

ಬೆಂಗಳೂರು: ‘ತುಳಸಿ ದಳ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ್ದ ವೇಮಗಲ್ ಜಗನ್ನಾಥ ರಾವ್, ಈಗ ಇನ್ನೊಂದು ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಥ್ರಿಲ್ಲರ್ ಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದು, ಅದಕ್ಕೊಂದು ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರದ ಹೆಸರೇನು ಗೊತ್ತಾ? ‘ನನ್ನ ಹುಡುಕಿ ಕೊಡಿ’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದೆ.
‘ನನ್ನ ಹುಡುಕಿ ಕೊಡಿ’ ಮೂಲಕ ಧನ್ವಿತ್ ಎಂಬ ಯುವಕನನ್ನು ಹೀರೋ ಆಗಿ ಪರಿಚಯಿಸುತ್ತಿದ್ದಾರೆ ವೇಮಗಲ್. ಧನ್ವಿತ್ ಈ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಚಿತ್ರದ ನಿರ್ವಣದಲ್ಲೂ ತೊಡಗಿಸಿಕೊಂಡಿದ್ದಾರೆ.
ಇಲ್ಲಿ ಯಾರು, ಯಾರನ್ನು ಹುಡುಕುತ್ತಿದ್ದಾರೆ ಎಂಬ ಪ್ರಶ್ನೆಗೆ ಜಗನ್ನಾಥ ರಾವ್ ಉತ್ತರಿಸುವುದಿಲ್ಲ. ಏನಾದರೂ ಹೇಳಿದರೆ ರಹಸ್ಯ ಬಿಟ್ಟುಕೊಟ್ಟಂತಾಗುತ್ತದೆ ಎನ್ನುತ್ತಾರೆ. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ಧನ್ವಿತ್ಗೆ ನಾಯಕಿಯರಾಗಿ ಮೀನಾಕ್ಷಿ ಜೈಸ್ವಾಲ್ ಹಾಗೂ ಸಾಯಿ ನಮನ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ. ಧನ್ವಿತ್ ಮೂಲತಃ ಕನಕಪುರದವರು. ಈ ಹಿಂದೆ ವೇಮಗಲ್ ನಿರ್ದೇಶನದ ‘ಆವರ್ತ’ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ. ಈಗ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಅವರಿಗೂ ನಿರ್ದೇಶಕರು ಕಥೆ ಹೇಳಿಲ್ಲವಂತೆ. ‘ಒಂದೆಳೆ ಹೇಳಿದ್ದಾರೆ. ಬಹಳ ಚೆನ್ನಾಗಿದೆ’ ಎಂದಷ್ಟೇ ಹೇಳುತ್ತಾರೆ ಧನ್ವಿತ್.