More

    ಕಡಬಕ್ಕೆ ಹೊಸ ಪ್ರವಾಸಿ ಬಂಗಲೆ

    ಪ್ರವೀಣ್‌ರಾಜ್ ಕೊಲ ಕಡಬ

    ಕಡಬ ತಾಲೂಕು ರಚನೆಯಾದ ಬಳಿಕ ತಾಲೂಕಿಗೆ ಸಂಬಂಧಿಸಿದ ಕಚೇರಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಸಕ್ತ ಹಳೇ ಸ್ಟೇಶನ್ ಬಳಿ ಲೋಕೋಪಯೋಗಿ ಇಲಾಖೆಗೆ ಕಾದಿರಿಸಿರುವ ಜಮೀನಿನಲ್ಲಿ ಸುಸಜ್ಜಿತ ಪ್ರವಾಸಿ ಬಂಗಲೆ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಇದರೊಂದಿಗೆ 95 ವರ್ಷಗಳ ಇತಿಹಾಸ ಹೊಂದಿರುವ ಕಡಬ ಪೇಟೆಯ ಹೃದಯ ಭಾಗದಲ್ಲಿರುವ ಶಿಥಿಲ ಪ್ರವಾಸಿ ಬಂಗಲೆ(ನಿರೀಕ್ಷಣಾ ಮಂದಿರ) ಇತಿಹಾಸದ ಪುಟ ಸೇರಲಿದೆ.

    ಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪ್ರವಾಸಿ ಬಂಗಲೆಯಲ್ಲೀಗ ಯಾವುದೇ ಚಟುವಟಿಕೆ ನಡೆಯದೆ ಅನಾಥವಾಗಿದೆ. ದಿ.ಮೇಲೂರು ಚಂದಯ್ಯ ಶೆಟ್ಟಿಯವರು 1925ರಲ್ಲಿ ಈ ಕಟ್ಟಡ ನಿರ್ಮಿಸಿ ಕೊಟ್ಟಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದೆ. ಬಂಗಲೆ ಇರುವ ಜಮೀನು ಸೇರಿದಂತೆ ಒಟ್ಟು 2.29 ಎಕರೆ ಜಮೀನನ್ನು ಅವರು ಅಂದಿನ ಕಾಲದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾನವಾಗಿ ಕೊಟ್ಟಿದ್ದರು. ಸಮುದಾಯ ಆಸ್ಪತ್ರೆ ಆವರಣದಲ್ಲಿರುವ ಈ ಕಟ್ಟಡ ಆರಂಭದಲ್ಲಿ ವೈದ್ಯಾಧಿಕಾರಿಗಳ ವಸತಿಗೃಹವಾಗಿತ್ತು. ಪುತ್ತೂರು ಬಿಡಿಒ ಕಚೇರಿ ಇದರ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಅನಂತರ ಎರಡು ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಪ್ರವಾಸಿ ಬಂಗಲೆಯಾಗಿ ಪರಿವರ್ತಿಸಲಾಗಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಇದರ ನಿರ್ವಹಣೆ ಹೊಣೆ ಹೊತ್ತುಕೊಂಡಿತ್ತಾದರೂ ಈಗ ಯಾರೂ ಕೇಳುವವರಿಲ್ಲದಂತಾಗಿದೆ.

    ದುರಸ್ತಿ ಕಷ್ಟವೆಂದು ವರದಿ?: ಮೂಲತಃ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಸೇರಿದ ಈ ಜಮೀನನ್ನು ಮತ್ತೆ ಆಸ್ಪತ್ರೆ ಉಪಯೋಗಕ್ಕೆ ನೀಡಬೇಕೆಂದು ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಮುಂದೆ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣವಾಗಬೇಕಿದ್ದು ಹೆಚ್ಚಿನ ಜಾಗದ ಅಗತ್ಯವಿರುವುದರಿಂದ ಸಂಬಂಧಪಟ್ಟವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಹಳೆಯ ಪ್ರವಾಸಿ ಬಂಗಲೆ ದುರಸ್ತಿ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದ ಜಿಪಂ ಅಧಿಕಾರಿಗಳು ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ದುರಸ್ತಿಗೆ ಯೋಗ್ಯವಾಗಿಲ್ಲ ಎಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರವುಗೊಳಿಸಲು ನಿಧರ್ರಿಸಲಾಗಿದೆ ಎಂದು ತಿಳಿದು ಬಂದಿದೆ.

    ಕಡಬದಲ್ಲಿ ಲೋಕೋಪಯೋಗಿ ಇಲಾಖೆಗೆ ಗುರುತಿಸಲಾದ ಜಮೀನಿನಲ್ಲಿ ನಿರೀಕ್ಷಣಾ ಮಂದಿರ ನಿರ್ಮಿಸಲಾಗುವುದು. ಕಟ್ಟಡದ ವಿನ್ಯಾಸ ನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘ್ರ ಅನುದಾನಕ್ಕಾಗಿ ಅಂದಾಜು ಪಟ್ಟಿ ಸಲ್ಲಿಸಲಾಗುವುದು. ಸುಳ್ಯ ಹಾಗೂ ಕಡಬದಲ್ಲಿ ನೂತನ ನಿರೀಕ್ಷಣ ಮಂದಿರ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಜತೆ ಮಾತುಕತೆ ನಡೆಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ.
    ಎಸ್.ಅಂಗಾರ
    ಸುಳ್ಯ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts