More

    ಪಂಪ್‌ವೆಲ್ ಫ್ಲೈಓವರ್‌ಗೆ ಹೊಸ ಡೆಡ್‌ಲೈನ್

    ಮಂಗಳೂರು: ಸುದೀರ್ಘ ವಿಳಂಬದಿಂದ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿರುವ ನಗರದ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆ ವಹಿಸಿರುವ ನವಯುಗ ಸಂಸ್ಥೆ ಹೊಸ ಗಡುವು ಕೋರಿದೆ.
    ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್ ಮತ್ತು ನವಯುಗ ಸಂಸ್ಥೆ ನಿರ್ದೇಶಕ ರಮೇಶ್ ವೈ., ಜಂಟಿ ಸಹಿ ಇರುವ ವಾಗ್ದಾನ ಪತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.
    ಮುಂದಿನ ಕಾಮಗಾರಿ ಬಗ್ಗೆ ದೈನಂದಿನ ಪ್ರಗತಿಯ ಮೇಲ್ವಿಚಾರಣೆ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಸಂಸದರು ವಹಿಸಿದರು. ಇಲಾಖೆ ಇಂಜಿನಿಯರ್ ಹಾಗೂ ಕಂದಾಯ ಇಲಾಖೆ ಪರ ತಹಸೀಲ್ದಾರ್ ಅವರನ್ನು ಈ ಕಾಮಗಾರಿ ಪರಿವೀಕ್ಷಣೆಗೆಂದೇ ಮೀಸಲಿಡಲು ತೀರ್ಮಾನಿಸಲಾಯಿತು.
    ಶಾಸಕ ವೇದವ್ಯಾಸ ಡಿ.ಕಾಮತ್, ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿಪಿ ಅರುಣಾಂಶಿಗಿರಿ ಉಪಸ್ಥಿತರಿದ್ದರು.

     ಕ್ರಿಮಿನಲ್ ಪ್ರಕರಣ ದಾಖಲು: ಈಗಾಗಲೇ ಸಾರ್ವಜನಿಕ ಹಿತಾಸಕ್ತಿಯಡಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕರು, ಕಂಪನಿಯ ನಿರ್ದೇಶಕರು ಹಾಗೂ ಸಿಬ್ಬಂದಿ ಮೇಲೆ ಸಾರ್ವಜನಿಕರೊಬ್ಬರು ಸಲ್ಲಿಸಿದ ದೂರಿನಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ಎಫ್‌ಐಆರ್ ಪ್ರತಿಯನ್ನು ಡಿಸಿಪಿ ಅರುಣಾಂಶುಗಿರಿ ಅವರಿಗೆ ನೀಡಿದ ಸಂಸದರು, ಕಾನೂನು ರೀತಿ ಮುಂದಿನ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
    ಮಂಗಳೂರಿನ ಹೃದಯ ಭಾಗದಲ್ಲಿರುವ ಪಂಪ್‌ವೆಲ್‌ನ ಫ್ಲೈಓವರ್ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದೆ ದೀರ್ಘ ವಿಳಂಬ ಮಾಡಿರುವುದರಿಂದ ಸಾರ್ವಜನಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಕಾಟಿಪಳ್ಳ ದೇಲಂತಬೆಟ್ಟು ನಿವಾಸಿ ಪ್ರದ್ಯುಮ್ನ ರಾವ್ ಕಂಕನಾಡಿ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ ಎಫ್‌ಐಆರ್ ದಾಖಲಾಗಿದೆ. ಪ್ರಕರಣದದಲ್ಲಿ ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿ ಸರ್ಕಾರದ ಕೋಟ್ಯಂತರ ರೂ. ವ್ಯಯಿಸಿ ಮೋಸ ಮಾಡಲಾಗಿದೆ. ಸಾರ್ವಜನಿಕರ ದಿಕ್ಕು ತಪ್ಪಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಮತ್ತು ನವಯುಗ ಸಂಸ್ಥೆಯ ನಿರ್ದೇಶಕರ ವಿರುದ್ಧ ದೂರಲಾಗಿದೆ.

     ಟೋಲ್ ವಿಚಾರದಲ್ಲಿ ಜನಪರ ನಿಲುವು: ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಮೇಲ್ಸೇತುವೆ ಹಾಗೂ ಪೂರಕ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ವಾಹನ ಚಾಲಕರು ತಲಪಾಡಿಯಲ್ಲಿ ಟೋಲ್ ನೀಡದೆ ಸಂಚರಿಸಲು ನಿರ್ಧರಿಸಿದ್ದಾರೆ. ಸಂಸದನಾಗಿ ಜನರ ಭಾವನೆಗಳ ಜತೆ ನಾವಿದ್ದೇವೆ ಎಂದು ಹೇಳುವ ಮೂಲಕ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಡಿ.ಕಾಮತ್ ಟೋಲ್ ನೀಡದೆ ಸಂಚಾರ ಮಾಡುವ ಜನರ ತೀರ್ಮಾನವನ್ನು ಪರೋಕ್ಷವಾಗಿ ಬೆಂಬಲಿಸಿದರು. ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಹಾಗೂ ಸೇರಿದ್ದ ವಿವಿಧ ವಾಹನ ಚಾಲಕ ಮಾಲಕರ ಸಂಘಗಳ ಪ್ರತಿನಿಧಿಗಳು ಜ.1ರಿಂದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಲಪಾಡಿ ಟೋಲ್‌ನಲ್ಲಿ ಶುಲ್ಕ ನೀಡದೆ ಸಂಚರಿಸುವುದಾಗಿ ಹೇಳಿದರು.

    ಇನ್ನೇನು ಮಾಡಲು ಸಾಧ್ಯ ಎಂದ ನಳಿನ್: ಗುತ್ತಿಗೆದಾರ ಕಂಪನಿಯ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್, 12 ವರ್ಷಗಳಿಂದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗುತ್ತಲೇ ಇತ್ತು. ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ವಿಶೇಷ ಸಭೆ ನಡೆಸಿ ಪೂರಕ ಕ್ರಮ ಕೈಗೊಳ್ಳಲಾಯಿತು. ಗುತ್ತಿಗೆದಾರ ಸಂಸ್ಥೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ತಿಳಿದಾಗ ಸರ್ಕಾರ ಖಾತರಿ ಒದಗಿಸಿ ಆ್ಯಕ್ಸಿಸ್ ಬ್ಯಾಂಕ್‌ನಿಂದ 65 ಕೋಟಿ ರೂ.ಸಾಲ ಒದಗಿಸಲಾಯಿತು. ಸರ್ವಿಸ್ ರಸ್ತೆಗೆ ಮತ್ತೆ ಹೆಚ್ಚುವರಿ 6 ಕೋಟಿ ರೂ.ಒದಗಿಸಲಾಯಿತು. ಮಣ್ಣು, ಡೀಸೆಲ್ ಮುಂತಾದ ಸೌಕರ್ಯಗಳನ್ನೂ ಪೂರೈಸಲಾಯಿತು. ಸಂಸದನಾಗಿ ಗುತ್ತಿಗೆದಾರ ಸಂಸ್ಥೆಗೆ ಇನ್ಯಾವ ರೀತಿ ನೆರವು ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು.

     6ರಂದು ಾಸ್ಟಾೃಗ್ ಸಭೆ: ಟೋಲ್‌ಗೇಟ್‌ಗಳಲ್ಲಿ ಾಸ್ಟಾೃಗ್ ಕುರಿತಂತೆ ಜ.6ರಂದು ರಾಷ್ಟ್ರೀಯ ಹೆದ್ದಾರಿ ದೆಹಲಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಅಲ್ಲಿಯ ತನಕ ಟೋಲ್ ಗೇಟ್‌ಗಳಲ್ಲಿ ಈಗಿರುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಗೇಟ್‌ಗಳ ವಿಲೀನದ ಬಗ್ಗೆಯೂ ಚರ್ಚೆ ನಡೆಯಲಿದೆ. 15ರ ತನಕ ಟೋಲ್ ಗೇಟ್‌ಗಳಲ್ಲಿ ನಗದು ಸ್ವೀಕಾರ ಕೌಂಟರ್ ಇರುತ್ತದೆ. 15ರ ಬಳಿಕ ಾಸ್ಟಾೃಗ್ ಮಾತ್ರ ಇರಲಿದೆ ಎಂದು ಸುರತ್ಕಲ್ ಟೋಲ್ ಗೇಟ್‌ನ ವ್ಯವಸ್ಥಾಪಕರು ತಿಳಿಸಿದರು.

     

    ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಂಪನಿ ಮುಖ್ಯಸ್ಥರು ಎಲ್ಲರ ಎದುರು ವಾಗ್ದಾನ ನೀಡಿದ್ದರು. ಮತ್ತೆ ಸಮಯ ಕೇಳುತ್ತಿದ್ದಾರೆ. ಹಾಗಾಗಿ ಇನ್ನು ಸಹಿಸಲು ಸಾಧ್ಯವಿಲ್ಲ.
    – ನಳಿನ್ ಕುಮಾರ ಕಟೀಲ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts