More

    ದೂರ ಸಂಪರ್ಕ ಇಲಾಖೆಗೆ 10 ಸಾವಿರ ಕೋಟಿ ರೂ. ಹಳೇ ಬಾಕಿ ಪಾವತಿಸಿದ ಏರ್​ಟೆಲ್​; ಪಾವತಿಸಬೇಕಾದ ಒಟ್ಟು ಮೊತ್ತ 35,586 ಕೋಟಿ ರೂ.!

    ನವದೆಹಲಿ: ದೂರಸಂಪರ್ಕ ಇಲಾಖೆ (ಡಾಟ್​)ಗೆ ಪಾವತಿಸಬೇಕಿದ್ದ ಬಾಕಿ 10 ಸಾವಿರ ಕೋಟಿ ರೂಪಾಯಿಗಳನ್ನು ಇಂದು ಬೆಳಗ್ಗೆ ಭಾರ್ತಿ ಏರ್​ಟೆಲ್​ ಪಾವತಿಸಿದೆ.

    ಖಾಸಗಿ ಸಂಸ್ಥೆಗಳು ಪಾವತಿಸಬೇಕಾದ ಬಾಕಿಯನ್ನು ವಸೂಲಿ ಮಾಡಲು ದೂರ ಸಂಪರ್ಕ ಇಲಾಖೆ ಸೂಚನೆ ನೀಡಿತ್ತು. ಅದರಲ್ಲಿ ಬಾಕಿ ಮೊತ್ತವನ್ನು ತಕ್ಷಣ ಪಾವತಿಸಬೇಕು, ಇಲ್ಲವಾದಲ್ಲಿ ಸೂಕ್ತ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿತ್ತು.

    ದೂರ ಸಂಪರ್ಕ ಇಲಾಖೆಯ ಈ ಸೂಚನೆಗೆ ಪ್ರತಿಕ್ರಿಯಿಸಿದ್ದ ಏರ್​ಟೆಲ್​, ಸಂಸ್ಥೆಯ ಸ್ವಯಂ ಮೌಲ್ಯಮಾಪನ ಕಾರ್ಯದ ನಂತರ ಬಾಕಿ ಹಣವನ್ನು ಪಾವತಿಸುವುದಾಗಿ ಹೇಳಿತ್ತು. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಒದಗಿಸುವುದಾಗಿ ಹೇಳಿಕೊಂಡಿತ್ತು.

    ದೂರ ಸಂಪರ್ಕ ಇಲಾಖೆ ಕಳೆದ ಶುಕ್ರವಾರದಿಂದ ಖಾಸಗಿ ಸಂಸ್ಥೆಗಳಾದ ಭಾರ್ತಿ ಏರ್​ಟೆಲ್​, ವೋಡಾಪೋನ್​ ಐಡಿಯಗಳಿಗೆ ತಕ್ಷಣ ಹಳೆಯ ಬಾಕಿಯನ್ನು ಚುಕ್ತಗೊಳಿಸಲು ಸೂಚಿಸಿತ್ತು. ಸುಪ್ರೀಂಕೋರ್ಟ್​ನ ಕೋಪಕ್ಕೆ ತುತ್ತಾಗಿದ್ದ ಇಲಾಖೆ ಖಾಸಗಿ ಸಂಸ್ಥೆಗಳಿಗೆ ನೋಟಿಸ್​ ನೀಡಲು ಆರಂಭಿಸಿತ್ತು.

    ಸೂಚನೆ ಕೊಟ್ಟಿದ್ದ ದೂರ ಸಂಪರ್ಕ ಇಲಾಖೆಗೆ ಏರ್​ಟೆಲ್​ ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ರೂಪಾಯಿ ಪಾವತಿಸಲಾಗುವುದು. ನಂತರ ಮಾರ್ಚ್​ 17ರೊಳಗೆ ಉಳಿದ ಮೊತ್ತ ಪಾವತಿಸುತ್ತೇವೆ ಎಂದು ತಿಳಿಸಿತ್ತು. ಅಂದಹಾಗೆ ಏರ್​ಟೆಲ್​ ಪರವಾನಗಿ ಶುಲ್ಕ ಮತ್ತು ಸ್ಪೆಕ್ಟ್ರಮ್ ಬಳಕೆಯ ಶುಲ್ಕಗಳು ಸೇರಿ ಒಟ್ಟು 35,586 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು.

    ಸೋಮವಾರ ಭಾರ್ತಿ ಏರ್‌ಟೆಲ್‌ನ ಷೇರುಗಳು ಶೇ.1.49 ಕುಸಿದವು ಬೆಳಗ್ಗೆ 11:14ಕ್ಕೆ ಏರ್‌ಟೆಲ್ ಷೇರುಗಳು ಬಿಎಸ್‌ಇಯಲ್ಲಿ ಶೇ.0.50 ಕಡಿಮೆಯಾಗಿ 556.70 ರೂಪಾಯಿವರೆಗೆ ವಹಿವಾಟು ನಡೆಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts