More

    ನೇತಾಜಿ ಅವಶೇಷದ ಡಿಎನ್‌ಎ ಪರೀಕ್ಷೆ ಆಗಲಿ: ಸುಭಾಷ್‌ಚಂದ್ರ ಬೋಸ್ ಅವರ ಪುತ್ರಿ ಡಾ. ಅನಿತಾ

    ನೇತಾಜಿ ಅವಶೇಷದ ಡಿಎನ್‌ಎ ಪರೀಕ್ಷೆ ಆಗಲಿ: ಸುಭಾಷ್‌ಚಂದ್ರ ಬೋಸ್ ಅವರ ಪುತ್ರಿ ಡಾ. ಅನಿತಾಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಕಣ್ಮರೆ, ಸಾವಿನ ಬಗೆಗಿನ ಚರ್ಚೆಗಳು ಹತ್ತು ಹಲವು ಆಯಾಮಗಳನ್ನು ಪಡೆದುಕೊಂಡಿದ್ದರಿಂದ, 75 ವರ್ಷಗಳ ನಂತರವೂ ‘ಸತ್ಯ’ ಏನೆಂಬ ಸ್ಪಷ್ಟತೆ ಸಿಕ್ಕಿಲ್ಲ. ಸರ್ಕಾರಗಳು ಉದ್ದೇಶಪೂರ್ವಕವಾಗಿ ನೇತಾಜಿ ಕುರಿತ ಮಾಹಿತಿಯನ್ನು ಮುಚ್ಚಿಟ್ಟವು ಎಂಬ ಆಕ್ರೋಶವೂ ಹಲವರಲ್ಲಿದೆ. ನೇತಾಜಿಯವರ 125ನೇ ಜಯಂತಿ ಆಚರಣೆಗೆ ಜ.23ರಂದು ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಬೋಸ್ ಪುತ್ರಿ ಡಾ. ಅನಿತಾ ಬೋಸ್ ಅವರನ್ನು ವಿಜಯವಾಣಿ ಇಮೇಲ್ ಮೂಲಕ ಸಂದರ್ಶನ ಮಾಡಿದೆ. 

    | ರಾಘವ ಶರ್ಮ ನಿಡ್ಲೆ ನವದೆಹಲಿ

    ನೇತಾಜಿ ಮತ್ತು ಐಎನ್‌ಎ (ಇಂಡಿಯನ್ ನ್ಯಾಷನಲ್ ಆರ್ಮಿ) ಕುರಿತ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವುದರಲ್ಲಿ ಭಾರತದ ಸರ್ಕಾರಗಳು ಪ್ರಾಮಾಣಿಕತೆ ಪ್ರದರ್ಶಿಸಿವೆಯೇ?
    – ಹಾಗಂತ ಊಹಿಸಬೇಕಾಗಿದೆ. ಆದರೆ, ಬಹಿರಂಗಗೊಂಡ ದಾಖಲೆಗಳಲ್ಲಿ ಹೊಸದೇನಿದ್ದವು? ಸಿಕ್ಕಿದ್ದು ಅದೇ ಸವಕಲು ದಾಖಲೆಗಳು ಮತ್ತು ಅವನ್ನಷ್ಟೇ ಪ್ರಕಟಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನನ್ನ ಕುಟುಂಬದವರ ಮೇಲೆ ಹಲವು ವರ್ಷಗಳ ಕಾಲ ಭಾರತ ಸರ್ಕಾರ ಬೇಹುಗಾರಿಕೆ ನಡೆಸುತ್ತಿತ್ತು. ಈ ಸತ್ಯ ಗೊತ್ತಾದಾಗ ಬೆಚ್ಚಿಬಿದ್ದಿದ್ದೆ. ನನ್ನ ಕುಟುಂಬಸ್ಥರೂ ಶಾಕ್‌ಗೆ ಒಳಗಾಗಿದ್ದರು. ಬೇಹುಗಾರಿಕೆಯಿಂದ ಹಗರಣ ಹಾಗೂ ಸತ್ಯಗಳು ಬಹಿರಂಗಗೊಳ್ಳಲಿವೆ ಎಂದು ಕೆಲವರು ನಂಬಿದ್ದರು. ತಮ್ಮ ವಿಲಕ್ಷಣ ನಿರೀಕ್ಷೆಗಳು ಈಡೇರಲಿಲ್ಲ ಎಂದು ನಿರಾಶೆಗೊಂಡಿದ್ದರು. ಇದೇ ಕಾರಣಕ್ಕೆ, ನೇತಾಜಿ ವಿರುದ್ಧದ ಒಳಸಂಚಿನ ಮಾಹಿತಿಯನ್ನು ತಡೆಹಿಡಿಯಲಾಯಿತು ಎಂದು ಪ್ರತಿಪಾದಿಸುವ ಮಾತುಗಳು ಅತಾರ್ಕಿಕ, ಅಸಂಬದ್ಧ ಎಂದು ನನಗೆ ಯಾವತ್ತೂ ಅನಿಸಿಲ್ಲ.

    ತೈಹೋಕು ವಿಮಾನಾಪಘಾತದಲ್ಲಿ ನೇತಾಜಿ ಮೃತಪಟ್ಟರು ಎಂಬ ವರದಿಗಳಲ್ಲಿ ಸತ್ಯಾಂಶವಿದೆ ಎಂದು ನಂಬುತ್ತೀರಾ?
    – ಹೌದು. ನೇತಾಜಿ ಸಾವಿನ ಕುರಿತು ಮಾಹಿತಿ ನೀಡುವ ಈ ಘಟನೆ ಹಾಗೂ ಚರ್ಚೆಯಲ್ಲಿ ಸ್ಥಿರತೆ, ತರ್ಕ ಎರಡೂ ಇದೆ. ಅದಲ್ಲದೆ, ಅಂದಿನ ವಿಮಾನಾಪಘಾತ ಹಾಗೂ ನೇತಾಜಿ ಸಾವನ್ನು ಕಣ್ಣಾರೆ ಕಂಡಿದ್ದವರು ಈ ವಿವರಣೆಗೆ ಸಾಕ್ಷ್ಯ ಒದಗಿಸಿದ್ದಾರೆ ಕೂಡ.

    ಜಪಾನ್‌ನ ರಂಕೋಜಿ ದೇಗುಲದಲ್ಲಿ ಇಡಲಾಗಿರುವ ಅಸ್ಥಿ ನೇತಾಜಿಯವರದ್ದೇ ಎಂಬುದನ್ನು ಒಪ್ಪುತ್ತೀರಾ?
    ಖಂಡಿತ ಒಪ್ಪುತ್ತೇನೆ. ಈ ಅವಶೇಷಗಳ (ಮೂಳೆಗಳು ಮತ್ತು ಹಲ್ಲುಗಳು ಇವೆ) ಡಿಎನ್‌ಎ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂಬ ಭರವಸೆ ನನ್ನಲ್ಲಿ ಈಗಲೂ ಇದೆ. ಡಿಎನ್‌ಎ ಪರೀಕ್ಷೆ ನಡೆದು, ಅಲ್ಲಿರುವುದು ನೇತಾಜಿಯವರದ್ದೇ ಅವಶೇಷ ಎಂಬುದು ಖಾತರಿಯಾದರೆ, ನೇತಾಜಿ ಕಣ್ಮರೆ ಬಗ್ಗೆ ಹತ್ತು ಹಲವು ಅನುಮಾನಗಳನ್ನು ಹೊಂದಿ ಒಳಗೊಳಗೇ ನೊಂದು, ಕೊರಗಿರುವ ಅನೇಕ ಮನಸ್ಸುಗಳು ಸಮಾಧಾನಗೊಳ್ಳಬಹುದು.

    ನೇತಾಜಿಯವರು ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ಗುಮ್ನಾಮಿ ಬಾಬಾ (ಭಗವಾನ್ ಜೀ) ಆಗಿ ಜೀವನ ನಡೆಸುತ್ತಿದ್ದರು ಎಂಬ ವಾದವನ್ನು ನೀವು ಒಪ್ಪುತ್ತೀರಾ?
    – ಇಲ್ಲ. ನೇತಾಜಿ ಬೆಂಬಲಿಗರೆಂದು ಹೇಳಿಕೊಂಡವರು ಇಂಥದ್ದೊಂದು ಕೀಳು ಪ್ರಚಾರಗೈದ ಬಗ್ಗೆ ಈಗಲೂ ನನ್ನಲ್ಲಿ ಆಕ್ರೋಶವಿದೆ. ಇಂತಹ ಹುಸಿ ವಾದ ಮುಂದಿಟ್ಟ ಕೆಲವರು, ಅದರಲ್ಲೇ ಭಾರೀ ದುಡ್ಡು ಮಾಡಿದರು!

    ಒಂದುವೇಳೆ ಸರ್ಕಾರ ನೇತಾಜಿಯವರಿಗೆ ‘ಮರಣೋತ್ತರ ಭಾರತರತ್ನ ಪುರಸ್ಕಾರ’ ನೀಡಿದರೆ, ನೀವದನ್ನು ಸ್ವೀಕರಿಸುತ್ತೀರಾ?
    – ಈ ಸಲಹೆಯೇನೋ ಉತ್ತಮವಾಗಿದೆ. ಒಂದುವೇಳೆ ಕೊಡುವುದಿದ್ದರೂ, ಅದನ್ನು ಸ್ವೀಕರಿಸುವವರಲ್ಲಿ ನೇತಾಜಿಯವರೇ ಮೊದಲಿಗರಾಗಬೇಕಿತ್ತು. ನೇತಾಜಿಯವರ ಸೇನೆಯಲ್ಲಿ ಕಾಣಿಸಿಕೊಳ್ಳದ ಅನೇಕ ಅರ್ಹ ವ್ಯಕ್ತಿಗಳು ಈ ಪುರಸ್ಕಾರಕ್ಕೆ ಪಾತ್ರರಾಗಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ, ಮರಣೋತ್ತರವಾಗಿ ಅವರಿಗೆ ನೀಡುವುದು ಅಥವಾ ಅವರ ಪರವಾಗಿ ಸ್ವೀಕರಿಸುವುದು ನನಗಂತೂ ಬೇಕಿಲ್ಲ.

    ಮಿಷನ್ ನೇತಾಜಿ ಹೆಸರಲ್ಲಿ ನಡೆಯುತ್ತಿರುವ ಆರ್‌ಟಿಐ ಚಳವಳಿ ಬೆಂಬಲಿಸುತ್ತೀರಾ?
    – ಮಿಷನ್ ನೇತಾಜಿಯ ಸದಸ್ಯರು ನೇತಾಜಿ ಅಭಿಮಾನಿಗಳು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಅವರ ಕೆಲ ವಿಚಾರಗಳಿಗೆ ನನ್ನ ಅಸಮ್ಮತಿಯಿದೆ. ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿ ಎಂಬ ಅವರ ಒತ್ತಾಯ ಸಮರ್ಥನೀಯ.

    ನೇತಾಜಿಯವರನ್ನು ಹತ್ತಿಕ್ಕಲು ಅಂತಾರಾಷ್ಟ್ರೀಯ ಮಟ್ಟದ ಒಳಸಂಚು ನಡೆದಿರಬಹುದೇ?
    – ಎರಡನೇ ವಿಶ್ವಯುದ್ಧದ ಅವಧಿಗಳನ್ನು ಅವಲೋಕಿಸಿದರೆ, ಬ್ರಿಟಿಷರು ನೇತಾಜಿಯವರನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎಂಬುದು ದೃಢವಾಗುತ್ತದೆ.

    ನೇತಾಜಿಯವರನ್ನು ಮೌನಗೊಳಿಸುವ ಪಿತೂರಿಯಲ್ಲಿ ಭಾರತದ ಅಂದಿನ ಯಾವುದಾದರೂ ನಾಯಕ ಭಾಗಿಯಾಗಿರಬಹುದು ಎಂದನಿಸುತ್ತದೆಯೇ?
    – ಇಲ್ಲ. 1940ರ ದಶಕದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಹೇಗಿತ್ತೆನ್ನುವುದನ್ನೇ ಯೋಚಿಸಿ – ಮೊಬೈಲ್ ಫೋನ್, ಇಂಟರ್‌ನೆಟ್ ಇರಲಿಲ್ಲ, ಸೋಷಿಯಲ್ ಮೀಡಿಯಾಗಳನ್ನು ಗ್ರಹಿಸಲೂ ಸಾಧ್ಯವಿರಲಿಲ್ಲ. ಸಾರಿಗೆ ವ್ಯವಸ್ಥೆಯೂ ಲಭ್ಯವಿರಲಿಲ್ಲ. ಭಾರತದ ಬಹುತೇಕ ರಾಜಕೀಯ ನಾಯಕರು ಬ್ರಿಟಿಷರ ಸೆರೆಯಲ್ಲಿದ್ದರು. ಅವರಿಂದ ಷಡ್ಯಂತ್ರ ಆಗಿರಬಹುದು ಎಂದು ಒಪ್ಪಲಾರೆ.

    ಹಿಂದಿನ ಸರ್ಕಾರಗಳು, ವಿಶೇಷವಾಗಿ ಕಾಂಗ್ರೆಸ್ – ನೇತಾಜಿಯವರಿಗೆ ನ್ಯಾಯ ಒದಗಿಸಿವೆ ಎಂದು ನಿಮಗನಿಸುತ್ತದೆಯೇ?
    – ಖಂಡಿತವಾಗಿಯೂ ಇಲ್ಲ. ಹಾಗೆ ನೋಡಿದರೆ, ಬ್ರಿಟಿಷ್-ಭಾರತೀಯ ಪಡೆಗಳ ದಂಗೆಯ ಮೇಲೆ ನೇತಾಜಿಯ ಐಎನ್‌ಎ ಪರಿಣಾಮ ಬೀರುತ್ತಿದ್ದ ದಾಖಲೆಗಳು ಬಹಳ ತಡವಾಗಿ ಬಿಡುಗಡೆಗೊಂಡವು. ಆದರೆ, ಆಗಲೂ ಸರ್ಕಾರದಲ್ಲಿದ್ದ ಅನೇಕರು ನೇತಾಜಿ ಮತ್ತು ಐಎನ್‌ಎ ಪ್ರಾಮುಖ್ಯತೆ ಕುಗ್ಗಿಸುವುದಕ್ಕೇ ಆದ್ಯತೆ ನೀಡಿದ್ದರು. ಸರ್ಕಾರದ ವರ್ತನೆಗಳು ಅವರ ನೆನಪುಗಳನ್ನು ಸಾರುವ ದಾಖಲೆಗಳ ಮೇಲೂ ದುಷ್ಪರಿಣಾಮ ಬೀರಿದವು. ನೇತಾಜಿ ಆರ್ಮಿಯ ಸೈನಿಕರೂ ಮಾನಸಿಕ-ದೈಹಿಕವಾಗಿ ಬಳಲಿದ್ದರು. ಸ್ವತಂತ್ರ ಭಾರತದ ಸೇನಾಪಡೆಯಲ್ಲೂ ಅವರಿಗೆ ಜಾಗವಿರಲಿಲ್ಲ. ದುರಂತ ಎಂದರೆ, ಈ ಸೇನಾನಿಗಳನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಗುರುತಿಸಲು (ಒಪ್ಪಿಕೊಳ್ಳಲು) ಕೂಡ ಅಂದಿನ ಸರ್ಕಾರಕ್ಕೆ ಸಾಕಷ್ಟು ಸಮಯ ಬೇಕಾಯಿತು. ನೇತಾಜಿಯವರ ಸೇನಾನಿಗಳ ವಿರುದ್ಧ ಕೆಲಸ ಮಾಡಿದ್ದ ಬಹುಪಾಲು ಮಂದಿ, ಭಾರತವನ್ನು ವಿದೇಶಿ ದಾಸ್ಯದಲ್ಲಿಡಲು ಸಹಾಯ ಮಾಡಿದ್ದ ಬ್ರಿಟಿಷ್-ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿದ್ದವರೇ ಆಗಿದ್ದರು!

    ನಿಮ್ಮ ತಾಯಿ ಮತ್ತು ನೀವು ಭಾರತದಿಂದ ದೂರವುಳಿದದ್ದೇಕೆ? ತಂದೆ ಯಾವ ದೇಶಕ್ಕಾಗಿ ಹೋರಾಟ, ತ್ಯಾಗಗಳನ್ನು ಮಾಡಿದರೋ ಆ ದೇಶದಲ್ಲೇ ನಾವಿರಬೇಕು ಎಂದು ನಿಮಗನಿಸಲಿಲ್ಲವೇ?
    – ನನ್ನ ತಾಯಿ ಬಗ್ಗೆ ಅಪಾರ ಹೆಮ್ಮೆಯಿದೆ. ಅವರು ಆಸ್ಟ್ರಿಯಾದಲ್ಲಿ ವಾಸ್ತವ್ಯ ಹೂಡಿ, ಸಂಪಾದನೆ ಹಾದಿ ಕಂಡುಕೊಂಡರು. ಇದರಿಂದ ನಮಗೆ ಸ್ವಾವಲಂಬಿ ಬದುಕು ಸಾಧ್ಯವಾಯ್ತು. ಭಾರತದಲ್ಲಿದ್ದರೆ ಇದು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರ ಅಥವಾ ಸೋದರಳಿಯ ಅಥವಾ ಸೊಸೆಯಂದಿರನ್ನು ಅವಲಂಬಿಸಿ ಬದುಕುವುದು ನನ್ನ ತಾಯಿಗೆ ಬೇಕಿರಲಿಲ್ಲ. ಮೇಲಾಗಿ, ನನ್ನ ತಂದೆಯೂ ಅಲ್ಲಿರಲಿಲ್ಲ ಮತ್ತು ಚಿಕ್ಕಪ್ಪ ಶರತ್ ಚಂದ್ರ ಬೋಸ್ 1950ರಲ್ಲಿ ನಿಧನರಾದರು. ಇವೆಲ್ಲವೂ, ಭಾರತದಿಂದ ದೂರ ಉಳಿಯುವಂತೆ ಮಾಡಿತು.

    ನೇತಾಜಿ ಬಗ್ಗೆ ನಿಮ್ಮ ತಾಯಿ ಏನು ಹೇಳುತ್ತಿದ್ದರು?
    – ನನ್ನ ತಾಯಿ ನೇತಾಜಿಗೆ ಪೂರ್ಣ ವಿಧೇಯಳಾಗಿದ್ದಳು. ಆದರೆ, ತಾಯಿಯ ವೈವಾಹಿಕ ಜೀವನ ಅಲ್ಪ ಅವಧಿಗೆ ಸೀಮಿತಗೊಂಡಿತ್ತು ಮತ್ತು ಅನಿಶ್ಚಿತತೆಯಲ್ಲಿ ಸಿಲುಕಿತ್ತು. ಹೀಗಾಗಿ, ಅಮ್ಮನದ್ದು ಸುಲಭದ ಬದುಕಾಗಿರಲಿಲ್ಲ. ಆಕೆ ಎಂದಿಗೂ ನನ್ನಲ್ಲಿ ಕಷ್ಟವನ್ನು ಹೇಳಿಕೊಳ್ಳಲಿಲ್ಲ ಮತ್ತು ನೋವನ್ನು ತನ್ನೊಳಗೇ ನುಂಗಿಕೊಂಡಿದ್ದಳು.

    ನಿಮ್ಮ ಮಕ್ಕಳು, ಮೊಮ್ಮಕ್ಕಳು ಭಾರತಕ್ಕೆ ಬಂದು, ಇಲ್ಲಿನ ಯುವ ಜನಾಂಗದೊಂದಿಗೆ ಬೆರೆಯಬೇಕು ಎಂದು ಬಯಸುತ್ತೀರಾ?
    – ಭಾರತದಲ್ಲಿ ಹೆಚ್ಚಿನ ಸಮಯ ಕಳೆಯಬೇಕು ಮತ್ತು ಅಲ್ಲಿ ಕೆಲಸ ಮಾಡಬೇಕು ಎನ್ನುವುದು ಮಕ್ಕಳ ಆಶಯ. ಆದರೆ, ಅವೆಲ್ಲವೂ ಅವರ ವೃತ್ತಿ, ಕೌಟುಂಬಿಕ ಜವಾಬ್ದಾರಿಗಳ ಮೇಲೆ ಅವಲಂಬಿಸಿದೆ. ನನ್ನ ಎರಡನೇ ಮಗನ ಮಕ್ಕಳು ಈಗ ಶಾಲೆಗೆ ಹೋಗುತ್ತಿದ್ದಾರೆ ಮತ್ತು ಸೊಸೆ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ನನ್ನ ಮಗಳು ದಕ್ಷಿಣ ಆಫ್ರಿಕಾದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ.

    ಐಎನ್‌ಎ ಇತಿಹಾಸವನ್ನು ರಕ್ಷಣಾ ಇಲಾಖೆ ಬಹಿರಂಗಪಡಿಸಬೇಕೇ? ಈ ದಾಖಲೆಗಳನ್ನು ಮುಚ್ಚಿಡಲು ಕಾರಣವೇನಿರಬಹುದು?
    – ಐಎನ್‌ಎ ಇತಿಹಾಸದ ದಾಖಲೆಗಳು ರಹಸ್ಯವಾಗಿವೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ, ಐಎನ್‌ಎ ಇತಿಹಾಸವನ್ನು ಸಾರ್ವಜನಿಕರ ಮಧ್ಯೆ ಮತ್ತಷ್ಟು ಪ್ರಚುರಪಡಿಸಬೇಕು. ಉದಾಹರಣೆಗೆ, ಶಾಲೆಗಳ ಇತಿಹಾಸ ಪುಸ್ತಕದಲ್ಲಿ ಈ ಬಗ್ಗೆ ಪಠ್ಯಗಳನ್ನು ಸೇರಿಸಬೇಕು.

    ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನೇತಾಜಿ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದನಿಸುವುದಿಲ್ಲವೇ?
    – ಖಂಡಿತ ಅನಿಸುತ್ತದೆ. ಹಾಗಂತ, ಪಕ್ಷಗಳು ಲಾಭ ಪಡೆದುಕೊಳ್ಳುವುದು ತಪ್ಪು ಎನ್ನಲಾರೆ. ಈ ಎರಡೂ ಪಕ್ಷಗಳ ನಾಯಕತ್ವಗಳು ನೇತಾಜಿ ಬಗ್ಗೆ ಅಪಾರ ಗೌರವ ಹೊಂದಿವೆ. ನೇತಾಜಿಯನ್ನು ಗೌರವಿಸುವ ಇಬ್ಬರ ಯೋಜನೆಯೂ ಸಮರ್ಥನೀಯವಾಗಿದೆ. ಆದರೆ, ಚುನಾವಣೆಗೆ ಮುನ್ನ ಇವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟ.

    ನೇತಾಜಿಯವರ ಜನ್ಮದಿನವನ್ನು ‘ಪರಾಕ್ರಮ ದಿವಸ್’ ಎಂದು ಘೋಷಿಸಿರುವುದು ನಿಮಗೆ ಖುಷಿ ಕೊಟ್ಟಿದೆಯೇ? ಅಥವಾ ಹಿಂದಿದ್ದ ‘ದೇಶಪ್ರೇಮ ದಿನ’ ಎಂಬುದೇ ಸಾಕಿತ್ತು ಎನ್ನುತ್ತೀರಾ?
    – ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದೆಯ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳುವುದು ಪ್ರಶಂಸಾರ್ಹ. ‘ದೇಶಪ್ರೇಮ ದಿನ’ ಎಡರಂಗದೊಂದಿಗೆ ಹೆಚ್ಚಾಗಿ ಜೋಡಿಸಿಕೊಂಡಿದ್ದರಿಂದ, ಕೇಂದ್ರದ ಈಗಿನ ಬಿಜೆಪಿ ಸರ್ಕಾರ ಈ ಯೋಜನೆಗೆ ತನ್ನಿಷ್ಟದ ‘ಪರಾಕ್ರಮ ದಿವಸ್’ ಎಂಬ ಹೆಸರು ನೀಡುತ್ತಿರುವುದು ಆಶ್ಚರ್ಯದ ವಿಷಯವೇನಲ್ಲ.

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇತಾಜಿ ಕಣ್ಮರೆ, ಸಾವಿನ ಕುರಿತ ಸತ್ಯವನ್ನು ಜನರ ಮುಂದಿಡಬಹುದು ಎಂಬ ನಂಬಿಕೆಯಿದೆಯೇ?
    – ನನ್ನ ಹೋರಾಟ, ಪ್ರಯತ್ನಗಳಿಗೆ ಈ ಸರ್ಕಾರ ಬೆಂಬಲ ನೀಡಲಿದೆ ಎಂಬ ವಿಶ್ವಾಸವಿದೆ.

    ಬೆಂಗಳೂರಿನಲ್ಲಿ ಮೊದಲ ಭೇಟಿ

    ನಿಮ್ಮ ಬಾಳಸಂಗಾತಿಯನ್ನು (ಮಾರ್ಟಿನ್ ಫಾಫ್) ಮೊದಲು ಭೇಟಿ ಮಾಡಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಆ ಮಾಹಿತಿ ಹಂಚಿಕೊಳ್ಳುತ್ತೀರಾ?
    – ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ದೃಷ್ಟಿಹೀನರಿಗಾಗಿ ಇದ್ದ ‘ಡಿವೈನ್ ಲೈಟ್ ಸ್ಕೂಲ್ ಫಾರ್ ಬ್ಲೈಂಡ್’ ಸಂಸ್ಥೆಯಲ್ಲಿ ಅವರು ನಾಲ್ಕು ವರ್ಷ ಸಮಾಜಸೇವಕರಾಗಿ ಕೆಲಸ ಮಾಡಿದ್ದರು. ಚಿಕ್ಕಮ್ಮನೊಂದಿಗೆ ಅಲ್ಲಿಗೆ ಹೋಗಿದ್ದಾಗ ಮೇಯರ್ ನಮಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಿದ್ದರು. ಆ ವೇಳೆ ನನ್ನನ್ನು ನೋಡಿದ್ದ ಮಾರ್ಟಿನ್, ‘ನಾನು ಕೆಲವು ತಪ್ಪು ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದೇನೆ ಮತ್ತು ಗಣ್ಯರಿಗಷ್ಟೇ ಆದ್ಯತೆ ನೀಡುತ್ತಿದ್ದೇನೆ’ ಎಂದುಕೊಂಡಿದ್ದರು. ಇದನ್ನು ಅಂದು ನನ್ನ ಬಳಿ ಹೇಳಿಕೊಂಡರು ಕೂಡ. ಈ ಮಾತುಕತೆಗೆ ನಾಂದಿ ಹಾಡಿದ್ದ ಆ ಗಳಿಗೆ, ನಂತರ ನಮ್ಮಿಬ್ಬರ ಜೀವನವನ್ನೇ ಬದಲಿಸಿಬಿಟ್ಟಿತು!

    ತೈಹೋಕು ವಿಮಾನಾಪಘಾತ ಮತ್ತು ರೆಂಕೋಜಿ ದೇಗುಲ

    ಸುಭಾಷ್‌ಚಂದ್ರ ಬೋಸರು ತೈಹೋಕು ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಅಪಘಾತಕ್ಕೀಡಾಗಿದ್ದರಿಂದ, 1945ರ ಸೆ.18ರಂದು ತೈಹೋಕು ಸೇನಾ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂಬ ವಾದವಿದೆ. ಇದನ್ನು ಭಾರತ ಸರ್ಕಾರ ನೇಮಿಸಿದ್ದ 1956ರ ಶಾನವಾಸ್ ಖಾನ್ ಆಯೋಗ ಮತ್ತು 1970ರ ಜಸ್ಟಿಸ್ ಜಿ.ಡಿ. ಖೋಸ್ಲಾ ಆಯೋಗ ಒಪ್ಪಿಕೊಂಡಿವೆ. ಈ ವರದಿ ಐಎನ್‌ಎಯ ಕರ್ನಲ್ ಹಬಿಬುಲ್ ರೆಹಮಾನ್ ಹಾಗೂ ಮತ್ತಿತರರ ಹೇಳಿಕೆ ಆಧರಿಸಿ ಸಿದ್ಧಗೊಂಡಿತ್ತು. ಆದರೆ, 2006ರ ಮುಖರ್ಜಿ ಆಯೋಗ 1945ರ ಸೆ.18ರಂದು ಯಾವುದೇ ವಿಮಾನಪಘಾತ ಸಂಭವಿಸಿಲ್ಲ ಎಂದು ಹೇಳಿತು ಮತ್ತು ಮೊದಲ 2 ಆಯೋಗಗಳ ಪ್ರತಿಪಾದನೆಗೆ ಆಧಾರವಿಲ್ಲ ಎಂದು ತಿಳಿಸಿತು. ನೇತಾಜಿಯವರ ಚಿತಾಭಸ್ಮವನ್ನು ಜಪಾನ್‌ನ ಟೋಕಿಯೋದಲ್ಲಿರುವ ರೆಂಕೋಜಿ ಬುದ್ಧ ದೇಗುಲಕ್ಕೆ ತಂದು ಪೆಟ್ಟಿಗೆಯೊಂದರಲ್ಲಿ ಸುರಕ್ಷಿತವಾಗಿ ಇರಿಸಿರುವ ಬಗ್ಗೆ ಮೊದಲ 2 ಆಯೋಗಗಳು ವಿವರಿಸಿವೆ. ಮುಖರ್ಜಿ ಆಯೋಗ ಈ ಚಿತಾಭಸ್ಮ ಸುಭಾಷರದ್ದಲ್ಲ ಎಂದು ಹೇಳಿದೆ. ಹಾಗಂತ, ಕೇಂದ್ರ ಸರ್ಕಾರ ಈ ವರದಿಯನ್ನು ಒಪ್ಪಿಲ್ಲ. ರೆಂಕೋಜಿ ದೇಗುಲದಲ್ಲಿರುವ ನೇತಾಜಿ ಅವಶೇಷಗಳ ಡಿಎನ್‌ಎ ಪರೀಕ್ಷೆಯಾದರೆ ಸತ್ಯ ಗೊತ್ತಾದಿತು ಎನ್ನುವುದು ಪುತ್ರಿ ಅನಿತಾ ಬೋಸ್ ಅಭಿಪ್ರಾಯ.

    ಜರ್ಮನಿಯಲ್ಲಿದ್ದಾರೆ ಡಾ. ಅನಿತಾ ಬೋಸ್

    ಸುಭಾಷ್ ಚಂದ್ರ ಬೋಸ್ ಮತ್ತು ಎಮಿಲಿ ಶೆಂಕಲ್ ದಂಪತಿಯ ಏಕೈಕ ಪುತ್ರಿ ಅನಿತಾ ಬೋಸ್ (1942ರಲ್ಲಿ ಜನನ). ಜರ್ಮನಿಯಲ್ಲಿ ನೆಲೆಸಿರುವ ಅವರು, ಆರ್ಥಿಕ ತಜ್ಞೆಯಾಗಿ ಖ್ಯಾತಿಯಾಗಿದ್ದಾರೆ. ಆಗ್ಸ್‌ಬರ್ಗ್ ಯುನಿವರ್ಸಿಟಿಯಲ್ಲಿ ಆರ್ಥಿಕ ವಿಭಾಗದ ಪ್ರೊಫೆಸರ್ ಆಗಿದ್ದ ಅನಿತಾ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆ್ ಜರ್ಮನಿ ಎಂಬ ರಾಜಕೀಯ ಪಕ್ಷದಲ್ಲೂ ಸಕ್ರಿಯರಾಗಿದ್ದರು. ಮಾರ್ಟಿನ್ ಫಾಫ್-ಅನಿತಾ ಬೋಸ್ ಫಾಫ್ ದಂಪತಿಗೆ ಪೀಟರ್ ಅರುಣ್, ಥಾಮಸ್ ಕೃಷ್ಣ, ಮಾಯಾ ಕರೀನಾ ಎಂಬ ಮೂವರು ಮಕ್ಕಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts