More

    ಸೈಬರ್ ವಂಚನೆ ತಡೆಗೆ ಪಾಲಿಸಿ ಬೇಲಿ; ಶೀಘ್ರ ಬರಲಿದೆ ಹೊಸ ನೀತಿ: ಸೈಬರ್ ದಾಳಿ, ಹ್ಯಾಕಿಂಗ್, ಆರ್ಥಿಕ ವಂಚನೆಗೆ ಬ್ರೇಕ್

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ದೈನಂದಿನ ಬದುಕಿನಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತ ಜೀವನಮಟ್ಟ ಸುಧಾರಣೆಗೊಂಡಷ್ಟೂ ಹೈಟೆಕ್ ವಂಚನೆಗಳಿಗೆ ಸಿಲುಕುವ ಅಪಾಯವೂ ಹೆಚ್ಚುತ್ತದೆ. ಬೆರಳ ತುದಿಯಲ್ಲೇ ನಡೆಯುವ ನಮ್ಮೆಲ್ಲ ಆರ್ಥಿಕ ವ್ಯವಹಾರಗಳ ಸುರಕ್ಷತೆ ಹೆಚ್ಚಿಸಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನ ಸೈಬರ್ ನೀತಿ ಜಾರಿಗೆ ತರಲು ಮುಂದಾಗಿದೆ. ಸೈಬರ್ ಸುರಕ್ಷತೆಯನ್ನು ಉದ್ಯಮದ ರೀತಿಯಲ್ಲಿ ಪ್ರೋತ್ಸಾಹಿಸುವ ದೂರಗಾಮಿ ಯೋಚನೆಯ ಸರ್ಕಾರದ ಹೊಸ ಪಾಲಿಸಿ ಇನ್ನೊಂದು ತಿಂಗಳಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದ ಹಬ್ ಆಗಿದೆ. ಸಹಜವಾಗಿಯೇ ಇಲ್ಲಿ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ. ಸೈಬರ್ ಕ್ರೖೆಂಗಳೆಂದರೆ ಕೇವಲ ಡಿಜಿಟಲ್ ವಹಿವಾಟಿನಲ್ಲಿ ನಡೆಯುವ ಮೋಸ ಮಾತ್ರವೇ ಅಲ್ಲ, ಸೈಬರ್ ದಾಳಿ, ಹ್ಯಾಕಿಂಗ್, ಡೇಟಾ ಕದಿಯುವುದು, ಬ್ಯಾಂಕಿಂಗ್ ಅಕ್ರಮ ಇವೆಲ್ಲವೂ ಅದರ ನಾನಾ ರೂಪಗಳು.

    ಹೀಗಾಗಿ ಒಟ್ಟಾರೆ ತಂತ್ರಜ್ಞಾನಾಧಾರಿತ ವ್ಯವಹಾರಗಳ ಸುರಕ್ಷತೆ ಹೆಚ್ಚಿಸುವ ಹಾಗೂ ಸೈಬರ್ ಸೆಕ್ಯೂರಿಟಿ ವಲಯವನ್ನು ಮತ್ತೊಂದು ಉದ್ಯಮವನ್ನಾಗಿ ಪ್ರೋತ್ಸಾಹಿಸುವ ಉದ್ದೇಶದಿಂದಲೇ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ 2006ರಿಂದ 2022ರ ಅವಧಿಯಲ್ಲಿ ಸೈಬರ್ ದಾಳಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಡೀ ವಿಶ್ವದಲ್ಲಿ ನಡೆದಿರುವ ಸೈಬರ್ ದಾಳಿಯಲ್ಲಿ ದೇಶ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನದ ಕೇಂದ್ರ ಆಗಿರುವುದರಿಂದ ಸೈಬರ್ ಅಪರಾಧಗಳಲ್ಲಿ 2ನೇ ಸ್ಥಾನದಲ್ಲಿದೆ. ಆದ್ದರಿಂದಲೇ ಸೈಬರ್ ಭದ್ರತೆಗೆ ಒಂದು ಚೌಕಟ್ಟು ವಿಧಿಸಿ ಸೇವೆಗಳಲ್ಲಿ ಸುಧಾರಣೆ ತರುವುದು ಸರ್ಕಾರದ ಉದ್ದೇಶವಾಗಿದೆ. ಕೇಂದ್ರ ಸರ್ಕಾರ 2013ರಲ್ಲಿಯೇ ಸೈಬರ್ ಸುರಕ್ಷತಾ ನೀತಿ ಪ್ರಕಟಿಸಿದೆ. ರಾಜ್ಯ ಸರ್ಕಾರ 2017ರಲ್ಲಿ ನೀತಿ ಸಿದ್ಧಪಡಿಸಲು ಕಾರ್ಯಪಡೆಯೊಂದನ್ನು ರಚನೆ ಮಾಡಿತ್ತು. ಆದರೆ ನೀತಿ ರಚನೆ ಆಗಿರಲಿಲ್ಲ. ಇದೀಗ ಅಂತಿಮ ಘಟ್ಟ ತಲುಪಿದೆ.

    ಮೂರು ಇಲಾಖೆಗಳ ಜವಾಬ್ದಾರಿ: ಮಾಹಿತಿ ತಂತ್ರಜ್ಞಾನ ಇಲಾಖೆ ತನ್ನ ಉದ್ದಿಮೆಗಳನ್ನು ಗಮನದಲ್ಲಿಟ್ಟುಕೊಂಡು ಐಐಎಸ್​ಸಿ ತಜ್ಞರ ತಂಡದ ಮೂಲಕ ನೀತಿಯನ್ನು ಸಿದ್ಧಪಡಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಕೇವಲ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೇ ಸರ್ಕಾರಿ ದಾಖಲೆಗಳನ್ನು ಕಾಪಾಡುವ ಸಲುವಾಗಿಯೂ ಗೃಹ ಇಲಾಖೆ- ಇ-ಆಡಳಿತ ಜಂಟಿಯಾಗಿ ಸಮಗ್ರ ನೀತಿ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿತ್ತು. ಮೂರು ಇಲಾಖೆಗಳು ಪ್ರತ್ಯೇಕವಾಗಿ ತಂತಮ್ಮ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿ ಕರಡು ಸಿದ್ಧಪಡಿಸಿದ್ದು, ಒಂದೆರಡು ಸಭೆಗಳಲ್ಲಿ ಸಮಗ್ರ ನೀತಿ ಸಿದ್ಧವಾಗಲಿದೆ. ಆ ನಂತರ ಸಚಿವ ಸಂಪುಟದಲ್ಲಿ ಮಂಡಿಸಲಾಗುತ್ತದೆ. ಬಹುತೇಕ ಒಂದು ತಿಂಗಳಿನಲ್ಲಿ ನೀತಿ ಹೊರಬರಲಿದೆ.

    ಸಮಗ್ರ ನೀತಿಯ ಅಗತ್ಯ ಏಕೆ?: ಮೊಬೈಲ್ ಬಳಕೆಯಲ್ಲಿ ರಾಜ್ಯ ಶೇ.100 ಪ್ರಗತಿ ಸಾಧಿಸಿದೆ. ಕರೊನಾ ಬಳಿಕ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಯುವಕರು, ಹಿರಿಯ ನಾಗರಿಕರು, ಗ್ರಾಮೀಣ ಜನರು, ಮಹಿಳೆಯರನ್ನು ಸುಲಭವಾಗಿ ಮೋಸ ಮಾಡಲಾಗುತ್ತಿದೆ. ಸೈಬರ್ ದಾಳಿಗಳು, ಕಂಪ್ಯೂಟರ್​ನಲ್ಲಿ ಡೇಟಾ ಕಬಳಿಸುವ ಪ್ರಯತ್ನ ನಡೆಯದಂತೆ ಎಚ್ಚರವಹಿಸುವುದು. ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿ ಸೇರಿ ಅನೇಕ ಯೋಜನೆಗಳಲ್ಲಿ ಇ-ವಹಿವಾಟು ನಡೆಯುವಾಗ ಹ್ಯಾಕ್ ಆಗದಂತೆ ನೋಡಿಕೊಳ್ಳುವುದು. ವಿಶ್ವವಿದ್ಯಾಲಯಗಳಲ್ಲಿ ಅಂಕಪಟ್ಟಿಯನ್ನು ಹ್ಯಾಕ್ ಆಗದಂತೆ ಎಚ್ಚರ ವಹಿಸಬೇಕಾಗಿದೆ. ಖಜಾನೆಯಲ್ಲಿ ದತ್ತಾಂಶ ಸುರಕ್ಷಿತವಾಗಿರಬೇಕಾಗಿದೆ. ಇಂಥ ಎಲ್ಲ ಅಂಶಗಳಿಗೆ ಪೂರಕವಾಗಿ ಸಮಗ್ರವಾಗಿ ನೀತಿ ತರುವುದಕ್ಕೆ ಸರ್ಕಾರ ನಿರ್ಧರಿಸಿದೆ.

    ಮಾಹಿತಿ ತಂತ್ರಜ್ಞಾನ ವಿಸ್ತಾರಗೊಂಡಂತೆ ಸೈಬರ್ ಅಪರಾಧ ಆಗದಂತೆ ತಡೆಯುವುದು ಅತ್ಯಂತ ಮುಖ್ಯವಾಗಿದೆ. ಜತೆಗೆ ಸೈಬರ್ ಭದ್ರತೆಯನ್ನು ಉದ್ದಿಮೆಯನ್ನಾಗಿಯೂ ಬೆಳೆಸಬೇಕಾಗಿದೆ. ಶಿಕ್ಷಣದಲ್ಲಿಯೂ ಈ ವಿಷಯವನ್ನು ತರಲಾಗುತ್ತದೆ. ಅದಕ್ಕಾಗಿಯೇ ಸಮಗ್ರ ನೀತಿಯನ್ನು ತರುತ್ತಿದ್ದೇವೆ. ಆದಷ್ಟು ಬೇಗ ಇದು ಜಾರಿಗೆ ಬರಲಿದೆ.

    | ಡಾ. ಸಿ.ಎನ್. ಅಶ್ವತ್ಥನಾರಾಯಣ ಐಟಿ ಮತ್ತು ಬಿಟಿ ಸಚಿವ

    ಸೈಬರ್ ಭದ್ರತಾ ನೀತಿ ತರುವುದನ್ನು 2021ರ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿತ್ತು. ಐಐಎಸ್​ಸಿಯ ಸೆಂಟರ್ ಫಾರ್ ಎಕ್ಸಲೆನ್ಸ್​ನ ತಜ್ಞರು ನೀತಿ ಸಿದ್ಧಪಡಿಸಿಕೊಟ್ಟಿದ್ದಾರೆ. ಜತೆಗೆ ಗೃಹ ಇಲಾಖೆಯ ನೀತಿಯನ್ನೂ ಸೇರಿಸುತ್ತೇವೆ. ಇನ್ನೆರಡು ಸಭೆ ನಡೆದರೆ ನೀತಿ ಅಂತಿಮವಾಗಲಿದೆ.

    | ಮೀನಾ ನಾಗರಾಜ್ ನಿರ್ದೇಶಕರು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ

    ಐದು ಸ್ತಂಭಗಳು: ಸೈಬರ್ ಸುರಕ್ಷತಾ ನೀತಿಯನ್ನು ಐದು ಸ್ತಂಭಗಳ ಆಧಾರದಲ್ಲಿ ಸಿದ್ಧಪಡಿಸಲಾಗುತ್ತದೆ. ಜಾಗೃತಿ, ಕೌಶಲಾಭಿವೃದ್ಧಿ, ಉದ್ದಿಮೆಗಳಿಗೆ ಪ್ರೋತ್ಸಾಹ, ಸಂಶೋಧನೆ ಮತ್ತು ನಾವಿನ್ಯತೆ ಹಾಗೂ ಸ್ಟಾರ್ಟಪ್​ಗಳ ಅಭಿವೃದ್ಧಿ ಒಳಗೊಂಡಿದೆ. ಇಸ್ರೇಲ್, ಜರ್ಮನಿಗಳು ಸೈಬರ್ ಸೆಕ್ಯುರಿಟಿಯಲ್ಲಿ ಬಲಶಾಲಿಯಾಗಿವೆ. ಅವುಗಳ ನೆರವನ್ನು ಪಡೆಯಲಾಗುತ್ತದೆ.

    ದಾಳಿ ತಡೆಯುವುದು ಹೇಗೆ?: ಸೈಬರ್ ದಾಳಿಗಳ ಬೆದರಿಕೆಗಳು ಬರುತ್ತಿದ್ದಂತೆ ಅದರ ತಡೆಗೆ ಪ್ರಯತ್ನ ಮಾಡುವುದು, ಸರ್ಕಾರಿ ಸಂಸ್ಥೆಗಳಿಗೆ ಮಾಹಿತಿ ರವಾನೆ ಮಾಡುವುದು. ಅದಕ್ಕಾಗಿ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ರಚನೆ ಮಾಡಿ ಅದರ ಮೂಲಕ ಕಾರ್ಯೋನ್ಮುಖವಾಗಲಿದೆ. ಉದ್ದಿಮೆಗಳಿಗೆ ಮಾಹಿತಿ ಕಾಲಕಾಲಕ್ಕೆ ನೀಡಲಾಗುತ್ತದೆ. ಅಪರಾಧ ನಡೆಯದಂತೆ ತಡೆಯುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

    ಜಾಗೃತಿಗೆ ಒತ್ತು: ಸೈಬರ್ ಅಪರಾಧಗಳು, ಅಪರಾಧ ಸಂಭವಿಸಿದ ತಕ್ಷಣ ಏನೇನು ಮಾಡಬೇಕೆಂಬ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೊಸ ನೀತಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳಲ್ಲಿ ಇದನ್ನೇ ಒಂದು ವಿಷಯವನ್ನಾಗಿ ಬೋಧಿಸುವುದು, ತರಬೇತಿ ನೀಡುವುದು, ಸಂಘ-ಸಂಸ್ಥೆಗಳು, ಕೈಗಾರಿಕೆಗಳ ಸಿಎಸ್​ಆರ್ ನಿಧಿ ಬಳಕೆ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಒಟಿಪಿಯನ್ನು ಯಾವುದೇ ಕಾರಣಕ್ಕೂ ಹಂಚಿಕೆ ಮಾಡದಿರುವಂತೆ ಜಾಗೃತಿ ಮೂಡಿಸಲಾಗುತ್ತದೆ.

    ಉದ್ದಿಮೆಯಾಗಿ ಪರಿವರ್ತನೆ: ಸೈಬರ್ ಸೆಕ್ಯುರಿಟಿಯನ್ನು ಮತ್ತೊಂದು ಉದ್ದಿಮೆಯಾಗುವಂತೆ ಪ್ರೋತ್ಸಾಹಿಸುವುದು ನೀತಿಯ ಉದ್ದೇಶಗಳಲ್ಲೊಂದು ಭಾಗವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್​ಇಪಿ) ಸೈಬರ್ ಸೆಕ್ಯುರಿಟಿ ಸಹ ಹೊಸ ವಿಷಯವಾಗಿ ಸೇರ್ಪಡೆಯಾಗುತ್ತಿದೆ. ಉದ್ದಿಮೆಗಳಿಗೆ ಈ ವಿಷಯದಲ್ಲಿ ತಜ್ಞರ ಅಗತ್ಯವನ್ನು ಒದಗಿಸುವ ಪ್ರಯತ್ನವೂ ಸೇರ್ಪಡೆಯಾಗಿದೆ. ಈಗ ಈ ವಲಯದಲ್ಲಿ ಸ್ಟಾರ್ಟಪ್​ಗಳು ಬರುತ್ತಿದ್ದು ಅವುಗಳಿಗೆ ಪ್ರೋತ್ಸಾಹ ನೀಡುವ ಅಂಶವೂ ನೀತಿಯಲ್ಲಿ ಇರಲಿದೆ. ಸೈಬರ್ ಸೆಕ್ಯುರಿಟಿ ಉದ್ದಿಮೆಗಳೇ ಬಂದರೆ ಈ ವಲಯದಲ್ಲಿ ಹೂಡಿಕೆಗೆ ಸಹಕಾರಿಯಾಗುತ್ತದೆ. ಹೂಡಿಕೆ ಯನ್ನು 2ಮತ್ತು 3ನೇ ಹಂತದ ನಗರಗಳಿಗೆ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ.

    ಯಾವ ರಾಜ್ಯದಲ್ಲಿ ನೀತಿ ಇದೆ?: ಹರಿಯಾಣ, ತ.ನಾಡು, ತೆಲಂಗಾಣ, ಮಹಾರಾಷ್ಟ್ರ

    ನಾಲ್ಕು ಉದ್ದೇಶಗಳು: ಹೊಸ ನೀತಿಯೂ ನಾಲ್ಕು ಉದ್ದೇಶ ಒಳಗೊಂಡಿದೆ. ಮೊದಲನೆಯದು ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಮೂಲಕ ತಡೆಯುವುದು. ಎರಡನೆಯದು ಉದ್ದಿಮೆ ಮತ್ತು ಸರ್ಕಾರಗಳ ಇಲಾಖೆ ಸರ್ವರ್ ಮೇಲೆ ದಾಳಿಯಾಗದಂತೆ ಎಚ್ಚರವಹಿಸುವುದು. ಮೂರನೆಯದು ಸೈಬರ್ ಸೆಕ್ಯುರಿಟಿ ವಿಷಯ ಅಳವಡಿಕೆ. ನಾಲ್ಕನೆಯದು ಒಂದು ಉದ್ದಿಮೆಯನ್ನಾಗಿ ಪ್ರೋತ್ಸಾಹಿಸುವುದು.

    ಅಪರಾಧಗಳ ಸಾಧ್ಯತೆ ಎಲ್ಲೆಲ್ಲಿ?
    • ಹಾಲು ಉತ್ಪಾದಕ ಸಂಘಗಳ ವಹಿವಾಟು
    • ರೈತ ಉತ್ಪಾದಕ ಸಂಸ್ಥೆಗಳ ವಹಿವಾಟು
    • ಸರ್ಕಾರದ ಖಜಾನೆಯ ದತ್ತಾಂಶ
    • ಮಹಿಳಾ ಸ್ವಸಹಾಯ ಸಂಘಗಳ ವಹಿವಾಟು
    • ಸರ್ಕಾರದ ಸರ್ವರ್ ಮೇಲೆ ವೈರಸ್ ದಾಳಿ
    • ಪಿಂಚಣಿ ಪಾವತಿ ವ್ಯವಸ್ಥೆಯಲ್ಲಿ
    • ವಿಶ್ವವಿದ್ಯಾಲಯಗಳ ಅಂಕಪಟ್ಟಿ
    • ಸರ್ಕಾರದಲ್ಲಿ ಇರುವ ವಿವಿಧ ದತ್ತಾಂಶ
    • ಮಾಹಿತಿ ತಂತ್ರಜ್ಞಾನ ಉದ್ದಿಮೆಗಳ ಮೇಲೆ ಸೈಬರ್ ದಾಳಿ
    • ಇ-ಕಾಮರ್ಸ್ ವಹಿವಾಟಿನಲ್ಲಿ

    ಫ್ಲೈಓವರ್​ನಿಂದ ಹಳ್ಳಕ್ಕೆ ಬಿದ್ದ ಕಾರು; ಮೂವರ ಸ್ಥಿತಿ ಚಿಂತಾಜನಕ, ನಾಲ್ವರಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts