More

    ತುಂಬೆ ನೀರಾ ಘಟಕಕ್ಕೆ ಮರುಜೀವ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಹಲವು ವರ್ಷಗಳಿಂದ ಕಾರ್ಯ ಸ್ಥಗಿತಗೊಳಿಸಿ ನಿಷ್ಪ್ರಯೋಜಕವಾಗುತ್ತಿರುವ ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿರುವ ನೀರಾ ಘಟಕಕ್ಕೆ ಮರುಜೀವ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ರೈತಪರ ಖಾಸಗಿ ಸಂಸ್ಥೆಗೆ ನೀಡಿ ನೀರಾ ಘಟಕವನ್ನು ಕಾರ್ಯಾರಂಭಗೊಳಿಸಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ.

    ಆಸಕ್ತ ಸಂಸ್ಥೆಗೆ ಘಟಕವನ್ನು ನಡೆಸುವ ಗುತ್ತಿಗೆ ನೀಡುವ ಯೋಜನೆ ಇಲಾಖೆ ಹೊಂದಿದ್ದು, ಈಗಾಗಲೇ ಟೆಂಡರ್ ಕರೆಯುವ ಸೂಚನೆ ಬಂದಿದೆ. ಆದರೆ ಟೆಂಡರ್ ಕರೆಯುವುದಕ್ಕೆ ಮುಂಚೆ ಅದರ ನಿಯಮಗಳು ಸಿದ್ಧಗೊಳ್ಳಬೇಕಿದ್ದು, ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ಅನುಮತಿ ಪಡೆದು ಗುತ್ತಿಗೆ ನೀಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

    ನೀರಾ ಘಟಕದಲ್ಲಿ ನೀರಾ ಜತೆಗೆ ಅದನ್ನು ಸಂಸ್ಕರಿಸಿ ಬೆಲ್ಲ, ಸಕ್ಕರೆ ಹಾಗೂ ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಕುರಿತು ಜಿಲ್ಲಾ ತೋಟಗಾರಿಕಾ ಇಲಾಖೆಯ ಅಂಗಸಂಸ್ಥೆ ಹಾಪ್‌ಕಾಮ್ಸ್‌ಗೆ ನೀಡುವುದಕ್ಕೆ ಚಿಂತನೆ ನಡೆದಿತ್ತು. ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ ಈ ಕುರಿತು ವಿಶೇಷ ಆಸಕ್ತಿ ತಳೆದು ಹಾಪ್‌ಕಾಮ್ಸ್‌ಗೆ ಮನವಿ ಮಾಡಿದ್ದರು. ಅದರ ಸಾಧಕ- ಬಾಧಕಗಳ ಕುರಿತು ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಹಾಪ್‌ಕಾಮ್ಸ್ ತಿಳಿಸಿತ್ತು.

    ಈಗ ಖಾಸಗಿ ಸಂಸ್ಥೆಗಳು ನೀರಾ ಘಟಕವನ್ನು ಮುನ್ನಡೆಸಲು ಆಸಕ್ತಿ ತೋರಿದರೆ ಇಲಾಖೆ ಅನುಮತಿ ಕೊಡಲು ಚಿಂತನೆ ನಡೆಸಿದೆ. ಇದಕ್ಕೆ ಜಿಲ್ಲಾ ಸಮಿತಿ ಸಭೆ ನಡೆಸಿ ಚರ್ಚಿಸಿ ಬಳಿಕ ನಿರ್ಧಾರ ಕೈಗೊಳ್ಳಲಿದೆ. ಖಾಸಗಿ ಎಂದರೆ ಯಾವುದೇ ವ್ಯಕ್ತಿಗೆ ಅಥವಾ ವಾಣಿಜ್ಯ ಸಂಸ್ಥೆಗೆ ನೀಡುತ್ತಿಲ್ಲ. ಬದಲಾಗಿ ರೈತರಿಗೆ ಸಂಬಂಧಿಸಿದ ಸಂಸ್ಥೆಗಳ ಅಥವಾ ಸಹಕಾರಿ ಸಂಘಗಳಿಗೆ ನೀಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

    ರಾಜ್ಯದ ಮೊದಲ ಘಟಕ: ತುಂಬೆಯಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ 2011-12ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್ ತೆಂಗು ಉತ್ಪಾದಕ ಕಂಪನಿಗಳು ನಿರ್ವಹಣೆ ಮೂಲಕ ನೀರಾ ಘಟಕ ಆರಂಭಿಸಿ ರಾಜ್ಯದ ಮೊದಲ ನೀರಾ ಘಟಕ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತ್ತು. ಮೂರ್ತೆದಾರರ ಮಹಾಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟವೂ ಆರಂಭವಾಗಿತ್ತು. 2014ರಲ್ಲಿ ನೀರಾ ತಂಪು ಪಾನೀಯವನ್ನು ಟೆಟ್ರಾ ಪ್ಯಾಕೆಟ್‌ಗಳ ಮೂಲಕ ಮಂಗಳೂರು ಹಾಪ್‌ಕಾಮ್ಸ್‌ಗೆ ರವಾನಿಸಲಾಗುತ್ತಿತ್ತು. ಘಟಕ ದಿನಕ್ಕೆ ಗರಿಷ್ಠ 2 ಸಾವಿರ ಲೀ. ಸಂಗ್ರಹ ಮತ್ತು ಸಂಸ್ಕರಣೆ ಸಾಮರ್ಥ್ಯ ಹೊಂದಿದ್ದು, ಆದರೆ 2016ರಲ್ಲಿ ನಿರ್ವಹಣೆ ಸಾಧ್ಯವಾಗದೆ ಘಟಕ ಮುಚ್ಚಲ್ಪಟ್ಟಿತ್ತು.

    ತುಂಬೆಯ ತೋಟಗಾರಿಕಾ ಕ್ಷೇತ್ರದಲ್ಲಿರುವ ನೀರಾ ಘಟಕವನ್ನು ಆಸಕ್ತ ರೈತಪರ ಖಾಸಗಿ ಸಂಸ್ಥೆಗಳಿಗೆ ನೀಡುವ ಚಿಂತನೆ ಇಲಾಖೆಯ ಮುಂದಿದ್ದು, ಅದರ ನಿಯಮ- ನಿಬಂಧನೆಗಳನ್ನು ಸಿದ್ಧಪಡಿಸಿ ಟೆಂಡರ್ ಕರೆಯಲಾಗುತ್ತದೆ. ಜತೆಗೆ ಇಲಾಖೆಯ ಕೇಂದ್ರ ಕಚೇರಿಯ ಅನುಮತಿ, ಜಿಲ್ಲಾ ಸಮಿತಿಯ ಸಭೆಯ ಬಳಿಕವೇ ನಿರ್ಧಾರ ಕೈಗೊಳ್ಳಲಾಗುತ್ತದೆ.
    – ಪ್ರದೀಪ್ ಡಿಸೋಜ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರು, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts