More

    ಕಡಗೋಡದಲ್ಲಿ ಹೊಸ ಗ್ರಿಡ್

    ಶಿರಸಿ: ತಾಲೂಕಿನ ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಶಕದ ಬೇಡಿಕೆಯಾಗಿದ್ದ ಹೊಸ ಉಪಕೇಂದ್ರ (ಗ್ರಿಡ್) ಸ್ಥಾಪನೆ ಕಾಮಗಾರಿಗೆ ಜ. 15ರಂದು ಸರ್ಕಾರ ಕಾರ್ಯಾದೇಶ ಹೊರಡಿಸಿದೆ. ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದ ಬನವಾಸಿಗರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
    ಬನವಾಸಿ ಹೋಬಳಿಯಲ್ಲಿ ಸುಮಾರು 50 ಸಾವಿರ ಜನಸಂಖ್ಯೆ ಇದ್ದು, ಹೋಬಳಿಯ ಅರ್ಧದಷ್ಟು ಭಾಗಕ್ಕೆ ಶಿರಸಿ ಹಾಗೂ ಎಸಳೆ ಗ್ರಿಡ್​ನಿಂದ ವಿದ್ಯುತ್ ಪೂರೈಕೆಯಾಗುತ್ತದೆ. 33 ಕಿ.ಮೀ. ದೂರದಿಂದ ವಿದ್ಯುತ್ ಪೂರೈಕೆಯಾಗುವುದರಿಂದ ಅಲ್ಲಿನ ಜನರಿಗೆ ಪ್ರತಿದಿನವೂ ಲೋ ವೋಲ್ಟೇಜ್ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ, ಹೊಸ ಗ್ರಿಡ್ ನಿರ್ವಿುಸಬೇಕೆಂಬುದು ಅಲ್ಲಿನ ಜನರ ದಶಕದ ಹಿಂದಿನ ಬೇಡಿಕೆಯಾಗಿತ್ತು.
    ಆದರೆ, ಹಲವು ಅಡೆತಡೆ ಬಂದ ಕಾರಣ ತೀರಾ ವಿಳಂಬವಾಗಿ ಕಾಮಗಾರಿಗೆ ಅನುಮತಿ ದೊರೆತಂತಾಗಿದೆ. ಬನವಾಸಿ ಹೋಬಳಿಯ ಕಡಗೋಡ ಗ್ರಾಮದಲ್ಲಿ 7.51 ಕೋಟಿ ರೂ. ವೆಚ್ಚದಲ್ಲಿ 110/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
    ವಿಳಂಬಕ್ಕೆ ಕಾರಣವೇನು?: ಬನವಾಸಿಯಲ್ಲಿ ಹೊಸ ಉಪಕೇಂದ್ರ ನಿರ್ವಿುಸಿರುವ ಸಂಬಂಧ ಸರ್ಕಾರದಿಂದ ಅನುಮತಿ ದೊರೆತು, 2012ರಲ್ಲಿ ಅರಣ್ಯ ಇಲಾಖೆ ಕಡಕೋಡದಲ್ಲಿ ಒಂದು ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ಚಂದ್ರಗುತ್ತಿಯಿಂದ ಯೋಜಿತ ಉಪಕೇಂದ್ರಕ್ಕೆ ಲೈನ್ ಎಳೆಯುವ ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಆರಂಭಿಸುವಲ್ಲಿ ವಿಳಂಬವಾಯಿತು.
    ಇದೇ ಸಂದರ್ಭದಲ್ಲಿ ಉಪಕೇಂದ್ರ ನಿರ್ವಣಕ್ಕೆ ಒಂದು ಹೆಕ್ಟೇರ್ ಹಾಗೂ ಲೈನ್ ಎಳೆಯಲು ಹೆಚ್ಚುವರಿ ಜಾಗ ಬೇಕಾಗಿರುವ ಕಾರಣ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು, ರಾಜ್ಯ ಅರಣ್ಯ ಇಲಾಖೆಗೆ ಜಾಗ ಮಂಜೂರು ಅಧಿಕಾರ ಇಲ್ಲವೆಂದು ಹೇಳಿ, ವಾಪಸ್ ಪಡೆಯುವಂತೆ ಆದೇಶಿಸಿತು. 2018ರ ಜನವರಿಯಲ್ಲಿ ಅರಣ್ಯ ಇಲಾಖೆ ಜಾಗ ವಾಪಸ್ ಪಡೆದ ಮೇಲೆ, 10.29 ಕೋಟಿ ರೂ. ವೆಚ್ಚದ ಉಪ ಕೇಂದ್ರ ನಿರ್ಮಾಣ ಯೋಜನೆ ನನೆಗುದಿಗೆ ಬಿತ್ತು.
    ಇದಾದ ನಂತರ ಚಂದ್ರಗುತ್ತಿ ಮಾರ್ಗದ ಬದಲಾಗಿ, ಶಿವಮೊಗ್ಗ ಜಿಲ್ಲೆಯ ಜಡೆ ಕೇಂದ್ರದಿಂದ ವಿದ್ಯುತ್ ಲೈನ್ ಎಳೆಯುವ ಹೊಸ ಪ್ರಸ್ತಾವ ಸಿದ್ಧಪಡಿಸಿ, ಜಾಗ ಮಂಜೂರುಗೊಳಿಸುವಂತೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ ಆನ್​ಲೈನ್ ಅರ್ಜಿ ಸಲ್ಲಿಸಲಾಗಿತ್ತು. 9.5 ಕಿ.ಮೀ. ದೂರದ ಈ ಮಾರ್ಗವು ಕೃಷಿಭೂಮಿ ಮೂಲಕ ಬರುವುದರಿಂದ ಕಾಡಿನ ಮರಗಳು ನಾಶವಾಗುವುದಿಲ್ಲ. ಸ್ಥಳ ನಕ್ಷೆ, ಜಾಗದ ಸ್ಪಷ್ಟನೆಗೆ ಸಂಬಂಧಿಸಿ ಪರಿಸರ ಮಂತ್ರಾಲಯವು 2019ರ ಜೂನ್ 17ರಂದು ಮಾಹಿತಿ ಕೇಳಿತ್ತು. ಇದನ್ನು ಹೆಸ್ಕಾಂ ಹಾಗೂ ರಾಜ್ಯ ಸರ್ಕಾರದ ಮೂಲಕ ಸಲ್ಲಿಸಲಾಗಿತ್ತು. ಯೋಜನೆಯ ಸಾಧ್ಯಾಸಾಧ್ಯತೆ ಪರಿಶೀಲಿಸಿದ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು 2021ರ ಏಪ್ರಿಲ್​ನಲ್ಲಿ ಕಾಮಗಾರಿಗೆ ಅವಕಾಶ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಕಾಮಗಾರಿಗೆ ಕಾರ್ಯಾದೇಶ ಹೊರಡಿಸಿದ್ದು, ಸ್ಥಳೀಯರಿಗೆ ನೆಮ್ಮದಿ ತಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts