೇತ್ರದ ಟಿಕೆಟ್ ನೀಡಿದೆ. ಆದರೆ ಪುತ್ರ, ಹಾಲಿ ಸಂಸದ ವರುಣ್ ಗಾಂಧಿ ಈ ಸಲ ಆಕಾಂಕ್ಷಿ ಆಗಿದ್ದರೂ ಅವರಿಗೆ ಟಿಕೆಟ್ ಲಭಿಸಿಲ್ಲ. ಹೀಗಾಗಿ ಪ್ರತಿಷ್ಠಿತರ ಕಣ ಎನಿಸಿರುವ ಗಾಂಧಿ ಕುಟುಂಬದ ಈ ಭದ್ರಕೋಟೆಯಲ್ಲಿ ಈ ಸಲ ಹೊಸಬರ ಹಣಾಹಣಿಯಷ್ಟೇ ಕಾಣಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts