More

    ಹೊಸ ವಿದ್ಯುತ್ ಸಂಪರ್ಕ ಸ್ಥಗಿತ ಆದೇಶ ರೈತ ವಿರೋಧಿ

    ಬ್ಯಾಡಗಿ: ಜಿಲ್ಲೆಯ 10 ಸಾವಿರ ರೈತರು ತಲಾ 20 ಸಾವಿರ ತುಂಬಿದರೂ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡದೆ ಕಚೇರಿಗಳಿಗೆ ಅಲೆದಾಡಿಸುತ್ತ ತೊಂದರೆ ನೀಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆರೋಪಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ 10 ಸಾವಿರ ರೈತರ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ತಲಾ 20 ಸಾವಿರದಂತೆ 20 ಕೋಟಿ ರೂಪಾಯಿ ಹಣ ತುಂಬಿದ್ದಾರೆ. ಬ್ಯಾಡಗಿಯ 1089 ರೈತರು ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ 2 ಕೋಟಿ ರೂ.ಅಧಿಕ ಮೊತ್ತವನ್ನು ಹೆಸ್ಕಾಂಗೆ ಜಮೆ ಮಾಡಿದ್ದಾರೆ. ಇಷ್ಟೊಂದು ಹಣ ರೈತರಿಂದ ಪಡೆದರೂ ಅಧಿಕೃತ ಸಂಪರ್ಕ ನೀಡುತ್ತಿಲ್ಲ. ಹೀಗಾಗಿ ಹೊಲದ ತುಂಬೆಲ್ಲ ವಿದ್ಯುತ್ ತಂತಿಗಳು ಜೋಡಾಡುತ್ತಿವೆ. ಆಕಸ್ಮಿಕವಾಗಿ ಏನಾದರೂ ದುರ್ಘಟನೆಗಳು ಜರುಗಿದಾಗ ಅಧಿಕೃತವಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಹೀಗಾದರೆ, ರೈತರ ಗತಿ ಏನು. ಸೆ. 22ರಿಂದ ಹೊಸ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದು, ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಆದೇಶ ರೈತ ವಿರೋಧಿಯಾಗಿದೆ ಎಂದರು.

    ರೈತರಿಗೆ ನೆರೆ ಹಾವಳಿ ಉಂಟಾದರೆ ಅಳಿದುಳಿದ ಸ್ವಲ್ಪ ಬೆಳೆ, ಜಾನುವಾರುಗಳಿಗೆ ಮೇವು, ಉದ್ಯೋಗಕ್ಕೆ ಅವಕಾಶವಿರುತ್ತದೆ. ಬರಗಾಲ ಉಂಟಾದಲ್ಲಿ ಜಾನುವಾರುಗಳಿಗೆ ಮೇವು, ನೀರು, ಕೂಲಿ ಕಾರ್ಮಿಕರಿಗೆ ಉದ್ಯೋಗ ಇಲ್ಲದಾಗಲಿದೆ. ಸರ್ಕಾರಗಳು ತುರ್ತು ಪರಿಹಾರ ನೀಡಬೇಕು. ಈ ಕುರಿತು ಆಳುವ ಪಕ್ಷದಿಂದ ಹಿಡಿದು ವಿರೋಧ ಪಕ್ಷದವರು ಮೌನದ್ಯೋರಣೆ ತಾಳಿರುವುದನ್ನು ನೋಡಿದರೆ, ಯಾವ ಸರ್ಕಾರಗಳಿಗೂ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಎರಡು ವರ್ಷಗಳಿಂದ ಮಳೆ ಬೆಳೆ ಸಮರ್ಪಕವಾಗಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿ ಸಾಲದ ಸುಳಿಯಲ್ಲಿ ಮುಳುಗಿದ್ದಾರೆ. ವಿಮೆ ಕಂಪನಿಗಳಿಂದ 10 ದಿನದಲ್ಲಿ ಮಧ್ಯಂತರ ಪರಿಹಾರ ಕೊಡಿಸುವುದಾಗಿ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾತ್ರ ಮಧ್ಯಂತರ ವಿಮೆ ನೀಡಲು ವಿಮೆ ಕಂಪನಿ ನಿರ್ದೇಶನ ನೀಡಿದೆ. ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ಸಮಿತಿ ಏನು ವರದಿ ನೀಡಿದೆ ಎಂಬುದನ್ನು ಇಂದಿಗೂ ಬಹಿರಂಗಪಡಿಸುತ್ತಿಲ್ಲ. ಅಧಿಕಾರಿಗಳು ಸರ್ಕಾರಕ್ಕೆ ಅನುಕೂಲವಾಗುವಂತೆ ವರದಿ ನೀಡುತ್ತಿದ್ದಾರೆ ಎನ್ನುವ ಗುಮಾನಿ ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.

    ಮಹ್ಮದ್‌ಗೌಸ್ ಪಾಟೀಲ, ಮಲ್ಲನಗೌಡ್ರ ಮಾಳಗಿ, ಮಾಲತೇಶ ಪೂಜಾರ, ಶಿವನಗೌಡ್ರ ಪಾಟೀಲ, ರಾಜು ಮುತ್ತಿಗೆ, ವಿವೇಕ ಹಾನಗಲ್ಲ, ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts