More

    ಇದು ನಮ್ಮ ಅಸ್ತಿತ್ವದ ಪರೀಕ್ಷೆ: ಯುದ್ಧ ಮುಂದುವರಿಯಲಿದೆ ಎಂದು ಹಮಾಸ್​ಗೆ ಎಚ್ಚರಿಕೆ ಕೊಟ್ಟ ಇಸ್ರೇಲ್​ ಪ್ರಧಾನಿ

    ನವದೆಹಲಿ: ಗಾಜಾದಲ್ಲಿ ಹಮಾಸ್​ ವಿರುದ್ಧ ನಮ್ಮ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್​) ನಡೆಸುತ್ತಿರುವ ಯುದ್ಧವು ದೀರ್ಘಕಾಲಿ ಮತ್ತು ಕಷ್ಟಕರ ಎಂದು ಎಚ್ಚರಿಕೆ ನೀಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು, ಪ್ರಸ್ತುತ ಪರಿಸ್ಥಿತಿಯು ನಮ್ಮ “ಅಸ್ತಿತ್ವದ ಪರೀಕ್ಷೆ” ಎಂದು ವಿವರಿಸಿದ್ದಾರೆ.

    ಇದು ಯುದ್ಧದ ಎರಡನೇ ಹಂತವಾಗಿದ್ದು, ನಮ್ಮ ಗುರಿಗಳು ಸ್ಪಷ್ಟವಾಗಿವೆ. ಹಮಾಸ್‌ನ ಮಿಲಿಟರಿ ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ನಾಶಪಡಿಸುವುದು ಮತ್ತು ಒತ್ತೆಯಾಳುಗಳನ್ನು ಮರಳಿ ಮನೆಗೆ ಕರೆತರುವುದಾಗಿದೆ. ಗಾಜಾ ಪಟ್ಟಿಯಲ್ಲಿನ ಯುದ್ಧ ದೀರ್ಘ ಕತ್ತು ಕಷ್ಟಕರವಾಗಿದ್ದು, ಅದಕ್ಕಾಗಿ ನಾವು ತಯಾರಿ ಸಹ ಮಾಡಿಕೊಂಡಿದ್ದೇವೆ ಎಂದು ನೇತನ್ಯಾಹು ಹೇಳಿದರು.

    ಶುಕ್ರವಾರದಂದು ಹಮಾಸ್ ನಿಯಂತ್ರಿತ ಪ್ರದೇಶದೊಳಗೆ ಇಸ್ರೇಲಿ ಸೇನಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿದ್ದರಿಂದ ಗಾಜಾದಲ್ಲಿ ಇನ್ನೂ ಸಾವಿರಾರು ನಾಗರಿಕರು ಸಾಯಬಹುದು ಎಂದು ವಿಶ್ವಸಂಸ್ಥೆ ಹೇಳಿದೆ. ಗಾಜಾದಲ್ಲಿ ಬಹು ದೊಡ್ಡಮಟ್ಟದ ನೆಲದ ಆಕ್ರಮಣವು ಬಹುಶಃ ದುರಂತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

    ಡಜನ್ ಗಟ್ಟಲೆ ವಿದೇಶಿಯರು ಅಥವಾ ಇಸ್ರೇಲ್​ ಪ್ರಜೆಗಳು ಸೇರಿದಂತೆ ಕನಿಷ್ಠ 230 ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆದೊಯ್ಯಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ತಡರಾತ್ರಿ ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರು ಹಮಾಸ್, ಈ ವಾರ, ಇಸ್ರೇಲ್​ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 50 ಒತ್ತೆಯಾಳುಗಳು ಮೃತಪಟ್ಟಿದ್ದಾರೆಂದು ಹಮಾಸ್ ಹೇಳಿಕೊಂಡಿದೆ.

    ವಿನಿಮಯಕ್ಕೆ ಸಿದ್ಧ
    ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮಾತನಾಡಿದ್ದು, ಹಮಾಸ್​ ಗುಂಪು, ಇಸ್ರೇಲ್ ಜತೆ ತಕ್ಷಣ ಕೈದಿಗಳ ವಿನಿಮಯಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಪ್ಯಾಲೆಸ್ತೀನಿಯನ್​ ಬಳಿ ಇರುವ ಒತ್ತೆಯಾಳುಗಳ ಬದಲಾಗಿ ಇಸ್ರೇಲ್​ ತನ್ನ ಜೈಲುಗಳಿಂದ ಎಲ್ಲ ಪ್ಯಾಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವ ತಕ್ಷಣದ ಕೈದಿಗಳ ವಿನಿಮಯ ಒಪ್ಪಂದವನ್ನು ನಡೆಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಆದರೆ, ಇಸ್ರೇಲ್​ ಇದನ್ನು ನಿರಾಕರಿಸಿದ್ದು, ಯುದ್ಧ ಮುಂದವರಿಸುವುದಾಗಿ ಸಂದೇಶ ರವಾನಿಸಿದೆ.

    ಹೊರಗುಳಿದ ಭಾರತ
    ಇಸ್ರೇಲ್-ಹಮಾಸ್ ಸಂಘರ್ಷವನ್ನು ಕೊನೆಗೊಳಿಸಲು ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸಬೇಕೆಂದು ಕರೆ ನೀಡುವ, ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಶುಕ್ರವಾರ ಮಂಡಿಸಲಾದ ಗೊತ್ತುವಳಿಯೊಂದರ ಮೇಲಿನ ಮತದಾನದಲ್ಲಿ ಭಾರತ ಭಾಗವಹಿಸದೆ ಹೊರಗುಳಿದಿದ್ದು, ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಯೂಕ್ರೇನ್ ಮತ್ತು ಬ್ರಿಟನ್ ಕೂಡ ಮತದಾನದಲ್ಲಿ ಭಾಗವಹಿಸಲಿಲ್ಲ. ಗಾಜಾ ಪಟ್ಟಿಯಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಾನವೀಯ ನೆರವು ಲಭ್ಯಗೊಳಿಸಬೇಕು ಎಂದೂ ಕರೆ ನೀಡುವ ಗೊತ್ತುವಳಿಯನ್ನು ಜೋರ್ಡಾನ್ ಮಂಡಿಸಿತ್ತು. ಬಾಂಗ್ಲಾದೇಶ, ಮಾಲ್ದೀವ್ಸ್, ಪಾಕಿಸ್ತಾನ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಸಹಿತ 40ಕ್ಕೂ ಹೆಚ್ಚು ಇತರ ದೇಶಗಳು ಗೊತ್ತುವಳಿಯನ್ನು ಸಹ-ಪ್ರಾಯೋಜಿಸಿದ್ದವು. ಕದನವಿರಾಮಕ್ಕೆ ಕರೆ ನೀಡುವ ಜೋರ್ಡಾನ್ ದೇಶದ ಕರಡಿನಲ್ಲಿ ಹಮಾಸ್ ಹೆಸರಿನ ಉಲ್ಲೇಖ ಇಲ್ಲದಿದ್ದುದು ಗೊತ್ತುವಳಿಯಿಂದ ಭಾರತ ದೂರವುಳಿಯಲು ಕಾರಣವಾಗಿದೆ. ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಸ್ಪಷ್ಟಸಂದೇಶ ನೀಡುವುದು ಅಗತ್ಯ ಎಂದು ವಿಶ್ವಸಂಸ್ಥೆಯಲ್ಲಿನ ಭಾರತ ಕಾಯಂ ಉಪ ಪ್ರತಿನಿಧಿ ಯೋಜನಾ ಪಟೇಲ್ ಹೇಳಿದ್ದಾರೆ.

    ನಾಶಕ್ಕೆ ಪಣ: ಅಬು ರಕಾಬಾ ಮೇಲಿನ ದಾಳಿ ಹಮಾಸ್ ಅನ್ನು ಸಂಪೂರ್ಣ ನಾಶ ಮಾಡುವ ಕಾರ್ಯದ ಭಾಗವಾಗಿದೆ ಎಂದು ಇಸ್ರೇಲ್ ಘೋಷಿಸಿದೆ. ಹಮಾಸ್​ನ ಭಯೋತ್ಪಾದನಾ ಕೃತ್ಯಗಳ ಸಾಮರ್ಥ್ಯವನ್ನು ನಿಮೂಲನೆ ಮಾಡುವ ಉದ್ದೇಶದಿಂದ ಗಾಜಾದಲ್ಲಿ ಅದರ ನೆಲೆಗಳ ಮೇಲೆ ಇಸ್ರೇಲ್ ವಾಯು ಹಾಗೂ ಭೂ ದಾಳಿಯನ್ನು ತೀವ್ರಗೊಳಿಸಿದೆ. ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವುದೂ ಐಡಿಎಫ್ ಗುರಿಯಾಗಿದೆ. ಕದನವಿರಾಮಕ್ಕೆ ವಿಶ್ವಸಂಸ್ಥೆ ನೀಡಿರುವ ಕರೆಯನ್ನು ನಿರ್ಲಕ್ಷಿಸಿರುವ ಇಸ್ರೇಲ್, ತನ್ನ ರಕ್ಷಣೆಗೆ ಕ್ರಮಕೈಗೊಳ್ಳುವುದನ್ನು ಮುಂದುವರಿಸುವುದಾಗಿ ಹೇಳಿದೆ.

    ದಾಳಿಯಲ್ಲಿ 8,500 ಸಾವು
    ಅ. 7ರಂದು ಹಮಾಸ್​ ಉಗ್ರರ ಗುಂಪು ಇಸ್ರೇಲ್​ ಮೇಲೆ ಏಕಾಏಕಿ 5 ಸಾವಿರ ರಾಕೆಟ್​ಗಳಿಂದ ದಾಳಿ ಮಾಡಿ, ಸಾಕಷ್ಟು ಸಾವು ನೋವಿಗೆ ಕಾರಣವಾದ ಬೆನ್ನಲ್ಲೇ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಆರಂಭವಾಯಿತು. ಯುದ್ಧವೂ ನಿನ್ನೆ (ಅ.28) 22ನೇ ದಿನವನ್ನು ಪ್ರವೇಶಿಸಿದ್ದು, ಗಾಜಾದಲ್ಲಿ ಇಸ್ರೇಲ್ ದಾಳಿಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 7,703ಕ್ಕೆ ಏರಿದೆ. ಎರಡೂ ಕಡೆಗಳ ಸಾವಿನ ಸಂಖ್ಯೆ 8,500ನ್ನು ದಾಟಿದೆ. (ಏಜೆನ್ಸೀಸ್​)

    ಮುಂಬರುವ ಚಳಿಗಾಲದಲ್ಲಿ ಸಿಹಿ ಗೆಣಸು ನಿಮ್ಮ ಆಯ್ಕೆಯಾಗಿರಲಿ: ಏಕೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ….

    ಹುಲಿ ಉಗುರು ಧರಿಸಿದರೆ ಅರೆಸ್ಟ್​ ಆದರೆ ಇಲ್ಲಿ ವ್ಯಾಘ್ರನೊಂದಿಗೆ ವಾಕಿಂಗ್​! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts