More

    ಜೀವನದಿ ನೇತ್ರಾವತಿ ಒಡಲು ಪರಿಶುದ್ಧ

    ಉಪ್ಪಿನಂಗಡಿ: ಲಾಕ್‌ಡೌನ್ ಕಾರಣದಿಂದಾಗಿ ಪ್ರಕೃತಿಯಲ್ಲಿ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳು ಗೋಚರಿಸಿದಂತೆಯೇ ಜಿಲ್ಲೆಯ ಜೀವನದಿ ನೇತ್ರಾವತಿಯ ಒಡಲು ಕಲ್ಮಶ ರಹಿತವಾಗಿದ್ದು, ನದಿ ನೀರು ಪರಿಶುದ್ಧವಾಗಿ ಹರಿಯುತ್ತಿದೆ. ಕಳೆದೆರಡು ವರ್ಷಗಳಲ್ಲಿ ಗೋಚರಿಸಿದ ನೀರಿನ ಕೊರತೆ ಈ ಬಾರಿ ನಿವಾರಣೆಯಾಗಿದ್ದು, ನದಿಯಲ್ಲಿ ನೀರಿನ ಹರಿಯುವಿಕೆಯೂ ತೃಪ್ತಿದಾಯಕವಾಗಿದೆ.

    ಕರೊನಾ ಕಾರಣದಿಂದ 40 ದಿನ ಲಾಕ್‌ಡೌನ್ ನಿಯಮಾವಳಿ ಜಾರಿಯಲ್ಲಿದ್ದ ಪರಿಣಾಮ ಹೋಟೆಲ್ ಉದ್ದಿಮೆಗಳು ಮುಚ್ಚಿದ್ದವು. ಇದರಿಂದ ನದಿಗೆ ಹರಿದುಬರುತ್ತಿದ್ದ ಕೊಳಚೆ ನೀರು ಇಲ್ಲವಾಗಿ ನದಿ ಒಡಲೆಲ್ಲ ಶುಭ್ರತೆ ಕಾಣಿಸುತ್ತಿದೆ. ಇನ್ನೊಂದೆಡೆ ಉದ್ದಿಮೆಗಳು ಸ್ಥಗಿತಗೊಂಡ ಕಾರಣ ನೀರಿನ ಬಳಕೆಯಲ್ಲಿಯೂ ಗಣನೀಯ ಇಳಿಮುಖವಾಗಿದ್ದು, ಅಂತರ್ಜಲದ ಬಳಕೆಯಲ್ಲಿಯೂ ಇಳಿಕೆ ಕಂಡುಬಂದಿದೆ. ಪರಿಣಾಮ ನದಿ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳವಾಗಿದೆ.

    ನದಿ ನೀರಿನ ಹರಿವು ಹೆಚ್ಚಳ
    ಈ ವರ್ಷ ಹೆಚ್ಚಿನ ನೀರಿನ ಹರಿವು ಇದೆ. ಕಳೆದ ಬಾರಿ ಎರಡೂವರೆ ಕ್ಯೂಸೆಕ್ಸ್ ನೀರಿನ ಹರಿವು ಮೇ ತಿಂಗಳಲ್ಲಿ ದಾಖಲಾಗಿದ್ದರೆ, ಈ ಬಾರಿ ಐದೂವರೆ ಕ್ಯೂಸೆಕ್ಸ್ ದಾಖಲಾಗಿದೆ. ನೇತ್ರಾವತಿ ನದಿಪಾತ್ರದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದು ಹಾಗೂ ಅಂತರ್ಜಲ ನೀರಿನ ಬಳಕೆ ಕಡಿಮೆಯಾಗಿರುವುದು ನದಿಯಲ್ಲಿ ನೀರಿನ ಹರಿಯುವಿಕೆ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಪಿಡಬ್ಲುೃಡಿ ಇಲಾಖೆಯ ಭಾರಿ ನೀರಾವರಿ ತನಿಖಾ ವಿಭಾಗದ ನೌಕರ ಕೆ.ಬಾಬು ಗೌಡ ತಿಳಿಸಿದ್ದಾರೆ.

    ಪಯಸ್ವಿನಿಯಲ್ಲಿ ಹೆಚ್ಚಿದ ನೀರಿನ ಹರಿವು
    ಸುಳ್ಯ: ನಿರಂತರ ಮಳೆ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಪ್ರಮುಖ ನೀರಿನ ಮೂಲವಾದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಅಭಾವದ ಭೀತಿ ಸ್ವಲ್ಪ ಮಟ್ಟಿಗೆ ದೂರವಾಗಿದೆ. ಪಯಸ್ವಿನಿ ನದಿ ಹುಟ್ಟುವ ಪ್ರದೇಶದಲ್ಲಿ ಮತ್ತು ನದಿ ಹರಿದು ಬರುವ ಕೊಯನಾಡು, ಸಂಪಾಜೆ, ಕಲ್ಲುಗುಂಡಿ, ಸುಳ್ಯ ಸೇರಿ ಕೊಡಗು ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಎರಡು ವಾರಗಳಿಂದ ಹಲವು ದಿನಗಳಲ್ಲಿ ಉತ್ತಮ ಮಳೆಯಾಗಿರುವುದು ನದಿಯಲ್ಲಿ ನೀರಿನ ಮಟ್ಟ ಮತ್ತು ಹರಿವು ಹೆಚ್ಚಳವಾಗಲು ಸಹಕಾರಿಯಾಗಿದೆ. ತೋಡು, ಕೆರೆ, ಬಾವಿ ಸೇರಿದಂತೆ ಇತರ ಜಲಮೂಲಗಳಲ್ಲಿಯೂ ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

    ಕುಮಾರಧಾರಾದಲ್ಲಿ ಜಲ ಸಮೃದ್ಧಿ
    ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿ ಬಿರು ಬೇಸಿಗೆಯಲ್ಲಿಯೂ ನೀರಿನ ಹರಿವು ಸಮೃದ್ಧವಾಗಿದೆ. ಕುಕ್ಕೆಯಲ್ಲಿ ಮತ್ತು ನದಿಯ ಉಗಮ ಸ್ಥಾನವಾದ ಕುಮಾರಪರ್ವತದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕುಮಾರಧಾರದಲ್ಲಿ ಸಮೃದ್ಧ ನೀರಿನ ಹರಿವಿದೆ. ಕುಮಾರಧಾರ ಸೇತುವೆ ಬಳಿ ಕುಕ್ಕೆ ದೇವಳದಿಂದ ಕಿಂಡಿ ಅಣೆಕಟ್ಟನ್ನು ನದಿಗೆ ನಿರ್ಮಿಸಲಾಗಿದೆ. ಇದರಿಂದಾಗಿ ಕ್ಷೇತ್ರ ಪರಿಸರದಲ್ಲಿ ಅಂತರ್ಜಲ ವೃದ್ಧಿಸಿದೆ. ಕುಲ್ಕುಂದ, ನೂಚಿಲ, ದೇವರಗದ್ದೆ ಪರಿಸರದಲ್ಲಿ ಬಾವಿಗಳಲ್ಲಿ ಜಲ ಸಮೃದ್ಧಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts