More

    ಹೂಳು ತುಂಬಿದ ನೇತ್ರಾವತಿ!

    ಶ್ರವಣ್‌ಕುಮಾರ್ ನಾಳ, ಪುತ್ತೂರು
    ಆ.9ರಂದು ಪಶ್ಚಿಮಘಟ್ಟದ ಸುತ್ತಮುತ್ತ ಜಲಸ್ಫೋಟ, ಗುಡ್ಡಕುಸಿತ ಸಹಿತ ಪ್ರಾಕೃತಿಕ ವಿಕೋಪ ಪರಿಣಾಮ ಚಾರ್ಮಡಿ ಘಾಟ್ ತಳಭಾಗದ ನೇತ್ರಾವತಿಯ ಉಪನದಿಗಳಲ್ಲಿ ರಾಶಿ ರಾಶಿ ಮರಳು ಸಹಿತ ಹೂಳು ತುಂಬಿಕೊಂಡಿದೆ. ಈ ಮರಳು ತೆರವುಗೊಳ್ಳದ ಪರಿಣಾಮ ನದಿ ತೀರದ ಪ್ರದೇಶಗಳಲ್ಲಿ ಶಾಶ್ವತ ಪ್ರವಾಹ ಭೀತಿ ಆವರಿಸಿದೆ.
    ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ನೇತೃತ್ವದ ತಂಡ ಪ್ರವಾಹ ಘಟನೆಗೆ ಮೂಲ ಕಾರಣ ಸಂಶೋಧಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ನದಿಗಳಲ್ಲಿ ತುಂಬಿರುವ ರಾಶಿ ರಾಶಿ ಮರಳು ಸಹಿತ ಹೂಳು ತೆರವುಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನದಿಗಳ ದಿಕ್ಕು ಬದಲಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಸರ್ಕಾರ ಈವರೆಗೆ ಪ್ರವಾಹದಿಂದ ನದಿಗಳಲ್ಲಿ ರಾಶಿಬಿದ್ದ ಮರಳು, ಹೂಳು ತೆರವುಗೊಳಿಸಲು ಯೋಜನೆ ರೂಪಿಸಿಲ್ಲ.

    ನೇತ್ರಾವತಿ ಉಪನದಿಗಳಲ್ಲಿ ತುಂಬಿದ ಹೂಳು
    ದ.ಕ ಹಾಗೂ ಚಿಕ್ಕಮಗಳೂರು ಗಡಿಭಾಗ 22.ಕಿಮಿ ವ್ಯಾಪ್ತಿಯ ಪಶ್ಚಿಮಘಟ್ಟದ 7 ಬೆಟ್ಟಗಳಾದ ದುರ್ಗದ ಬೆಟ್ಟ, ಬಾಳೆಗುಡ್ಡ, ಹೊಸಮನೆ ಗುಡ್ಡ, ದೊಡ್ಡೇರಿ ಬೆಟ್ಟ, ಬಾಳಾರುಗುಡ್ಡ, ಎಳೆಮನೆಗುಡ್ಡ, ರಾಮನಗುಡ್ಡದಲ್ಲಿ ಜಲಸ್ಫೋಟ ಪರಿಣಾಮ ನೇತ್ರಾವತಿ ಉಪನದಿಯ ಪ್ರಮುಖ 4 ಹೊಳೆಗಳಲ್ಲಿ ಯಥೇಚ್ಛವಾಗಿ ಮರಳು ಮಿಶ್ರಿತ ಮಣ್ಣು 10-12 ಅಡಿ ತುಂಬಿಕೊಂಡಿದೆ. ಮೃತ್ಯುಂಜಯ ಹೊಳೆ, ಅಣಿಯೂರುಹೊಳೆ, ಬಂಡಾಜೆ ಹೊಳೆ, ನೆರಿಯಾ ಹೊಳೆಯ ಇಕ್ಕೆಲಗಳಲ್ಲಿ ಬೃಹತ್ ಮರಗಳನ್ನು ತೆರವುಗೊಸಿದ್ದು ಹೊರತುಪಡಿಸಿ ನದಿನೀರಿನ ಸರಾಗ ಹರಿಯುವಿಕೆಗೆ ಯಾವುದೇ ಯೋಜನೆ ರೂಪುಗೊಂಡಿಲ್ಲ.

    ಶಾಶ್ವತ ಪ್ರವಾಹ ಭಯ
    ಈಗಾಗಲೇ ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಕ್ಕಾವು, ಕೊಳಂಬೆ, ಅಂತರ, ಪಾಟಾಲಿಗುಟ್ಟ, ಕಬೆಟ್ಟು, ಕುಂಬಪಾಲ, ಪಣಿಂಕಾಲ್‌ಪಾಡಿ ಪ್ರದೇಶಗಳಲ್ಲಿ ನೀರಿನ ಹರಿಯುವಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಪ್ರವಾಹದ ಶಾಶ್ವತ ಭೀತಿ ಆವರಿಸಿದೆ. ಕೊರಂಗಲ್ ಗುಡ್ಡಪ್ರದೇಶ, ಎಳನೀರು-ಬಂಗ್ರಪಲ್ಕೆ, ಅರಸಿನಮಕ್ಕಿ, ತಿಮ್ಮಯ್ಯಕಂಡ, ಗಾಳಿಗಂಡಿ, ಕಜಕ್ಕೆ, ಇರೆಬೈಲು, ಮೈದಾಡಿ, ಮುಕ್ಕ, ಎರ್ಮಾಯಿ, ಅಗ್ಗಲ್ದ್‌ಗುಡ್ಡೆ, ಪರ್ಲತುಳುಪುಲೆ, ಮಿತ್ತೂರು, ದೇಸಿಲ್, ಚಾವಡಿಗುಡ್ಡ, ಚಾವಡಿತೋಟ, ನೆಕ್ಕಿಲೊಟ್ಟು, ಕಾಯಂದೂರು, ಮಲ್ಲಪಲ್ಕೆ, ಹೊಸತೋಟ, ಗುಡಾಲ್, ಕಡ್ತಿಕಲ್ಲು ಬೆಟ್ಟ ವ್ಯಾಪ್ತಿಯ ಮಕ್ಕಿ, ಪಲ್ಲಬೆಟ್ಟ, ಇಲ್ಯಯರ ಗುಡ್ಡ, ಕಡ್ತಿಕುಮೇರು, ದೈಪಿಲ್ ಪ್ರದೇಶಗಳಿಗೂ ಮುಂಬರುವ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ.

    ನದಿ ಪಥ ಬದಲಾವಣೆ ಸಾಧ್ಯತೆ
    ಜಲ ಸಂಪನ್ಮೂಲ ಇಲಾಖೆ ನಡೆಸಿದ ಸರ್ವೇ ಮಾಹಿತಿಯಂತೆ ನೇತ್ರಾವತಿ ನದಿಯಲ್ಲಿ ವಾರ್ಷಿಕ ಒಟ್ಟು 430 ಟಿಎಂಸಿ ನೀರು ಹರಿಯುತ್ತದೆ. ಜಲ ಸಂಪನ್ಮೂಲ ಇಲಾಖೆ 1994ರಿಂದ 2010ರ ವರೆಗಿನ ಸರ್ವೇ ಆಧಾರದಂತೆ ಪ್ರತೀ ವರ್ಷ ಜೂನ್1ರಿಂದ ಅಕ್ಟೋಬರ್ 30ರವರೆಗೆ ನೇತ್ರಾವತಿ ನದಿಯಲ್ಲಿ ಒಟ್ಟು 221.856 ಟಿಎಂಸಿ(ಅಂದಾಜು 201.7-240.6 ಟಿಎಂಸಿ) ಪ್ರವಾಹದ ನೀರು ಸಮುದ್ರ ಸೇರುತ್ತದೆ. ಆದರೆ ಜಲಸ್ಫೋಟ, ಗುಡ್ಡಕುಸಿತ ಪರಿಣಾಮದಿಂದ ನೇತ್ರಾವತಿ ಉಪನದಿಗಳಲ್ಲಿ ನೀರಿನ ನೈಸರ್ಗಿಕ ಹರಿಯುವಿಕೆಗೆ ರಾಶಿಬಿದ್ದ ಮರಳು ಮಿಶ್ರಿತ ಮಣ್ಣು ತೊಡಕಾಗಿರುವುದರಿಂದ ಮುಂದಿನ ದಿನಗಳಲ್ಲಿ ನದಿಯು ಹೆಚ್ಚು ವಿಸ್ತಾರಗೊಳ್ಳಬಹುದು ಅಥವಾ ನದಿ ಪಥ ಬದಲಾಗಬಹುದು. ಈ ಬಗ್ಗೆ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ನೇತೃತ್ವದ ತಂಡ ಸರ್ಕಾರಕ್ಕೆ ನೀಡಿದ ವರದಿಯಲ್ಲೂ ಉಲ್ಲೇಖಿಸಿದ್ದಾರೆ.

    ಪ್ರವಾಹ ಪೀಡಿತ ಪ್ರದೇಶಗಳ ನದಿಗಳಲ್ಲಿ ತುಂಬಿರುವ ಮಣ್ಣು ಮಿಶ್ರಿತ ಮರಳು ಸಹಿತ ಹೂಳು ತುಂಬಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಇದಕ್ಕೆ ಯೋಜನೆ ರೂಪಿಸಬೇಕು. ಸರ್ಕಾರದ ಯೋಜನೆಯಂತೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
    ಸಿಂಧೂ ರೂಪೇಶ್, ದ.ಕ ಜಿಲ್ಲಾಧಿಕಾರಿ

    ಪ್ರವಾಹ ಪೀಡಿತ ಪ್ರದೇಶಗಳ ನದಿಗಳಲ್ಲಿ ಉಳಿದುಕೊಂಡ ರಾಶಿರಾಶಿ ಮರಳು ತೆರವುಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನದಿ ನೀರಿನ ಹರಿಯುವಿಕೆಗೆ ಅಡ್ಡಿಯಾಗಬಹುದು. ಆಗ ಸಹಜವಾಗಿ ನದಿ ಹೊಸ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಹೆಚ್ಚು ವಿಸ್ತಾರದಲ್ಲಿ ಹರಿಯುವ ಸಾಧ್ಯತೆ ಅಧಿಕ.
    ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts