More

    ನೆಹರು ಮೈದಾನಕ್ಕೆ ಹೊಸ ಕಳೆ

    ಹುಬ್ಬಳ್ಳಿ: ಎಲ್ಲವೂ ಅಂದುಕೊಂಡಂತೆ ಸಾಗಿದರೆ 2022ರ ವೇಳೆಗೆ ಹುಬ್ಬಳ್ಳಿಯ ಮಧ್ಯವರ್ತಿ ಸ್ಥಳದಲ್ಲಿರುವ ನೆಹರು ಮೈದಾನ ಹಲವು ಕ್ರೀಡಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಲಿದೆ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಮೈದಾನದ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದೆ ವೃತ್ತಿಪರ ಕ್ರೀಡಾಪಟುಗಳಿಗೆ ಯೋಗ್ಯ ಸ್ಥಳವಾಗಿ ರೂಪುಗೊಳ್ಳಲಿದೆ.

    ನೆಹರು ಮೈದಾನದಲ್ಲಿ ಕ್ರೀಡೆಯೇ ಪ್ರಧಾನವಾಗಬೇಕಿತ್ತು. ಆದರೆ, ಇಲ್ಲಿಯವರೆಗೆ ಹಾಗೇ ಆಗಿಲ್ಲ. ಚುನಾವಣೆ ಬಹಿರಂಗ ಸಭೆ, ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಿನಿಮಾ ಮಂದಿಯ ಮೆಗಾ ಶೋ ಇತ್ಯಾದಿ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದೇ ಹೆಚ್ಚು. ಸುತ್ತಮುತ್ತಲಿನ ನಿವಾಸಿಗಳಿಗೆ ಮಾರ್ನಿಂಗ್ ವಾಕ್​ಗೆ ಇದು ಈಗಲೂ ಪ್ರಶಸ್ತವಾದ ಸ್ಥಳ. ಇದೀಗ ಮೈದಾನವನ್ನು ನವೀಕರಿಸಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನ ನಡೆಸಲಾಗಿದೆ ಎನ್ನಬಹುದು.

    ಸ್ಮಾರ್ಟ್ ಸಿಟಿ ವತಿಯಿಂದ 21.44 ಕೋಟಿ ರೂಪಾಯಿ ಅನುದಾನದಲ್ಲಿ ನೆಹರು ಮೈದಾನ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೀದರ್​ನ ಕೋಟರ್ಕಿ ಕನ್​ಸ್ಟ್ರಕ್ಷನ್ ಪ್ರೖೆವೇಟ್ ಲಿಮಿಟೆಡ್​ನವರು ಕಾಮಗಾರಿ ಗುತ್ತಿಗೆ ಹಿಡಿದು 2020ರ ಜೂನ್​ನಲ್ಲಿ ಕೆಲಸ ಆರಂಭಿಸಿದ್ದಾರೆ. 2021ರ ಡಿಸೆಂಬರ್​ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಒಳಾಂಗಣ ಹಾಗೂ ಹೊರಾಂಗಣ ಸೇರಿ ಒಟ್ಟು 15 ಕ್ರೀಡೆಗಳನ್ನು ಆಡಲು ಅನುಕೂಲವಾಗುವಂತೆ ಮೈದಾನ ಸಜ್ಜುಗೊಳ್ಳಲಿದೆ. ಫುಟಬಾಲ್, ವಾಲಿಬಾಲ್ ಹಾಗೂ ಬಾಸ್ಕೆಟ್​ಬಾಲ್ ಅಂಕಣಗಳು ಬರಲಿವೆ. ಮೈದಾನದ ಸೆಂಟರ್​ನಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ಇರಲಿದೆ. ಕ್ರಿಕೆಟ್ ಪ್ರ್ಯಾಕ್ಟಿಸ್​ಗೂ ಅವಕಾಶ ಕಲ್ಪಿಸಲಾಗಿದೆ. ಎರಡು ನೆಟ್ ಕ್ರಿಕೆಟ್ ಪಿಚ್ ನಿರ್ವಣವಾಗಲಿದೆ. ಓಪನ್ ಜಿಮ್ ಹಾಗೂ ಲಾಂಗ್​ಜಂಪ್ ಟ್ರ್ಯಾಕ್ ಜತೆ ಹೊರಾಂಗಣ ಕಬಡ್ಡಿ ಅಂಕಣ ಸಹ ಇರಲಿದೆ.

    ಒಳಾಂಗಣ ಕ್ರೀಡೆಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮ್ಯಾಟ್ ಕಬಡ್ಡಿ, ಮ್ಯಾಟ್ ಕುಸ್ತಿ, ಕರಾಟೆ ತರಬೇತಿ, ಬ್ಯಾಡ್ಮಿಂಟನ್ ಅಂಕಣಗಳು ಇರಲಿವೆ. ಜತೆಗೆ, ಚೆಸ್ ಮತ್ತು ಕೇರಂ ಸಹ ಆಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

    ಹಾಲಿ ಇರುವ ಬ್ಯಾಡ್ಮಿಂಟನ್ (ಇನ್​ಡೋರ್) ಕಟ್ಟಡವನ್ನು ಉಳಿಸಿಕೊಳ್ಳಲಾಗುವುದು. ಇದರ ಪಕ್ಕದಲ್ಲೇ 3945 ಚದರ ಮೀಟರ್ ವಿಸ್ತೀರ್ಣದಲ್ಲಿ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ವಣವಾಗಲಿದೆ. ಇನ್ನೊಂದು ಕಡೆ 2530 ಜನ ಗಣ್ಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವ 202 ಚದರ ಮೀಟರ್ ವಿಸ್ತೀರ್ಣದ ವಿಐಪಿ ಲಾಂಜ್ ತಲೆ ಎತ್ತಲಿದೆ. ಇಲ್ಲಿ ಕೋಚ್ ಎರಿಯಾ, ಟೇಬಲ್ ಟೆನಿಸ್, ಜಿಮ್ನಾಸ್ಟಿಕ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.

    1958ರಲ್ಲಿ ನಿರ್ವಣಗೊಂಡ ನೆಹರು ಮೈದಾನ 1972, 1976 ಹಾಗೂ 1992ರಲ್ಲಿ ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಜತೆಗೆ ಕೆಲವು ಸಹಾಯಾರ್ಥ ಪಂದ್ಯಗಳಿಗೆ ಖ್ಯಾತನಾಮ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಈ ಮೈದಾನ ಕ್ರಿಕೆಟ್​ಗೆ ಸೀಮಿತವಾಗಿರದೇ ಫುಟಬಾಲ್, ಅಥ್ಲೆಟಿಕ್ಸ್ ಪಂದ್ಯಾವಳಿಗೂ ಆತಿಥ್ಯ ವಹಿಸಿದೆ.

    ನೆಹರು ಮೈದಾನದಲ್ಲಿ ಕ್ರಿಕೆಟ್, ಫುಟಬಾಲ್ ಸೇರಿ 15 ಕ್ರೀಡೆಗಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ವರ್ಷ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
    ಎಸ್.ಎಚ್.ನರೇಗಲ್, ವಿಶೇಷಾಧಿಕಾರಿ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts