More

    ತೊಕ್ಕೊಟ್ಟು ಒಳಪೇಟೆಯಲ್ಲಿ ಹೊಸ ಮಾರ್ಕೆಟ್

    ಉಳ್ಳಾಲ: ತೊಕ್ಕೊಟ್ಟು ಭಾಗದ ಜನರ ಬಹುವರ್ಷಗಳ ಕನಸಾಗಿದ್ದ ಸುಸಜ್ಜಿತ ಮಾರುಕಟ್ಟೆ ಕಟ್ಟಡ ಕಾಮಗಾರಿ ಶಿಲಾನ್ಯಾಸ ನಡೆದ ಕೆಲವೇ ದಿನಗಳಲ್ಲಿ ಆರಂಭಗೊಂಡಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿ ಹಿಂದಿನಿಂದಲೂ ಮೀನು, ಮಾಂಸ, ತರಕಾರಿ, ಹಣ್ಣು ಮಾರಾಟದ ಮಾರುಕಟ್ಟೆ ಇತ್ತಾದರೂ ಅತ್ಯಂತ ಇಕ್ಕಟ್ಟಾಗಿಯೂ, ಅಶುಚಿತ್ವದಿಂದಲೂ ಕೂಡಿತ್ತು. ಇದರಿಂದ ಈ ಮಾರುಕಟ್ಟೆ ಪ್ರವೇಶಿಸುವುದಕ್ಕೇ ಹೆಚ್ಚಿನವರು ಹಿಂದೆ ಮುಂದೆ ನೋಡುತ್ತಿದ್ದರು. ಇಲ್ಲಿಗೆ ಸುಸಜ್ಜಿತ ಮಾರ್ಕೆಟ್ ಕಟ್ಟಡ ಬೇಕೆಂಬ ಜನರ ಬೇಡಿಕೆಯಂತೆ ನಗರೋತ್ಥಾನ ಅನುದಾನದಡಿ ಒಂದು ಕೋಟಿ ರೂ. ಮೀಸಲಿಟ್ಟು ವಿಶಾಲ ಜಾಗದ ಹುಡುಕಾಟ ನಡೆಸಲಾಗಿತ್ತು. ಆದರೆ ಜಾಗ ಸಿಗದೆ ತೊಕೊಟ್ಟಿನ ಹಳೇ ಕಟ್ಟಡ ಕೆಡವಿ ಕಳೆದ ಡಿಸೆಂಬರ್ 19ರಂದು ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದ್ದರು.

    ಹೊಸ ಕಟ್ಟಡಕ್ಕೆ ರೈಲ್ವೆ ಕಂಟಕ?
    ಹಳೇ ಮಾರುಕಟ್ಟೆ ಇದ್ದ ಜಾಗ ಒಂದಷ್ಟು ರೈಲ್ವೆ ಇಲಾಖೆಗೆ ಸೇರಿತ್ತು. ಈಗ ಹೊಸ ಕಟ್ಟಡ ನಿರ್ಮಾಣ ಆಗುವ ಜಾಗಕ್ಕೆ ತಾಗಿಕೊಂಡೇ ರೈಲ್ವೆ ಇಲಾಖೆ ಜಾಗದ ಗುರುತು ಇದೆ. ಬಹುಮಹಡಿ ಕಟ್ಟಡ ನಿರ್ಮಾಣವಾದರೂ ರೈಲು ಸಂಚಾರದಿಂದ ಬಿರುಕು ಬೀಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

    ತೊಕ್ಕೊಟ್ಟಿನಲ್ಲಿ ನೂತನ ಮಾರುಕಟ್ಟೆ ಕಟ್ಟಡಕ್ಕೆ ಮೂರು ವರ್ಷಗಳ ಹಿಂದೆಯೇ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರೆ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ತಡವಾಗಿ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ಎಂಟು ತಿಂಗಳಲ್ಲಿ ನಿರ್ಮಾಣ ಆಗಲಿದ್ದು, ಹಿಂದೆ ಇದ್ದ ವ್ಯಾಪಾರಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
    – ಯು.ಟಿ.ಖಾದರ್, ಶಾಸಕ 

    ಹಲವು ವರ್ಷಗಳಿಂದ ಮಾರುಕಟ್ಟೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು, ನಗರೋತ್ಥಾನ ಅನುದಾನದಲ್ಲಿ ರೂಪಿಸಿದ ಯೋಜನೆ ಕಾರ್ಯಗತವಾಗಬೇಕು ಎನ್ನುವ ನೆಲೆಯಲ್ಲಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಬೇಡಿಕೆ.
    – ಚಂದ್ರಕಾಂತ, ಒಳಪೇಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts