More

    ಇನ್ಮುಂದೆ DL, RCಗೆ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್ಸ್​ ವಿತರಣೆ: ಇವುಗಳ ವಿಶೇಷತೆ ಹೀಗಿದೆ…

    ಬೆಂಗಳೂರು: ಇಂದಿನ ಅಪ್​ಡೇಟ್​ ಯುಗದಲ್ಲಿ ಅನೇಕ ಬದಲಾವಣೆಗೆ ಮುಂದಾಗಿರುವ ರಾಜ್ಯ ಸಾರಿಗೆ ಇಲಾಖೆ, ಡ್ರೈವಿಂಗ್​ ಲೈಸೆನ್ಸ್ (ಡಿಎಲ್​)​ ಮತ್ತು ರಿಜಿಸ್ಟ್ರೇಷನ್​ ಸರ್ಟಿಫಿಕೇಟ್​ (ಆರ್​ಸಿ)ಗಾಗಿ ಚಿಪ್​ಗಳು​ ಮತ್ತು ಕ್ಯೂಆರ್​ ಕೋಡ್​ಗಳು​ ಒಳಗೊಂಡ ಅತ್ಯಾಧುನಿಕ ಸೌಲಭ್ಯಗಳುಳ್ಳ ಸ್ಮಾರ್ಟ್​ ಕಾರ್ಡ್​ಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ.

    ಪ್ರಸ್ತುತ ಮಾರಾಟಗಾರರು ಕಳೆದ 15 ವರ್ಷಗಳಿಂದ ಚಿಪ್‌ಗಳನ್ನು ಒಳಗೊಂಡ ಸ್ಮಾರ್ಟ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದು, 2024ರ ಫೆಬ್ರವರಿ ತಿಂಗಳಲ್ಲಿ ಅದರ ಒಪ್ಪಂದವನ್ನು ಮುಕ್ತಾಯಗೊಳಿಸುತ್ತಾರೆ. ಕರ್ನಾಟಕದಾದ್ಯಂತ 2 ಕೋಟಿಗೂ ಹೆಚ್ಚು ಡಿಎಲ್‌ಗಳು ಮತ್ತು 2 ಕೋಟಿಗೂ ಅಧಿಕ ಆರ್‌ಸಿಗಳನ್ನು ಅವರು ಪೂರೈಸಿದ್ದಾರೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

    ಡಿಎಲ್​ ಮತ್ತು ಆರ್​ಸಿಗಳಿಗಾಗಿ ಸ್ಮಾರ್ಟ್-ಕಾರ್ಡ್ ಮಾದರಿಯ ಬದಲಾವಣೆಯು 2009ರಲ್ಲೇ ಆರಂಭವಾಯಿತು. ಈ ಹೊಸ ಪ್ರಸ್ತಾವಿತ ಕಾರ್ಡ್‌ಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ನಿಗದಿಪಡಿಸಿದ ವಿಶೇಷತೆಗಳಿಗೆ ಬದ್ಧವಾಗಿರುತ್ತವೆ ಮತ್ತು ರಾಷ್ಟ್ರವ್ಯಾಪಿ ವಿತರಣೆಯಲ್ಲಿ ಈ ಸ್ಮಾರ್ಟ್​ ಕಾರ್ಡ್​ಗಳು ಏಕರೂಪತೆಯನ್ನು ಉತ್ತೇಜಿಸುತ್ತದೆ. ಈ ಹಿಂದಿನ ಕಾರ್ಡ್​ಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿಗಳು ಇರಲಿದೆ. ಡಿಎಲ್​ನ ಮುಂಭಾಗದಲ್ಲಿ ಕಾರ್ಡುದಾರನ ಹೆಸರು, ವ್ಯಾಲಿಡಿಟಿ, ಜನ್ಮ ದಿನಾಂಕ, ರಕ್ತದ ಗುಂಪು, ವಿಳಾಸ ಮತ್ತು ಫೋಟೋ ಇರಲಿದೆ. ಅಲ್ಲದೆ, ಚಿಪ್​ ಕೂಡ ಅಳವಡಿಸಲಾಗಿರುತ್ತದೆ. ಕಾರ್ಡಿನ ಹಿಂಭಾಗದಲ್ಲಿ ಕ್ಯೂಆರ್​ ಕೋಡ್​ ಜೊತೆಗೆ ವಾಹನದ ಮಾದರಿ ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ.

    ಆರ್​ಸಿಯ ಮುಂಭಾಗದಲ್ಲಿ ರಿಜಿಸ್ಟ್ರೇಷನ್​ ನಂಬರ್​, ರಿಜಿಸ್ಟ್ರೇಷನ್​ ದಿನಾಂಕ, ವ್ಯಾಲಿಡಿಟಿ, ಚಾಸಿಸ್​, ಇಂಜಿನ್​ ನಂಬರ್​ಗಳು, ಮಾಲೀಕನ ಮಾಹಿತಿ ಮತ್ತು ವಿಳಾಸ ಇರಲಿದೆ. ಕಾರ್ಡಿನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ಮಾಡೆಲ್​, ವಾಹನದ ಮಾದರಿ (ಬಾಡಿ ಟೈಪ್​), ಆಸನದ ಸಾಮರ್ಥ್ಯ, ಆರ್ಥಿಕ ಮಾಹಿತಿ ಜತೆಗೆ ಕ್ಯೂಆರ್​ ಕೋಡ್​ ಇರಲಿದೆ. ಈ ಕ್ಯೂಆರ್​ ಕೋಡ್ ಸ್ಪೇಷಾಲಿಟಿ ಏನೆಂದರೆ, ಕಾರ್ಡುದಾರನ ವಿವರಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸುಲಭವಾಗುತ್ತದೆ.

    ಕರ್ನಾಟಕದಲ್ಲಿ ನೋಂದಾಯಿಸುವ ಹೊಸ ವಾಹನಗಳು ಮತ್ತು ಹೊಸ ಡಿಎಲ್‌ಗಳಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಈ ಹೊಸ ಮಾದರಿಯ ಸ್ಮಾರ್ಟ್​ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

    ಕಳೆದ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಸರಾಸರಿ 5,000 ವಾಹನಗಳು ನೋಂದಣಿಯಾಗಿದ್ದು, 4,000 ಕ್ಕೂ ಹೆಚ್ಚು ಡಿಎಲ್‌ಗಳನ್ನು ವಿತರಿಸಲಾಗಿದೆ. ಪ್ರಸ್ತುತ ಒಪ್ಪಂದ ಮುಗಿಯುವ ಮುನ್ನವೇ ಪೂರೈಕೆದಾರರನ್ನು ಆಯ್ಕೆ ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇಲಾಖೆಯು ಐದು ವರ್ಷಗಳ ಗುತ್ತಿಗೆಯನ್ನು ಪರಿಗಣಿಸುತ್ತಿದ್ದು, ಅಂತಿಮ ನಿರ್ಧಾರವು ಸರ್ಕಾರದ್ದಾಗಿದೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ನಂತರವಷ್ಟೇ ವೆಚ್ಚವನ್ನು ನಿರ್ಧರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿಶ್ವಕಪ್ 2023:  ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ಪಾದವಿಟ್ಟಿರುವ ಫೋಟೋ ವೈರಲ್

    ಮುಂಡಾ ಮೋಚ್ತು…ಎನ್ನುತ್ತಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಬ್ರಹ್ಮಾಂಡ ಗುರೂಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts