More

    ಹಾವೇರಿಯಲ್ಲಿ ಡಿಎಲ್‌ಗೆ ಹೊಸ ಪಥ

    ಹಾವೇರಿ: ಸಂಪೂರ್ಣ ಕಂಪ್ಯೂಟರ್ ಆಧಾರಿತ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ನೀಡುವ ನೂತನ ತಂತ್ರಜ್ಞಾನ ಆಧಾರಿತ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ (ಆಟೋಮೇಟೆಡ್ ಡ್ರೈವಿಂಗ್ ಟೆಸ್ಟಿಂಗ್ ಟ್ರಾೃಕ್) ಹಾವೇರಿಯಲ್ಲಿ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
    ನಗರದ ಪಿಬಿ ರಸ್ತೆಯ ಆರ್‌ಟಿಒ ಕಚೇರಿ ಆವರಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಕೆ ಸಂಸ್ಥೆ ವತಿಯಿಂದ 8.35 ಕೋಟಿ ರೂ. ವೆಚ್ಚದಲ್ಲಿ ಟ್ರಾೃಕ್ ನಿರ್ಮಾಣಗೊಳ್ಳುತ್ತಿದೆ. ಆಗಸ್ಟ್ 28, 2021ರಂದು ಟ್ರಾೃಕ್ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸಿದ್ದರು. ಹಾಲೇಶ ಹಳ್ಳೇರ ಎಂಬುವವರು ಗುತ್ತಿಗೆ ಪಡೆದಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸೆನ್ಸಾರ್ ಅಳವಡಿಕೆ ಕಾರ್ಯ ಬಾಕಿ ಇದೆ.
    ದ್ವಿಚಕ್ರ ವಾಹನ, ಆಟೋ, ಕಾರು, ಲಾರಿ, ಬಸ್, ಮತ್ತಿತರ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಬೇಕಾದವರಿಗೆ ಸದ್ಯ ಆರ್‌ಟಿಒ ಇನ್‌ಸ್ಪೆಕ್ಟರ್‌ಗಳ ಸಮ್ಮುಖದಲ್ಲಿ ಚಾಲನಾ ಪರೀಕ್ಷೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪರಿಪೂರ್ಣವಾಗಿ ಚಾಲನೆ ಕಲಿಯದವರಿಗೂ ಲೈಸೆನ್ಸ್ ಸಿಗುವ ಸಾಧ್ಯತೆ ಇರುತ್ತದೆ. ಮಧ್ಯವರ್ತಿಗಳು ಪ್ರಭಾವ ಬೀರಿ ಹಣದ ಆಮಿಷವೊಡ್ಡಿ ಪರಿಣತಿ ಇಲ್ಲದವರಿಗೂ ಲೈಸೆನ್ಸ್ ಕೊಡಿಸುವ ಸಂಭವ ಇರುತ್ತದೆ. ಇದನ್ನು ತಪ್ಪಿಸಿ ನುರಿತ ಚಾಲಕರಿಗಷ್ಟೇ ಪರವಾನಗಿ ಕೊಡುವ ಉದ್ದೇಶದಿಂದ ಕಂಪ್ಯೂಟರ್ ಆಧಾರಿತ ಟ್ರಾೃಕ್ ನಿರ್ಮಿಸಲಾಗಿದೆ.
    ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇತರ ನಗರಗಳಲ್ಲಿ ಈಗಾಗಲೇ ಈ ಟ್ರಾೃಕ್ ಸಿಸ್ಟ್‌ಂ ಚಾಲ್ತಿಯಲ್ಲಿದ್ದು ಹಾವೇರಿಯಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿದೆ. ಕಂಪ್ಯೂಟರ್ ಆಧಾರಿತ ಟ್ರಾೃಕ್ ನಿರ್ಮಾಣವಾದರೆ ನುರಿತ ಚಾಲಕರಿಗಷ್ಟೇ ಲೈಸೆನ್ಸ್ ದೊರೆಯುತ್ತದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಟ್ರಾೃಕ್ ಉದ್ಘಾಟನೆ ಬಳಿಕ ಇದರ ಸಾಧಕ- ಬಾಧಕಗಳ ಅರಿವಾಗಲಿದೆ.
    ಕಾರ್ಯ ವೈಖರಿ ಹೇಗೆ?: ದ್ವಿಚಕ್ರ ವಾಹನ, ಲೈಟ್ ಮೋಟಾರ್ ವೆಹಿಕಲ್ ಹಾಗೂ ಹೆವಿ ಮೋಟಾರ್ ವೆಹಿಕಲ್‌ಗಳಿಗೆ ಡ್ರೈವಿಂಗ್ ಲೈಸೆನ್ಸ್ ಬೇಕಾದವರು ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಬಳಿಕ ಆರ್‌ಟಿಒ ಕಚೇರಿ ಸಿಬ್ಬಂದಿ ಅರ್ಜಿದಾರರ ಮೊಬೈಲ್‌ಗೆ ಪರೀಕ್ಷೆಯ ದಿನಾಂಕ, ಸಮಯ ಹಾಗೂ ಪಾಸ್‌ವರ್ಡ್ ಕಳುಹಿಸುತ್ತಾರೆ. ಆ ದಿನದಂದು ನೇರವಾಗಿ ಟ್ರಾೃಕ್‌ಗೆ ಬಂದು ಪಾಸ್‌ವರ್ಡ್ ನೀಡಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.
    ಇಲ್ಲಿ ಎಲ್ಲವೂ ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಟ್ರಾೃಕ್‌ನಲ್ಲಿ ಸೆನ್ಸಾರ್ ಇರುತ್ತದೆ. ಅಲ್ಲಿ ನೀಡಿರುವ ಚಾರ್ಟ್‌ನಂತೆ ಚಾಲನೆ ಮಾಡಬೇಕು. 60 ಸೆಕೆಂಡ್‌ನಲ್ಲಿ ಕಾಲು ನೆಲಕ್ಕೆ ಹಚ್ಚದೇ ವಾಹನ ಚಲಾಯಿಸುವುದು, 120 ಸೆಕೆಂಡ್‌ನಲ್ಲಿ ಇಂಗ್ಲಿಷ್‌ನ ಎಸ್ ಆಕಾರದಲ್ಲಿ ರಿವರ್ಸ್ ಗೇರ್‌ನಲ್ಲಿ ಬರುವುದು, ಇಂಗ್ಲಿಷ್ ಎಂಟರ (8) ಆಕಾರದಲ್ಲಿ ಚಲಾಯಿಸುವುದು ಸೇರಿದಂತೆ ಇತರ ಪರೀಕ್ಷೆಗಳನ್ನು ನೀಡಲಾಗುತ್ತದೆ. ಇದನ್ನು ಸರಿಯಾಗಿ ಮಾಡಿದವರಿಗೆ ಮಾತ್ರ ಕಂಪ್ಯೂಟರ್ ಟೆಸ್ಟ್ ಪಾಸ್ ಎಂದು ತೋರಿಸುತ್ತದೆ. ಇಲ್ಲದಿದ್ದರೆ ಫೇಲ್ ಎಂದು ತೋರಿಸುತ್ತದೆ. ಫೇಲ್ ಆದವರು ಒಂದು ವಾರ ಬಿಟ್ಟು ಮತ್ತೆ ಬರಬೇಕಾಗುತ್ತದೆ. ಆಗಲೂ ಫೇಲ್ ಆದರೆ, ಒಂದು ತಿಂಗಳವರೆಗೆ ಕಾಯಬೇಕಾಗುತ್ತದೆ.

    ರಾಣೆಬೆನ್ನೂರಲ್ಲಿ ಆರಂಭಕ್ಕೆ ಚಿಂತನೆ: ಹಾವೇರಿಯಲ್ಲಿ ನೂತನ ಟ್ರಾೃಕ್ ನಿರ್ಮಾಣದ ಬೆನ್ನಲ್ಲೇ ರಾಣೆಬೆನ್ನೂರಿಲ್ಲೂ ನಿರ್ಮಾಣಕ್ಕೆ ಚಿಂತನೆ ಮಾಡಲಾಗುತ್ತಿದೆ. ಇದಕ್ಕಾಗಿ ನಾಲ್ಕು ಎಕರೆ ಜಾಗ ಗುರುತಿಸಲಾಗಿದೆ. ರಾಣೆಬೆನ್ನೂರ ಆರ್‌ಟಿಒ ಕಚೇರಿ ಸದ್ಯ ಬಾಡಿಗೆ ಕಟ್ಟಡದಲ್ಲಿದ್ದು, ಒಂದೇ ಜಾಗದಲ್ಲಿ ಸ್ವಂತ ಕಟ್ಟಡ, ಟ್ರಾೃಕ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಟ್ರಾೃಕ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೆನ್ಸಾರ್ ಅಳವಡಿಸುವ ಕಾರ್ಯ ಸೇರಿ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಎರಡು ತಿಂಗಳಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
    I ವಸೀಮಬಾಬಾ ಮುದ್ದೇಬಿಹಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts