More

    ಹೊಸವರ್ಷದ ಹರ್ಷ: ಕೋಟೆ, ಆಡುಮಲ್ಲೇಶ್ವರ, ಮುರುಘಾ ವನದಲ್ಲಿ ಜನದಟ್ಟಣೆ

    ಚಿತ್ರದುರ್ಗ: ಹೊಸ ವರ್ಷದ ಮೊದಲ ದಿನ ಶನಿವಾರ ಕೋಟೆ, ಆಡುಮಲ್ಲೇಶರ ಮೃಗಾಲಯ, ಚಂದ್ರವಳ್ಳಿ ಇತ್ಯಾದಿ ನಗರದ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಜನರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.

    ಯುವಜನರು, ಕುಟುಂಬ ಸದಸ್ಯರು, ಪ್ರವಾಸಿಗರಿಂದಾಗಿ ಕೋಟೆ ಬಳಿ ಜನ ಜಾತ್ರೆ ನೆರೆದಿತ್ತು. ವಿಶೇಷವಾಗಿ ಯುವ ಜನರ ದಂಡು ಕೋಟೆಯಲ್ಲಿ ಕುಣಿದು, ಕುಪ್ಪಳಿಸಿ ನಲಿದಾಡಿತು.

    ಕೇಕ್ ಕತ್ತರಿಸಿ ಪರಸ್ಪರ ಶುಭಾಶಯ ಹೇಳುವುದು ಸಾಮಾನ್ಯವಾಗಿತ್ತು. ಯುವಕರ ಸಂಭ್ರಕ್ಕೆ ಅಡ್ಡಿ ಇರಲಿಲ್ಲ. ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೋಟೆಗೆ ಭೇಟಿ ನೀಡಿದ್ದರು. ಎಂಟು ಸಾವಿರಕ್ಕೂ ಅಧಿಕ ಜನರು ಕೋಟೆಗೆ ಭೇಟಿ ನೀಡಿ ಐತಿಹಾಸಿಕ ಸ್ಥಳಗಳ ಸೊಬಗನ್ನು ಸವಿದರು. ಮೇಲುದರ್ಗ ಧಾರ್ಮಿಕ ಸ್ಥಳಗಳಲ್ಲಿ ಶ್ರದ್ಧಾ ಭಕ್ತಿ ಮೆರೆದರು.

    ಮುರುಘಾ ಮಠಕ್ಕೆ 8ರಿಂದ 10, ಆಡುಮಲ್ಲೇಶ್ವರ-4, ಕೋಟೆಗೆ 8 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರು.

    ಕೋಟೆ ಪ್ರವೇಶದ್ವಾರದಲ್ಲಿ ನೂಕುನುಗ್ಗಲು ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್ ನಿರ್ಮಿಸಲಾಗಿತ್ತು. ಆದರೆ, ವಾಹನ ನಿಲುಗಡೆಗೆ ಸವಾರರು ಪರದಾಡಿದರು. ಜನರಿಂದಾಗಿ ಕೋಟೆ ರಸ್ತೆಯಲ್ಲಿ ಸಂಚಾರ, ಜನ ದಟ್ಟಣೆ ಅಧಿಕವಿತ್ತು. ನಗರಕ್ಕೆ ಹೊಂದಿಕೊಂಡಿರುವ ಆಡುಮಲ್ಲೇಶ್ವರ ಪ್ರವಾಸಿ ತಾಣಕ್ಕೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು.

    ನಗರದ ಪ್ರಮುಖ ದೇವಾಲಯಗಳಿಗೆ ಜನರು ಭೇಟಿ ನೀಡಿ ದೇವರ ದರ್ಶನ ಪಡೆದರು. ಹೊಸ ವರ್ಷಾರಂಭದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಮೆದೇಹಳ್ಳಿ ರಸ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಅಭಿಷೇಕ, ಪೂಜೆಯನ್ನು ನೆರವೇರಿಸುವುದರೊಂದಿಗೆ ಪ್ರಸಾದ ವಿನಿಯೋಗಿಸಲಾಯಿತು. ಮೇಲುದುರ್ಗ ಏಕನಾಥೇಶ್ವರಿ ದೇವಿ, ಬರಗೇರಮ್ಮ, ನಗರ ಠಾಣೆ ಕಣಿವೆಮಾರಮ್ಮ ಸೇರಿ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts