More

    ತಾಪಂ ಸಭೆಯಲ್ಲಿ ನೆರೆವು ಕನ್ನ ಜಟಾಪಟಿ

    ಸವಣೂರ: ನೆರೆಯಿಂದ ಮನೆ ಹಾಗೂ ಬೆಳೆ ಹಾನಿ ಪರಿಹಾರ ಕುರಿತಂತೆ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದ್ದರಿಂದ ತಾಪಂ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು.

    ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ನೆರೆ, ಬೆಳೆ ಹಾನಿ ಪರಿಹಾರ ಹಾಗೂ ತಾಡಪತ್ರಿ ವಿತರಣೆ ವಿಷಯ ಪ್ರಸ್ತಾಪಿಸಿದರು. ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಕಾಂಗ್ರೆಸ್ ಸದಸ್ಯರಾದ ನಾಗೇಶ ಮೋತೆ , ಭಾರತಿ ಕುಂಬಾರ, ಬಿಜೆಪಿ ಸದಸ್ಯ ಬಸವರಾಜ ಕೋಳಿವಾಡ ಮಾತನಾಡಿ, ತಮ್ಮ ಕ್ಷೇತ್ರದ ಜನರಿಗೂ ನೆರೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ. ಮನೆ ಬಿದ್ದವರಿಗೆ ಬಿಟ್ಟು, ಮನೆ ಬೀಳದವರಿಗೆ ಹೆಚ್ಚು ಪರಿಹಾರ ವಿತರಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಕುರಿತು ಕೇಳಲು ಹೋದರೆ ಸರ್ಕಾರದ ಮಟ್ಟದಲ್ಲಿ ಸರಿಪಡಿಸಬೇಕು ಎಂಬ ಹಾರಿಕೆ ಉತ್ತರ ಕೇಳಿಬರುತ್ತಿದೆ. ರೈತರಿಗೆ ಸಕಾಲದಲ್ಲಿ ತಾಡಪತ್ರಿ ವಿತರಿಸಿಲ್ಲ. ಆದ್ದರಿಂದ, ಮೊದಲು ನಮ್ಮ ಕ್ಷೇತ್ರದ ಸಂತ್ರಸ್ತರಿಗೆ ಪರಿಹಾರ ವಿತರಣೆ ಕೈಗೊಳ್ಳಬೇಕು ಎಂದು ಸದಸ್ಯರು ಏಕಕಾಲದಲ್ಲಿ ಹೇಳಿದ್ದರಿಂದ ಸಭೆಯಲ್ಲಿ ಕೆಲ ಹೊತ್ತು ಗೊಂದಲ ಉಂಟಾಯಿತು.

    ನಂತರ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡಲು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣನವರ ಅವರನ್ನು ತರಾಟೆಗೆ ತೆಗೆದುಕೊಂಡರು.

    ತಹಸೀಲ್ದಾರ್ ಮಾತನಾಡಿ, ನಾನು ಬಂದು ನಾಲ್ಕು ದಿನ ಕಳೆದಿದೆ. ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ನೀಡಲು ಇಲಾಖೆಯ ಸರ್ವರ್ ಕೆಲದಿನಗಳ ಕಾಲ ಬ್ಲಾಕ್ ಆಗಿರುವುದರಿಂದ ತೊಂದರೆಯಾಗಿದೆ. ಬಿ ಕೆಟಗರಿಯಲ್ಲಿ ಆಯ್ಕೆಯಾದ ಫಲಾನುಭವಿ ಮನೆಯನ್ನು ಪೂರ್ತಿ ಕೆಡವಿ ನಿರ್ವಿುಸಿಕೊಂಡಲ್ಲಿ ಮಾತ್ರ 5 ಲಕ್ಷ ರೂ., ತಪ್ಪಿದಲ್ಲಿ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.

    ಇಚ್ಚಂಗಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ವಿುಸಲು ಒಂದು ವಾರದಲ್ಲಿ ಸಿಡಿಪಿಒ ಇಲಾಖೆಗೆ ಹಣ ವರ್ಗಾಯಿಸಿ ವರದಿ ಸಲ್ಲಿಸುವಂತೆ ಅಧ್ಯಕ್ಷ ಸುಬ್ಬಣ್ಣವರ ಸೂಚಿಸಿದರು.

    ತಾಲೂಕಿನ ಗ್ರಾಮೀಣ ಪ್ರದೇಶದ 48 ಶಾಲೆಗಳಿಗೆ ಬಿಸಿಯೂಟ ತಯಾರಿಕೆ ಕೊಠಡಿ ಕಾಮಗಾರಿ ಆರಂಭವಾಗಿಲ್ಲ. ಕಡಕೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿತರಿಸಿದ ಬೇಳೆ ತೊಳೆದಾಗ ನೊರೆ ಬರುತ್ತಿದೆ ಎಂದು ಪ್ರಶ್ನಿಸಿದಾಗ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕಲ್ಮೇಶ ಸುಣದೋಳಿ, ಕೊಠಡಿ ನಿರ್ಮಣಕ್ಕೆ ಅನುದಾನ ಒದಗಿಸುವಂತೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕಡಕೋಳ ಶಾಲೆಯಲ್ಲಿ ನೀರಿನ ಸಮಸ್ಯೆಯಿಂದ ಬೇಳೆ ತೊಳೆದಾಗ ನೊರೆ ಬಂದಿತ್ತು. ಈ ಕುರಿತು ಅಡುಗೆ ತಯಾರಿಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.

    ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಗೌಡ ಕುಂದೂರ, ಸದಸ್ಯರಾದ ಬಸವರಾಜ ಕೋಳಿವಾಡ, ಬಸವರಾಜ ಕಳಸದ, ಭಾರತಿ ಕುಂಬಾರ, ಇಒ ಮುನಿಯಪ್ಪ ಪಿ., ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಇದ್ದರು.

    ತಾಡಪತ್ರಿ ವಿತರಣೆ ಶೀಘ್ರ: ತಾಲೂಕಿನಲ್ಲಿ ಶೇ. 50ರಷ್ಟು ರೈತರಿಗೆ ಮಾತ್ರ ಬೆಳೆ ವಿಮೆ ಹಣ ವಿತರಣೆಯಾಗಿದೆ. ಇದುವರೆಗೂ ತಾಡಪತ್ರಿ ವಿತರಿಸಿಲ್ಲ ಏಕೆ ಎಂದು ಸಹಾಯಕ ಕೃಷಿ ನಿರ್ದೇಶಕ ಬಸವನಗೌಡ ಪಾಟೀಲ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ 23 ಸಾವಿರ ಹೆಕ್ಟೇರ್​ಗೆ ಬೆಳೆ ವಿಮೆ ವಿತರಣೆಯಾಗಿದೆ. 792 ರೈತರಿಗೆ ಮಿಸ್​ವ್ಯಾಚ್ ಆಗಿತ್ತು. ಆದ್ದರಿಂದ, ವಿತರಣೆ ಬಾಕಿ ಉಳಿದಿದೆ. ಒಂದು ವಾರದಲ್ಲಿ ತಾಡಪತ್ರಿ ವಿತರಿಸಲಾಗುವುದು ಎಂದು ಬಸವನಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts