More

    ಬಡ ಕುಟ್ಟುಂಬಕ್ಕೆ ಹೊಸ ಮನೆ ಕೊಡುಗೆ

    ಬೈಂದೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮಾಜಮುಖಿ ಆಗಿದ್ದರೆ ಗ್ರಾಮದ ಬಡ ಜನರ ಸಂಕಷ್ಟ ದೂರ ಮಾಡಬಹುದು ಎಂಬುದಕ್ಕೆ ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ನರಸಿಂಹ ದೇವಾಡಿಗ ಉದಾಹರಣೆ. ಗ್ರಾಮದ ಅಭಿವೃದ್ಧಿಗೆ ಸದಾ ತುಡಿಯುತ್ತಿರುವ ಅವರು ಬಡ ಕುಟುಂಬಕ್ಕೆ ಏಳು ಲಕ್ಷ ರೂ. ಹೊಂದಿಸಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಗ್ರಾಮದ ಆಚಾರ್‌ಬೆಟ್ಟಿನ ಇಂದಿರಾ ಆಚಾರ್ 10 ವರ್ಷ ಹಿಂದೆ ಪತಿ ಮುತ್ತಯ್ಯ ಆಚಾರ್ ಅವರನ್ನು ಕಳೆದುಕೊಂಡಿದ್ದರು. ಬಳಿಕ ಮಗಳು ಗೀತಾ ಜತೆ ಕೂಲಿ ಮಾಡುತ್ತ ಜೀವನ ಸಾಗಿಸುವಂತಾಯಿತು. ಶಿಥಿಲ ಮನೆಯಲ್ಲಿ ಭಯದಲ್ಲೇ ಬದುಕು ಸಾಗಿಸುತ್ತಿದ್ದು, ಆಗಾಗ ಅನಾರೋಗ್ಯವೂ ಕಾಡುತ್ತಿತ್ತು. ಮಳೆಗಾಲದಲ್ಲಿ ರಾತ್ರಿ ಕಳೆಯಲು ನೆರೆಮನೆಗೆ ಹೋಗುವ ಸ್ಥಿತಿ ಅವರದಾಗಿತ್ತು. ಹಿಂದೊಮ್ಮೆ ಮಳೆಗಾಲದಲ್ಲಿ ಮನೆ ಭಾಗಶಃ ಕುಸಿದಾಗ ಜನರೇ ಸೇರಿ ಸರಿಪಡಿಸಿದ್ದರು. ಅವರ ಅನಾಥ ಸ್ಥಿತಿಗೆ ಕರಗಿದ ನರಸಿಂಹ ದೇವಾಡಿಗ ಮೂರು ವರ್ಷಗಳ ಹಿಂದೆ ಅವರಿಗೆ ಸೂರು ಒದಗಿಸುವ ಸಂಕಲ್ಪ ಮಾಡಿದರು.
    ಸರ್ಕಾರದ ಬಸವ ವಸತಿ ಯೋಜನೆಯ 1.2 ಲಕ್ಷ ರೂ. ಮೂಲನಿಧಿಯೊಂದಿಗೆ ಕೆಲಸ ಆರಂಭಿಸಿದರು. ವಿಶ್ವಕರ್ಮ ಸಮಾಜ ಸೇವಾ ಸಂಘ 1.5 ಲಕ್ಷ ರೂ. ವೆಚ್ಚದಲ್ಲಿ ಆರ್‌ಸಿಸಿ ಮಾಡು ನಿರ್ಮಿಸಿಕೊಟ್ಟಿತು. ಕಳೆದ ವರ್ಷ ಸಂಘಟನೆಗಳ, ದಾನಿಗಳ ನೆರವು ಪಡೆದು ಕೆಲಸ ಮುಂದುವರಿಸಿದರು. ಎರಡು ಕೊಠಡಿಗಳ 540 ಚದರಡಿಯ ಅಚ್ಚುಕಟ್ಟಾದ ಮನೆ ಈಗ ಸಿದ್ಧವಾಗಿದೆ. ವಾರ್ಡ್ ಸದಸ್ಯ ನರಸಿಂಹ ಡಿ. ಸಹಕಾರದೊಂದಿಗೆ ನರಸಿಂಹ ದೇವಾಡಿಗ ಸ್ವತಃ ನಿಂತು ಮಾಡಿಸಿದರು. ಮನೆಗೆ 15 ಸಾವಿರ ರೂ. ವೆಚ್ಚದಲ್ಲಿ ವಿದ್ಯುತ್ ಅಳವಡಿಸಲಾಗಿದೆ. ಕುಸಿದ ಬಾವಿಯನ್ನು ಜಿಪಂ ಅನುದಾನದಿಂದ ದುರಸ್ತಿ ಮಾಡಲಾಗಿದೆ. ಶಿವರಾತ್ರಿಯಂದು ಮನೆ ಹಸ್ತಾಂತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts