More

    ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ: ಹಾಡು, ಕುಣಿತ, ಪಾರ್ಟಿಗಳಲ್ಲಿ ಕಳೆದು ಹೋದ ಜನತೆ

    ದಾವಣಗೆರೆ: ಜಿಲ್ಲೆಯ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಹಾಡು, ಕುಣಿತ, ಪಾರ್ಟಿಗಳಲ್ಲಿ ಕಳೆದು ಹೋದರು. ಮದ್ಯದ ಮಾರಾಟವಂತೂ ಜೋರಾಗಿತ್ತು. ಮೂಲಗಳ ಪ್ರಕಾರ ಒಂದೇ ದಿನ ಜಿಲ್ಲೆಯಲ್ಲಿ 3-4 ಕೋಟಿ ರೂ. ಮದ್ಯದ ವಹಿವಾಟು ನಡೆದಿದೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 10-15ರಷ್ಟು ವಹಿವಾಟು ಹೆಚ್ಚಾಗಿದೆ. 2019 ಅನ್ನು ಸ್ವಾಗತಿಸಿದಾಗ 7 ಸಾವಿರ ಪೆಟ್ಟಿಗೆಯಷ್ಟು ಮದ್ಯ ಖರ್ಚಾಗಿತ್ತು. ಈ ಬಾರಿ 8 ಸಾವಿರ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದೆಯಂತೆ.

    ಜಿಲ್ಲೆಯಲ್ಲಿ 270ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ಆದರೆ, ಹೊಸ ವರ್ಷದ ಆಚರಣೆಗೆ ನಗರ ಪ್ರದೇಶಗಳಲ್ಲಿರುವ 100 ಕೌಂಟರ್‌ಗಳಲ್ಲಿ ಹೆಚ್ಚು ವ್ಯಾಪಾರ ನಡೆಯುತ್ತದೆಯಂತೆ. ಅದರಲ್ಲೂ ವಿಸ್ಕಿ ಮತ್ತು ಬಿಯರ್‌ಗೆ ಬೇಡಿಕೆ ಜಾಸ್ತಿ. ಮಂಗಳವಾರ ಒಂದೇ ದಿನ 2 ಸಾವಿರ ಪೆಟ್ಟಿಗೆಗಳಷ್ಟು ಮದ್ಯ, 3 ಸಾವಿರ ಪೆಟ್ಟಿಗೆ ಬಿಯರ್ ಹೆಚ್ಚುವರಿ ಮಾರಾಟವಾಗಿದೆ.

    ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರೆಸ್ಟೋರೆಂಟ್, ಡಾಬಾಗಳು ಸಂಪೂರ್ಣ ಭರ್ತಿಯಾಗಿದ್ದವು. ನಿತ್ಯ ಬಳಕೆಗಿಂತ 3 ಪಟ್ಟು ಹೆಚ್ಚು ಮದ್ಯ ಅಲ್ಲಿ ಮಾರಾಟವಾಗಿದೆ. ಜತೆಗೆ ನಾನ್‌ವೆಜ್ ಊಟದ ಘಮಲು ಇತ್ತು. ದಿನಕ್ಕಿಂತ ಎರಡರಷ್ಟು ಆಹಾರ ಮಾರಾಟವಾಗಿದೆ.

    ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಕೇಕ್‌ಗಳ ಮಾರಾಟ ಜೋರಾಗಿತ್ತು. ಆಹಾರ್-2000 ಹೋಟೆಲ್‌ನಲ್ಲಿ ಪ್ರತಿ ವರ್ಷದಂತೆ ಕೇಕ್‌ಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಪೆಡರ್‌ಮ್ಯಾನ್ ಕೇಕ್, ಚಿಟ್ಟೆ ಆಕಾರದ ಕೇಕ್, ವಿವಿಧ ಚಿತ್ರನಟರು, ಯೋಧರ ಚಿತ್ರಗಳನ್ನು ಕೇಕ್‌ನಲ್ಲಿ ಮೂಡಿಸಲಾಗಿತ್ತು. ಬಗೆ ಬಗೆಯ ವಿನ್ಯಾಸಗಳು ಗಮನ ಸೆಳೆದವು. ಸಾರ್ವಜನಿಕರು ಕೇಕ್‌ಗಳನ್ನು ವೀಕ್ಷಿಸಿ ತಮ್ಮಿಷ್ಟದ ಕೇಕ್‌ಗಳನ್ನು ಖರೀದಿಸಿದರು. ಅದೇ ರೀತಿ ನಗರದ ಬಹುತೇಕ ಬೇಕರಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

    ಕನ್ವೆನ್ಷನ್ ಹಾಲ್‌ಗಳು, ರೆಸಾರ್ಟ್‌ಗಳು, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಸಂಗೀತದ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಸದ್ದಿಗೆ ಯುವಜನರು ಹುಚ್ಚೆದ್ದು ಕುಣಿದರು. ಹೊಸ ವರ್ಷದ ಮೊದಲ ದಿನ ಜನರು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದರು. ಶಾಲಾ ಕಾಲೇಜುಗಳಲ್ಲಿ ಕೇಕ್ ಕತ್ತರಿಸಲಾಯಿತು. ನಗರದ ಗಾಜಿನ ಮನೆಗೆ ಬುಧವಾರ 6 ಸಾವಿರ ಜನರು ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts