More

    ಅಧಿಕಾರಿಗಳ ವಿರುದ್ಧ ಸದಸ್ಯರ ದೂರು, ನಗರಸಭೆಗೆ ಯೋಜನಾ ನಿರ್ದೇಶಕಿ ಭೇಟಿ


    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ನಗರಸಭೆ ಆಡಳಿತ ಮಂಡಳಿ ರಚನೆಗೊಂಡ ಬಳಿಕ ಮೊದಲ ಬಾರಿಗೆ ಮಂಗಳವಾರ ಕಚೇರಿಗೆ ಭೇಟಿ ನೀಡಿದ್ದ ಯೋಜನಾ ನಿರ್ದೇಶಕಿ ಆರ್.ಶಾಲಿನಿ ಬಳಿ ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರು ಆಯುಕ್ತರೂ ಸೇರಿ ಕೆಲ ಅಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದರು.
    3 ವರ್ಷದ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಅವಶ್ಯಕ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಕಸ ವಿಲೇವಾರಿಗೆ ವಾಹನ ಖರೀದಿಸಿಲ್ಲ. ಕೆಟ್ಟು ನಿಂತಿರುವ ಕಸ ವಿಲೇವಾರಿ ವಾಹನಗಳ ದುರಸ್ತಿಗೂ ಅಧಿಕಾರಿಗಳು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಡಿಸಿ ಗಮನ ಹರಿಸಿಲ್ಲ: ನಗರಸಭೆಯ ವಿವಿಧ ಆದಾಯ ಮೂಲಗಳಿಂದ ಸಂಗ್ರಹವಾಗಿದ್ದ ಕೋಟ್ಯಂತರ ಹಣವನ್ನು ವಿವೇಚನಾರಹಿತವಾಗಿ ವೆಚ್ಚ ಮಾಡಲಾಗಿದೆ. 3 ವರ್ಷ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿಲ್ಲ ಎಂದು ದೂರಿದ ಸದಸ್ಯರು, ಈಗಿರುವ ಆಯುಕ್ತರ ದರ್ಶನ ಭಾಗ್ಯವೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಅಧ್ಯಕ್ಷರಿಂದ ಮನವಿ: ಹಳೆಯ ಪುರಸಭಾ ವ್ಯಾಪ್ತಿಯ ಜತೆಗೆ 4 ಗ್ರಾಪಂಗಳ ಬಹುತೇಕ ಪ್ರದೇಶಗಳನ್ನು ವಿಲೀನಗೊಳಿಸಿ ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು, ಸದ್ಯ ತಲೆದೋರಿರುವ ಸ್ವಚ್ಛತಾ ಸಮಸ್ಯೆ ಪರಿಹಾರಕ್ಕಾಗಿ ಶೀಘ್ರದಲ್ಲಿ ಅಗತ್ಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ನೇಮಕ ಮಾಡಬೇಕು, ಕಸ ವಿಲೇವಾರಿ ವಾಹನಗಳ ಖರೀದಿಗೆ ತಾಂತ್ರಿಕ ಅನುಮೋದನೆ ನೀಡಬೇಕು, ನೂತನ ನಗರಸಭಾ ಕಚೇರಿ ನಿರ್ಮಾಣ, ಪಂಚಾಯಿತಿಗಳಿಂದ ಹಸ್ತಾಂತವಾಗಿರುವ ಸಾರ್ವಜನಿಕರ ಆಸ್ತಿಗಳ ದಾಖಲೆಗಳ ಸಮರ್ಪಕ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಆಗಾಗ ಕಚೇರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡುವಂತೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ಮನವಿ ಮಾಡಿದರು.

    ಕಾರ್ಯಯೋಜನೆ ರೂಪಿಸಬೇಕು: ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿರಿಸಿರುವ ಅನುದಾನವನ್ನು ರಾಜಕಾಲುವೆ ಅಭಿವೃದ್ಧಿಗೆ ಬಳಕೆ ಮಾಡಿಕೊಂಡಿರುವ ದೂರು ಕೇಳಿಬರುತ್ತಿದ್ದು, ಆಯಾ ಸಮುದಾಯ ಅಥವಾ ಸಮುದಾಯದ ಅಭಿವೃದ್ಧಿಗೆ ಪೂರಕ ಕಾರ್ಯಯೋಜನೆ ರೂಪಿಸಬೇಕು ಎಂದು ಸದಸ್ಯ ಸುನೀಲ್‌ಮೂಡ್ ಒತ್ತಾಯಿಸಿದರು. ನಗರದ ಕೆರೆ ಅಭಿವೃದ್ಧಿ ಸೇರಿ ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುವ ರಾಜಕಾಲುವೆಗಳ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿ ಬಡಾವಣೆ ನಿವಾಸಿಗಳ ಅನುಕೂಲ ಮಾಡಿಕೊಡುವಂತೆ ಸದಸ್ಯ ಎನ್.ಗಣೇಶ್ ಮನವಿ ಮಾಡಿದರು.

    ಪಿಡಿ ಭೇಟಿ ಮುಚ್ಚಿಟ್ಟ ಅಧಿಕಾರಿಗಳು ನಗರಸಭಾ ಕಚೇರಿಯ ಇಂಜಿನಿಯರಿಂಗ್ ವಿಭಾಗದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಗುತ್ತಿಗೆದಾರರೊಬ್ಬರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಯೋಜನ ನಿರ್ದೇಶಕರು ಭೇಟಿ ನೀಡಿದ್ದಾರೆಂಬ ವಿಚಾರವನ್ನು ಅಧಿಕಾರಿಗಳು ಮುಚ್ಚಿಟ್ಟರು. ಈ ಬಗ್ಗೆಯೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

    ಶೀಘ್ರ ಪರಿಶೀಲನೆ: 3 ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಅನುದಾನ ಬಳಕೆ ಸೇರಿ ಅಗತ್ಯ ದಾಖಲೆಗಳ ಪರಿಶೀಲನೆಗೆ ಶೀಘ್ರದಲ್ಲಿ ದಿನ ನಿಗದಿಪಡಿಸುವುದಾಗಿ ಯೋಜನಾ ನಿರ್ದೇಶಕಿ ಆರ್.ಶಾಲಿನಿ ಪ್ರತಿಕ್ರಿಯೆ ನೀಡಿದರು.

    ಸದಸ್ಯರಾದ ಕೆ.ಎಂ.ಶಿವಕುಮಾರ್, ಗಂಗಾಧರ್‌ರಾವ್, ಪದ್ಮನಾಭ್‌ಪ್ರಸಾದ್, ಆಂಜಿನಮೂರ್ತಿ, ಹೆಚ್ಚುವರಿ ಕೌನ್ಸಿಲರ್ ಕೃಪಾನಂದ್, ರಾಮಮೂರ್ತಿ, ನಾಮನಿರ್ದೇಶಿತ ಸದಸ್ಯ ಕೆ.ವಸಂತ್, ಮುಖಂಡ ಹೇಮಂತ್‌ಕುಮಾರ್, ಮುನಿಯಪ್ಪ, ರವಿಕುಮಾರ್, ನಾರಾಯಣರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts