More

    ಎನ್​ಪಿಎಸ್ ಸಿಬ್ಬಂದಿಯಲ್ಲಿ ಮೂಡಿದ ಹೊಸ ಆಶಾಭಾವ: ಕೇಂದ್ರ ಸರ್ಕಾರದ ನಿರ್ದೇಶನ, 8 ಅಧಿಕಾರಿಗಳಿಗೆ ಹಳೇ ಪಿಂಚಣಿ ಯೋಜನೆ ಲಾಭ

    ಬೆಂಗಳೂರು: ಕೆಲವು ಐಎಎಸ್, ಐಪಿಎಸ್ ಹಾಗೂ ಐಎಫ್​ಎಸ್ ಅಧಿಕಾರಿಗಳಿಗೆ ಹೊಸ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದಾಗಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ವಾಪಸ್ಸಾಗಿದ್ದು, ಉಳಿದ ಎನ್​ಪಿಎಸ್ ಸಿಬ್ಬಂದಿಯಲ್ಲೂ ಹೊಸ ಆಶಾಭಾವನೆ ಮೂಡಿದೆ.

    ಕೇಂದ್ರ ಸರ್ಕಾರದ ನಿರ್ದೇಶನದಂತೆ 8 ಹಿರಿಯ ಅಧಿಕಾರಿಗಳನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸಿ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿತ್ತು. ಎನ್​ಪಿಎಸ್ ಜಾರಿಗೆ ಮುನ್ನ ಖಾಲಿಯಿರುವ ಹುದ್ದೆಗಳ ಭರ್ತಿ ಅಧಿಸೂಚನೆಗೆ ಒಪಿಎಸ್ ಅನ್ವಯಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಇದರಿಂದಾಗಿ ರಾಜ್ಯ ಎನ್​ಪಿಎಸ್ ನೌಕರರ ಒತ್ತಡ ಮತ್ತಷ್ಟು ತೀವ್ರಗೊಂಡಿದೆ.

    ಸದ್ಯಕ್ಕಿರುವ ಪ್ರಸ್ತಾವನೆ: ಒಪಿಎಸ್ ಬೇಡಿಕೆ ಕುರಿತು ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಹಲವು ಸುತ್ತಿನ ಮಾತುಕತೆಗಳಾಗಿವೆ. ಸದ್ಯಕ್ಕೆ 11,700 ಸಿಬ್ಬಂದಿಗೆ ಒಪಿಎಸ್ ಅನ್ವಯ ಪ್ರಸ್ತಾವನೆಯು ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ. ಸಿಎಂ ಸಿದ್ದರಾಮಯ್ಯ ಜುಲೈನಲ್ಲಿ ಮಂಡಿಸಿದ ಬಜೆಟ್​ನಲ್ಲಿ ಎನ್​ಪಿಎಸ್ ಪರಿಶೀಲನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರೊಂದಿಗೆ ಕೇಂದ್ರದ ಆದೇಶದ ಅಸ್ತ್ರವೂ ಎನ್​ಪಿಎಸ್ ನೌಕರರಿಗೆ ಲಭಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಎನ್​ಪಿಎಸ್ 2006ರಲ್ಲಿ ಜಾರಿಯಾಗಿದೆ. ಅದಕ್ಕೂ ಮುನ್ನ ಹುದ್ದೆಗಳ ಭರ್ತಿಗೆ ಹೊರಡಿಸಿದ ಅಧಿಸೂಚನೆಯಡಿ ನೇಮಕವಾದ ನೌಕರರಿಗೆ ಒಪಿಎಸ್ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್ 2019ರಲ್ಲಿ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ 2006 ಅಥವಾ ನಂತರದ ಅವಧಿಯಲ್ಲಿ ಹುದ್ದೆಗಳಿಗೆ ನೇಮಕವಾಗಿ, ಅದಕ್ಕೂ ಹುದ್ದೆಗಳ ಭರ್ತಿ ಅಧಿಸೂಚನೆ ಹೊರಡಿಸಿದ್ದರೆ ಒಪಿಎಸ್ ಅನ್ವಯಿಸಲು ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸ್ಪಷ್ಟ ಮಾರ್ಗಸೂಚಿ ಸಹಿತ ಆದೇಶಿಸಿದೆ.

    ಕೇಂದ್ರದ ಅಧಿಕೃತ ಆದೇಶವನ್ನು ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು. ವಿಧಾನಸಭೆ ಚುನಾವಣೆಗೆ ಅಧಿಸೂಚನೆ, ನೀತಿ ಸಂಹಿತೆ ಜಾರಿ, ಹೊಸ ಸರ್ಕಾರ ರಚನೆ ಕಾರಣ ಈ ಪ್ರಕ್ರಿಯೆ ವಿಳಂಬವಾಗಿದೆ.

    ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಸಿಎಸ್, ಆರ್ಥಿಕ ಇಲಾಖೆ ಕಾರ್ಯದರ್ಶಿ, ಎಸಿಎಸ್ ಜತೆಗೆ ಹಲವು ಸುತ್ತಿನ ಚರ್ಚೆಗಳಾಗಿವೆ. ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ದತ್ತಾಂಶದ ಪ್ರಕಾರ 2005ರ ಅಧಿಸೂಚನೆಯಡಿ 11,700 ಸಿಬ್ಬಂದಿ ನೇಮಕವಾಗಿದ್ದಾರೆ.

    ಈ ಪೈಕಿ 5000 ಕ್ಕೂ ಹೆಚ್ಚು ಶಿಕ್ಷಕರು ಸೇರಿದ್ದಾರೆ. ಕೆಪಿಎಸ್​ಸಿ ಮತ್ತಿತರ ಇಲಾಖೆಗಳಿಂದ ಭರ್ತಿ ಮಾಡಿದ ಹುದ್ದೆಗಳು 7000 ಆಸುಪಾಸಿನಲ್ಲಿವೆ. ಆರ್ಥಿಕ ಇಲಾಖೆ ಕಾರ್ಯದರ್ಶಿ ರೇಜು ಕೂಡ 2005ರ ಅಧಿಸೂಚನೆಯಡಿ ನೇಮಕವಾದವರು ಎಂದು ಹೇಳಲಾಗುತ್ತಿದೆ.

    ವಿವಿಧ ಇಲಾಖೆಗಳ ಮತ್ತಷ್ಟು ವಿವರ, ಅಧಿಕೃತ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಆರ್ಥಿಕ ವೆಚ್ಚ, ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

    ಪ್ರಾಥಮಿಕ ಶಾಲಾ ಶಿಕ್ಷಕರ 5000 ಹುದ್ದೆಗಳ ಭರ್ತಿಗೆ 2005ರಲ್ಲಿ ಅಧಿಸೂಚನೆ ಪ್ರಕಟವಾಗಿತ್ತು. ಮೀಸಲಾತಿ ವಿಚಾರವಾಗಿ ಅಂಗವಿಕಲ ಮಹಿಳಾ ಅಭ್ಯರ್ಥಿಯೊಬ್ಬರು ಕೋರ್ಟ್​ಗೆ ಮೊರೆ ಹೋಗಿ, ಲೋಪಸರಿಪಡಿಸುವ ಹೊತ್ತಿಗೆ ಎರಡು ವರ್ಷಗಳು ಗತಿಸಿವೆ. ಆದರೆ, 2007ರಲ್ಲಿ ನೇಮಕವಾದವರು ಎಂದು ಎನ್​ಪಿಎಸ್ ಅನ್ವಯಿಸಲಾಗಿದೆ. ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಂತೆ ಒಪಿಎಸ್ ವ್ಯಾಪ್ತಿಗೆ ಒಳಪಡಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆನ್ನತ್ತಿದೆ.

    ಸಿದ್ದರಾಮಯ್ಯ ಸೂಚನೆಯಂತೆ ಶಿಕ್ಷಕರ ಸಂಘದ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ತ್ವರಿತ ಕ್ರಮಕೈಗೊಳ್ಳಬೇಕು ಎಂದು ಸಿಎಂ ಕಚೇರಿ ತಿಳಿಸಿ, ಆರ್ಥಿಕ ಇಲಾಖೆಗೆ ರವಾನಿಸಿದೆ.

    ಕೇಂದ್ರ ಸರ್ಕಾರದ ಅಧಿಕೃತ ಆದೇಶವನ್ನು ಕೆಲವು ಅಧಿಕಾರಿಗಳಿಗೆ ಅನ್ವಯಿಸಲಾಗಿದೆ. ಅದೇ ರೀತಿ ಎನ್​ಪಿಎಸ್ ನೌಕರರಿಗೆ ಈ ಸೌಲಭ್ಯ ಕಲ್ಪಿಸುವ ಕುರಿತು ಉನ್ನತಮಟ್ಟದಲ್ಲಿ ಹಲವು ಸಭೆ ನಡೆಸಿದ್ದು, ರ್ತಾಕ ಅಂತ್ಯ ತಲುಪಿದೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.

    | ಶಾಂತಾರಾಮ ತೇಜ, ರಾಜ್ಯಾಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ

    ಶಿಕ್ಷಕರ ಖಾಲಿ ಹುದ್ದೆಗಳಿಗೆ 2005ರಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಅಂಗವಿಕಲರ ಮೀಸಲಿನಲ್ಲಿ ಸರ್ಕಾರದ ಲೋಪದಿಂದ 2007ರಲ್ಲಿ ನೇಮಕವಾದೆವು. ಕೇಂದ್ರದ ನಿಯಮವನ್ನು ನಮಗೂ ಅನ್ವಯಿಸಿ ಎಂಬ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಆರ್ಥಿಕ ಇಲಾಖೆಗೆ ಕ್ರಮವಹಿಸಲು ಸೂಚಿಸಿದ್ದಾರೆ.

    | ಚಂದ್ರಶೇಖರ್ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ರಾಜ್ಯ ಪ್ರಾ.ಶಾ.ಶಿ. ಸಂಘ

     

    ಇಂಡಿಯನ್ ಈಸ್ ಬ್ಯಾಕ್: ಸೇನಾಪತಿಗೆ ಚಿತ್ರರಂಗದ ದಿಗ್ಗಜರಿಂದ ಸ್ವಾಗತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts