More

    ಟ್ವಿನ್‌ಬಿನ್ ತ್ಯಾಜ್ಯ ವಿಲೇವಾರಿಗೆ ಅಸಡ್ಡೆ

    ರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    ರಸ್ತೆ ಬದಿ ಸಾರ್ವಜನಿಕರು ಕಸ ಹಾಕಲು ಸರಳ ಹಾಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನಗರಸಭೆ ವತಿಯಿಂದ ವಿವಿಧೆಡೆ ಟ್ವಿನ್‌ಬಿನ್ (ಗೋಲಾಕಾರದ ಕಸದ ತೊಟ್ಟಿ) ಅಳವಡಿಸಲಾಗಿದೆ.

    ಆದರೆ, ಅವುಗಳಿಗೆ ಸಾರ್ವಜನಿಕರು ಹಾಕುವ ತ್ಯಾಜ್ಯ ವಿಲೇವಾರಿ ಮಾಡಲು ನಗರಸಭೆ ಕಾರ್ಮಿಕರು ಎರಡ್ಮೂರು ದಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಟ್ವಿನ್‌ಬಿನ್‌ನಲ್ಲಿರುವ ತ್ಯಾಜ್ಯ ರಸ್ತೆಯುದ್ದಕ್ಕೂ ಹರಡಿಕೊಂಡು ನಗರದ ಅಂದ ಹಾಳು ಮಾಡುತ್ತಿದೆ.

    ನಗರಸಭೆಯ 14ನೇ ಹಣಕಾಸು ಯೋಜನೆಯಡಿ ಲಕ್ಷಾಂತರ ರೂ. ಖರ್ಚು ಮಾಡಿ ನಗರದ ಹಳೆಯ ಪಿ.ಬಿ. ರಸ್ತೆ, ಎಂ.ಜಿ. ರಸ್ತೆ, ಕೋರ್ಟ್ ವೃತ್ತ, ಪೋಸ್ಟ್ ವೃತ್ತ ಸೇರಿ ನಗರದ 120 ಕಡೆ ಟ್ವಿನ್‌ಬಿನ್ ಅಳವಡಿಸಲಾಗಿದೆ. ಪೋಸ್ಟ್ ವೃತ್ತ, ಕೋರ್ಟ್ ವೃತ್ತದಲ್ಲಿರುವ ಟ್ವಿನ್‌ಬಿನ್‌ಗಳು ಕಸದ ಬದಲು ಉಗುಳುವ ತೊಟ್ಟಿಗಳಾಗಿವೆ.

    ಜತೆಗೆ ಸಿದ್ದೇಶ್ವರ ನಗರ, ಮಾರುತಿ ನಗರ ಸೇರಿ ವಿವಿಧೆಡೆ ಕೆಲವರು ಅಂಗಡಿಗಳ ಮುಂದೆ ಕಸದ ತೊಟ್ಟಿ ಏಕೆ ಎಂದುಕೊಂಡು ಮುರಿದು ಹಾಕಿದ್ದಾರೆ. ಕೆಲವೆಡೆ ಟ್ವಿನ್‌ಬಿನ್‌ಗಳು ಕಸದಿಂದ ತುಂಬಿ ಹೋಗಿದ್ದು, ದುರ್ನಾತ ಹರಡುತ್ತಿದೆ.

    ಸೂಕ್ತ ಕ್ರಮ ಕೈಗೊಳ್ಳಿ: ಜನತೆ ಸರಿಯಾಗಿ ಟ್ವಿನ್‌ಬಿನ್‌ನಲ್ಲಿಯೆ ತ್ಯಾಜ್ಯ ಎಸೆಯುತ್ತಿದ್ದಾರೆ. ಆದರೆ, ತ್ಯಾಜ್ಯವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದ ಕಾರಣ ಸಮಸ್ಯೆ ಉಂಟಾಗುತ್ತಿದೆ. ನಗರಸಭೆಯ ಕಾರ್ಮಿಕರು ನಿತ್ಯವೂ ಟ್ವಿನ್‌ಬಿನ್ ಬಳಿಯ ಕಸ ತೆಗೆಯುತ್ತಾರೆ. ಅದರ ಒಳಗಿರುವ ತ್ಯಾಜ್ಯವನ್ನು ವಾಹನದವರು ವಿಲೇವಾರಿ ಮಾಡುತ್ತಿಲ್ಲ. ಆದ್ದರಿಂದ ನಗರಸಭೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಟ್ವಿನ್‌ಬಿನ್‌ನಲ್ಲಿನ ಕಸ ವಿಲೇವಾರಿ ನಿತ್ಯವೂ ಮಾಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ನಗರಸಭೆಯವರು ಲಕ್ಷಾಂತರ ರೂ. ಖರ್ಚು ಮಾಡಿ ನಗರದಲ್ಲಿ ಟ್ವಿನ್‌ಬಿನ್ ಅಳವಡಿಸಿದ್ದಾರೆ. ಆದರೆ, ಅವುಗಳ ನಿರ್ವಹಣೆ ಸರಿಯಾಗಿಲ್ಲದ ಕಾರಣ ಕೆಲವೆಡೆ ಅವುಗಳನ್ನು ಮುರಿದು ಹಾಕಿದ್ದಾರೆ. ಇನ್ನೂ ಕೆಲವೆಡೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಗಬ್ಬು ನಾರುತ್ತಿವೆ. ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು.
    I ನಾಗರಾಜ ಎಂ., ಸ್ಥಳೀಯ ನಿವಾಸಿ

    ಟ್ವಿನ್‌ಬಿನ್‌ಗಳಲ್ಲಿನ ತ್ಯಾಜ್ಯವನ್ನು ನಿತ್ಯವೂ ವಿಲೇವಾರಿ ಮಾಡಲು ಸಿಬ್ಬಂದಿಗೆ ಸೂಚಿಸಿದ್ದೇವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆ ಎಂಬುದನ್ನು ಪರಿಶೀಲಿಸಿ ಕೂಡಲೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
    I ಮಂಜುಳಾದೇವಿ ಎಂ., ಪರಿಸರ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts