More

    ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಲೇಷ್ಯಾಕ್ಕೆ ಹೊಸ ಪ್ರಧಾನಿ: ಮಹಾತಿರ್ ರಾಜಕೀಯ ಸಂಘರ್ಷ ಮುಂದುವರಿಕೆ

    ಕೌಲಾಲಂಪುರ: ಮಲೇಷ್ಯಾದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಅಷ್ಟೇನೂ ಪರಿಚಿತರಲ್ಲದ ಮಾಜಿ ಇಂಟೀರಿಯರ್ ಮಿನಿಸ್ಟರ್ ಮುಹಿಯುದ್ದೀನ್ ಯಾಸಿನ್ ಮಲೇಷ್ಯಾದ 8ನೇ ಪ್ರಧಾನಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ. 72 ವರ್ಷದ ಮುಹಿಯುದ್ದೀನ್​ ಅವರು ಸಾಂಪ್ರದಾಯಿಕ ಮಲಯ್ ಉಡುಪು ಧರಿಸಿ ಕೌಲಾಂಪುರದ ನ್ಯಾಷನಲ್ ಪೇಲೇಸ್​ನಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಮಹಾತಿರ್ ಮೊಹಮ್ಮದ್​ ನೇತೃತ್ವದ ಸರ್ಕಾರ ವಾರದ ಹಿಂದೆ ಪತನವಾದ ಬಳಿಕ ಈ ಬೆಳವಣಿಗೆ ನಡೆದಿದ್ದು, ಇದನ್ನು ಅವರು ಅಕ್ರಮ ಎಂದು ಖಂಡಿಸಿದ್ದಾರೆ.

    ಜಗತ್ತಿನ ಅತ್ಯಂತ ಹಿರಿಯ ನೇತಾರ 94 ವರ್ಷದ ಮಹಾತಿರ್​ ಅವರು ಸುಧಾರಣಾವಾದಿ “Pact of Hope” ಮೈತ್ರಿಯನ್ನು ರಚಿಸಿಕೊಂಡು 2018ರಲ್ಲಿ ಐತಿಹಾಸಿಕ ಜಯ ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಮೈತ್ರಿಯೊಳಗೆ ನಾಯಕತ್ವಕ್ಕಾಗಿ ನಡೆದ ಹೋರಾಟದ ವೇಳೆ ಅನ್ವರ್ ಇಬ್ರಾಹಿಂ ಅವರನ್ನು ದೂರ ಮಾಡುವ ಪ್ರಯತ್ನದಲ್ಲಿ ಮಹಾತಿರ್ ವಿಫಲರಾಗಿ ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಯುವಂತಾಯಿತು. ಸರ್ಕಾರವೂ ಪತನವಾಯಿತು.

    ಇದಾದ ನಂತರವೂ ಪ್ರಧಾನಿ ಗದ್ದುಗೆ ಏರಲು ಮಹಾತಿರ್ ಪ್ರಯತ್ನಿಸಿದ್ದು, ಈ ರೇಸ್​ನಲ್ಲೂ ಅವರು ಸೋಲು ಅನುಭವಿಸಿದ್ದಾರೆ. ತನಗೆ ಸಾಕಷ್ಟು ಬಹುಮತ ಇದೆ ಎಂದು ಮಹಾತಿರ್ ಪ್ರತಿಪಾದಿಸುತ್ತಿದ್ದರೂ, ಅಲ್ಲಿನ ರಾಜ ಪಹಾಂಗ್​ನ ಅಬ್ದುಲ್ಲಾ ಅವರು ಮುಹಿಯುದ್ದೀನ್​ ಯಾಸಿನ್ ಅವರನ್ನು ಪ್ರಧಾನಿಯನ್ನಾಗಿ ಶನಿವಾರ ನೇಮಕ ಮಾಡಿದ್ದಾರೆ. ಇದು ಮಹಾತಿರ್​ಗೆ ಆಘಾತ ನೀಡಿದೆ. ಅಲ್ಲದೆ, ದೇಶಾದ್ಯಂತ ಇದರ ವಿರುದ್ಧ ಸಾಮಾಜಿಕ ತಾಣಗಳಲ್ಲಿ #NotMyPM ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಅಭಿಯಾನವೂ ಆರಂಭವಾಗಿದೆ. ಇದು “Pact of Hope” ಮೈತ್ರಿಗೆ 2018ರಲ್ಲಿ ಜನಾದೇಶಕ್ಕೆ ವಿರುದ್ಧವಾದುದು ಎಂಬ ಕೂಗೂ ಎದ್ದಿದೆ.

    ಮುಹಿಯುದ್ದೀನ್​ ಅವರ ಮೈತ್ರಿಕೂಟದಲ್ಲಿ ಯುನೈಟೆಡ್ ಮಲಯ್ಸ್​ ನ್ಯಾಷನಲ್ ಆರ್ಗನೈಸೇಷನ್​(UMNO)ಕೂಡ ಒಳಗೊಂಡಿದೆ.ಪದಚ್ಯುತಗೊಂಡು ಅವಮಾನಿತರಾದ ನಜೀಬ್​ ರಜಾಕ್ ಅವರ ಪಕ್ಷ ಇದಾಗಿದ್ದು, ಭ್ರಷ್ಟಾಚಾರ ಸಂಬಂಧಿತ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಮಹಾತಿರ್ ಅವರು ದೇಶದ 222 ಸಂಸದರ ಬೆಂಬಲ ಹೊಂದಿಲ್ಲ ಎಂದೂ ಆರೋಪಿಸಿದ್ದು, ಅವರ ಪದಗ್ರಹಣ ಅಕ್ರಮ. ಗೆದ್ದವರು ವಿಪಕ್ಷ ಸ್ಥಾನದಲ್ಲೂ ಸೋತವರು ಆಡಳಿತ ಚುಕ್ಕಾಣಿ ಹಿಡಿದಿರುವ ವಿಲಕ್ಷಣ ರಾಜಕೀಯ ಸನ್ನಿವೇಶ ಇದು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts