More

    ನೂತನ ವಿಜಯನಗರ ಜಿಲ್ಲೆಯ 2021 ಹಿನ್ನೋಟ – ಹೊಸ ಜಿಲ್ಲೆ ಸಂಭ್ರಮ, ತುಂಬಿದ ಜಲಾಶಯ

    ನೂತನ ವಿಜಯನಗರ ಜಿಲ್ಲೆ ಘೋಷಣೆಗೆ 2021 ವರ್ಷ ಸಾಕ್ಷಿಯಾಯಿತು. ಸಂಘ, ಸಂಸ್ಥೆಗಳು, ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಜನರ ಬಹುದಿನದ ಹೋರಾಟಕ್ಕೆ ಫೆ.8ರಂದು ಫಲ ದೊರೆಯಿತು. ಸಿಎಂ ಬಸವರಾಜ ಬೊಮ್ಮಾಯಿ ಅ.2ರಂದು ರಾಜ್ಯದ 31ನೇ ಜಿಲ್ಲೆಗೆ ಅಧಿಕೃತವಾಗಿ ಚಾಲನೆ ನೀಡಿದರು. ವರ್ಷದಲ್ಲಿ ಹೊಸ ಜಿಲ್ಲೆಯ ಸಂಭ್ರಮ, ರಾಜಕೀಯ ಮೇಲಾಟ, ಅಕಾಲಿಕ ಮಳೆ, ಕೋವಿಡ್ ಆರ್ಭಟ, ಅಪರಾಧ ಹೀಗೆ ಸಿಹಿ-ಕಹಿ ಘಟನೆಗಳು ನಡೆದಿದ್ದು, ಅವುಗಳ ಮಾಹಿತಿ ಇಲ್ಲಿದೆ.

    ನೂತನ ವಿಜಯನಗರ ಜಿಲ್ಲೆ ಉದಯ
    ಅಖಂಡ ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸಿ ವಿಜಯನಗರ ಜಿಲ್ಲೆ ರಚಿಸಬೇಕೆಂಬ ಪಶ್ಚಿಮ ತಾಲೂಕುಗಳ ಜನರ ಹಲವು ದಶಕಗಳ ಕೂಗು 2021ರ ಫೆ.8 ರಂದು ಈಡೇರಿತು. ಅಖಂಡ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹೊಸಪೇಟೆ ಜಿಲ್ಲಾ ಕೇಂದ್ರವನ್ನಾಗಿಟ್ಟುಕೊಂಡು ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕುಗಳನ್ನು ಒಳಗೊಂಡು ರಾಜ್ಯದ 31ನೇ ಜಿಲ್ಲೆಯನ್ನಾಗಿ ಸರ್ಕಾರ ಘೋಷಣೆ ಮಾಡಿತು. ಇದರಿಂದ ಪಶ್ಚಿಮ ತಾಲೂಕುಗಳಲ್ಲಿ ಸಂಭ್ರಮ ಮನೆ ಮಾಡಿತು. 2020ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನವೆಂಬರ್‌ನಲ್ಲಿ ಘೋಷಣೆ ಮಾಡಿದ್ದರೂ ಸಚಿವ ಸಂಪುಟದಲ್ಲಿ ಚರ್ಚೆ ಬಾಕಿ ಇತ್ತು. ಕೊನೆಗೆ ಫೆ.8 ರಂದು ಅಧಿಕೃತ ಮುದ್ರೆ ಒತ್ತಲಾಯಿತು. ಅ.2 ಮತ್ತು 3 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸಿದ ರೀತಿಯಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೂತನ ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಅಲ್ಲದೆ 464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಜಿಲ್ಲೆ ಘೋಷಣೆಗೆ ಪ್ರಮುಖ ಪಾತ್ರವಹಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆನಂದಸಿಂಗ್, ಹಾಗೂ ಸಚಿವರು, ಶಾಸಕರು, ಚಿತ್ರನಟ ಅಜಯ್ ರಾವ್ ಸಾಕ್ಷಿಯಾಗಿದ್ದರು.

    ಡಿಸಿ, ಎಸ್ಪಿ ನೇಮಕ
    ಜಿಲ್ಲಾ ಉದ್ಘಾಟನೆಗೆ ಮುನ್ನ ಎರಡು ದಿನಗಳ ಅಂತರದಲ್ಲಿ ಜಿಲ್ಲಾಧಿಕಾರಿಯಾಗಿ ಅನಿರುದ್ಧ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಡಾ.ಕೆ.ಅರುಣ್‌ರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿತು. ಅನಿರುದ್ಧ್ ಶ್ರವಣ್ ಇದಕ್ಕೂ ಮುನ್ನ ನೂತನ ಜಿಲ್ಲೆಯ ವಿಶೇಷಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಖಾತೆಗೆ ಕ್ಯಾತೆ ತೆಗೆದ ಸಿಂಗ್
    ಆ.4 ರಂದು ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಆನಂದ ಸಿಂಗ್‌ಗೆ ನೀಡಲಾಗಿದ್ದ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಪ್ರವಾಸೋದ್ಯಮ ಖಾತೆ ಬಗ್ಗೆ ಮುನಿಸಿಕೊಂಡಿದ್ದರು. ಖಾತೆ ನೀಡಿರುವ ಬಗ್ಗೆ ಶಾಸಕರ ಕಚೇರಿಯ ಬೋರ್ಡ್ ತೆರವುಗೊಳಿಸುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಈವರೆಗೂ ಆ ಬೋರ್ಡ್ ಅನ್ನು ಅಳವಡಿಸಿಲ್ಲ. ಇಂತಹದ್ದೇ ಖಾತೆ ಬೇಕೆಂದು ಬೆಂಗಳೂರಿಗೆ ಎರಡು ಬಾರಿ ಅಲೆದರು. ಕೊನೆಗೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿದ್ದರೆಂದು ಸುದ್ದಿಗಳು ಹಬ್ಬಿದ್ದವು. ರಾಯಚೂರು ಜಿಲ್ಲೆ ಮಸ್ಕಿ ಉಪ ಚುನಾವಣೆ ನಿಮಿತ್ತ ತೆರಳುವ ವೇಳೆ ಜಿಂದಾಲ್ ಏರ್‌ಪೋರ್ಟ್‌ಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿರನ್ನು ಸಹ ಸ್ವಾಗತ ಕೋರಲು ತೆರಳದೆ ಮುನಿಸಿಕೊಂಡಿದ್ದರು. ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಖಾತೆ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೂ ಸಹ ತಾವು ಬಯಸಿದ ಖಾತೆ ದೊರೆಯಲಿಲ್ಲ. ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯಲ್ಲೇ ಮುಂದುವರಿಯಬೇಕಾಯಿತು.

    ತಡವಾಗಿ ನಗರಸಭೆ ಚುನಾವಣೆ
    ಮೀಸಲಾತಿ ಹಂಚಿಕೆ ಗೊಂದಲ ಕಾರಣಕ್ಕೆ ನಗರಸಭೆ ಮಾಜಿ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರಿಂ ಎರಡೂವರೆ ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಈಗ ಮತ್ತೆ ನ್ಯಾಯಾಲಯದ ಆದೇಶದ ಮೇರೆಗೆ ಡಿ.27 ರಂದು ಚುನಾವಣೆ ನಡೆದಿದ್ದು. 30ಕ್ಕೆ ಫಲಿತಾಂಶ ಬರಲಿದೆ.

    ಪ್ರವಾಸೋದ್ಯಮದ ಮೇಲೆ ಕೋವಿಡ್ ಛಾಯೆ
    ಕೋವಿಡ್ ಮೊದಲ ಮತ್ತು ಎರಡನೇ ಅಲೆಯಿಂದಾಗಿ ಪ್ರಮುಖ ಪ್ರವಾಸಿ ತಾಣವಾದ ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಇದರಿಂದ ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಅಲ್ಲಿನ ಸಣ್ಣಪುಟ್ಟ ಗೂಡಂಗಡಿಗಳ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಬೇಕಾಯಿತು. ಕುಟುಂಬ ನಿರ್ವಹಣೆಗಾಗಿ ಗೈಡ್‌ಗಳು ಕೂಲಿ ಕೆಲಸಕ್ಕೆ ತೆರಳಬೇಕಾಯಿತು. ಎರಡನೇ ಅಲೆಯಲ್ಲಿ ಇನ್ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿಯವರು ಆರ್ಥಿಕ ನೆರವು ನೀಡಿದ್ದರು.

    ಉಪರಾಷ್ಟ್ರಪತಿ ಭೇಟಿ
    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆ.21 ರಂದು ಕುಟುಂಬ ಸದಸ್ಯರೊಂದಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಕಮಲಾಪುರ ಬಳಿಯ ಮಯೂರ ಹೋಟೆಲ್‌ನಲ್ಲಿ ತಂಗಿದ್ದರು. ಆ.22 ರಂದು ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದರು. ಬಳಿಕ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಜಲಾಶಯದಿಂದ ಆಂಧ್ರ, ಕರ್ನಾಟಕ, ತೆಲಂಗಾಣ ರೈತರಿಗೆ ಎಷ್ಟೆಲ್ಲ ಉಪಯುಕ್ತವಾಗಿದೆ ಎಂಬುದನ್ನು ಸ್ಮರಿಸಿದ್ದರು.

    ಬೆಚ್ಚಿಬೀಳಿಸಿದ್ದ ವಕೀಲನ ಕೊಲೆ
    ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ಫೆ.27 ರಂದು ಹಾಡಹಗಲೇ ಕೌಂಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಕೀಲ ತಾರಿಹಳ್ಳಿ ವೆಂಕಟೇಶ್ ಎಂಬುವರನ್ನು ಅವರ ಸಂಬಂಧಿ ಮನೋಜ್ ಎಂಬಾತ ಮಚ್ಚಿನಿಂದ ಕೊಲೆ ಮಾಡಿದ್ದ. ಈ ಘಟನೆ ನಗರದ ಜನರನ್ನು ಬೆಚ್ಚಿ ಬೀಳಿಸಿತ್ತು. ಅ.22 ರಂದು ಸಂಜೆ 7 ಗಂಟೆ ಸುಮಾರಿಗೆ ರಾಣಿಪೇಟೆಯ ಮನೆಯೊಂದಕ್ಕೆ ಬಟ್ಟೆ ಸೋಗಿನಲ್ಲಿ ನುಗ್ಗಿದ್ದ ಐವರು ವೃದ್ಧೆಯೊಬ್ಬರನ್ನು ಬಟ್ಟೆಯಿಂದ ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಕೆಲವೇ ದಿಗಳಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಡಿ.22 ರಂದು ಅಂದಾಜು 11.5 ಕೋಟಿ ಬೆಲೆಯ ತಿಮಿಂಗಲ ವಾಂತಿ(ಅಂಬರ್ ಗ್ರೀಸ್) ಮಾರಾಟಗಾರರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸುವ ಮೂಲಕ ಭರ್ಜರಿ ಭೇಟಿಯಾಡಿದ್ದರು.

    74 ಕೆರೆ ಭರ್ತಿಗೆ ಅನುಮೋದನೆ
    ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ 670 ಕೋಟಿ ರೂ.ವೆಚ್ಚದ ಯೋಜನೆಗೆ ಜೂ.22 ರಂದು ಸಚಿವ ಸಂಪುಟ ಅನುಮೋದನೆ ನೀಡಿತು. ಇದರಿಂದ ಬರಪೀಡಿತ ತಾಲೂಕಿನ ಜನರಲ್ಲಿ ಹರ್ಷ ಉಂಟು ಮಾಡಿತು. ಯಾವುದೇ ನೀರಾವರಿ ಸೌಲಭ್ಯ ಇಲ್ಲದ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಲೇ ಬರಲಾಗಿದೆ. ಆದರೆ, ಫಲ ಸಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎನ್.ವೈ.ಗೋಪಾಲಕೃಷ್ಣ, ಗೆದ್ದರೆ ಕ್ಷೇತ್ರದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದಾರೆ.

    ಅಕಾಲಿಕ ಮಳೆ ತಂದ ಸಂಕಷ್ಟ
    ವಿಜಯನಗರ ಜಿಲ್ಲಾದ್ಯಂತ ಅಕಾಲಿಕ ಮಳೆಯಿಂದಾಗಿ 10.97 ಕೋಟಿ. ರೂ. ನಷ್ಟವಾಗಿದೆ. 993 ಹೆಕ್ಟೇರ್ ಭತ್ತ, 407 ಹೆಕ್ಟೇರ್ ರಾಗಿ, 358 ಹೆಕ್ಟೇರ್ ಮುಸುಕಿನ ಜೋಳ, 411 ಹೆಕ್ಟೇರ್ ಶೇಂಗಾ, 167 ಹೆಕ್ಟೇರ್ ಟೊಮ್ಯಾಟೊ, 5667 ಹೆಕ್ಟೇರ್ ಮೆಣಸಿನಕಾಯಿ, 727 ಹೆ ಈರುಳ್ಳಿ, 1403 ಹೆ ಇತರೆ ತರಕಾರಿ ಬೆಳೆ ನಷ್ಟವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ಜು.7 ರಂದು ಸುರಿದ ಭಾರಿ ಮಳೆಯಿಂದ ಹಡಗಲಿ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳ ನಡುವಿನ ಹಳ್ಳದಲ್ಲಿ ಹ.ಬೊ.ಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಮಲ್ಲುಕಾರ್ಜುನ ದಂಪತಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು.

    ಮಕರಬ್ಬಿಯಲ್ಲಿ ವಾಂತಿಭೇದಿ
    ನೂತನ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕು ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 150ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, 7 ಜನರು ಮೃತಪಟ್ಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಡಿಸಿ, ಎಸ್ಪಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಇಂತಹ ಘಟನೆ ನಡೆದರೂ ಸಚಿವ ಆನಂದ ಸಿಂಗ್ ಭೇಟಿ ನೀಡದ ಕಾರಣ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು.

    ಬರಹ: ಪ್ರಭು ಹಂಪಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts