More

    ರಸ್ತೆ ಅಪಘಾತ, ಪ್ರತಿ 60 ನಿಮಿಷಕ್ಕೆ 18 ಮಂದಿ ಬಲಿ: ಎನ್​ಸಿಆರ್​ಬಿ ವರದಿಯಲ್ಲಿ ಬಹಿರಂಗ

    ನವದೆಹಲಿ: ದೇಶದಾದ್ಯಂತ 2021ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1.55 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಜನರು ಅಪಘಾತಗಳಿಗೆ ಬಲಿಯಾದ ಪ್ರಕರಣ ಇದಾಗಿದೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್​ಸಿಆರ್​ಬಿ) ವರದಿ ತಿಳಿಸಿದೆ. ದಿನಕ್ಕೆ ಸರಾಸರಿ 426 ಅಥವಾ ಪ್ರತಿ ಗಂಟೆಗೆ ಸರಾಸರಿ 18 ಜನರು ರಸ್ತೆ ಅವಘಡಗಳಿಂದ ಪ್ರಾಣ ಕಳೆದುಕೊಳ್ಳುತ್ತಿರುವುದು ಸರ್ಕಾರಿ ಅಂಕಿ ಸಂಖ್ಯೆಗಳಿಂದ ತಿಳಿದುಬಂದಿದೆ.

    ಕಳೆದ ವರ್ಷ, ಇಷ್ಟೊಂದು ಸಾವುಗಳಲ್ಲದೆ, 4.03 ಲಕ್ಷ ಅಪಘಾತಗಳಲ್ಲಿ 3.71 ಲಕ್ಷ ಜನರು ಗಾಯಗೊಂಡಿದ್ದಾರೆ ಎಂದು ‘ಭಾರತದಲ್ಲಿ ಅಪಘಾತಗಳ ಸಾವು ಹಾಗೂ ಆತ್ಮಹತ್ಯೆಗಳು-2021’ ವಿಭಾಗದಲ್ಲಿ ಎನ್​ಸಿಆರ್​ಬಿ ದಾಖಲಿಸಿದೆ. ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಕಳೆದ ವರ್ಷ ಉತ್ತುಂಗಕ್ಕೆ ತಲುಪಿದ್ದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಸ್ತೆ ಅಪಘಾತಗಳು ಹಾಗೂ ಗಾಯಾಳುಗಳ ಸಂಖ್ಯೆ ಇಳಿಮುಖವಾಗಿದೆ. ಕೋವಿಡ್ ಲಾಕ್​ಡೌನ್​ಗಳಿದ್ದ 2020ರಲ್ಲಿ ದೇಶದಲ್ಲಿ 3.54 ಲಕ್ಷ ಅಪಘಾತಗಳು ಸಂಭವಿಸಿದ್ದು ಅವುಗಳಲ್ಲಿ 1.33 ಲಕ್ಷ ಜನರು ಮೃತರಾಗಿದ್ದರು. 3.35 ಲಕ್ಷ ಮಂದಿ ಗಾಯಗೊಂಡಿದ್ದರು.

    2019ರ ಅಂಕಿಸಂಖ್ಯೆ: 2019ರಲ್ಲಿ ಒಟ್ಟು 4.37 ಲಕ್ಷ ಅಪಘಾತ ಸಂಭವಿಸಿದ್ದು 1.54 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದರು. 4.39 ಲಕ್ಷ ಜನ ಗಾಯಗೊಂಡಿದ್ದರು. 2018ರಲ್ಲಿ ಸಂಭವಿಸಿದ 4.45 ರಸ್ತೆ ಅಪಘಾತ ಗಳಲ್ಲಿ 1.52 ಲಕ್ಷ ಮಂದಿ ಸತ್ತು 4.46 ಲಕ್ಷ ಜನರು ಗಾಯಗೊಂಡಿದ್ದರು ಎಂದು ಎನ್​ಸಿಆರ್​ಬಿ ವರದಿ ಹೇಳಿದೆ.

    1.64 ಲಕ್ಷ ಆತ್ಮಹತ್ಯೆ: ಭಾರತದಲ್ಲಿ 2021ರಲ್ಲಿ 1.64 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದರೆ ಪ್ರತಿದಿನ 450 ಮಂದಿ ಅಥವಾ ಪ್ರತಿ ಗಂಟೆಗೆ 18 ಜನರು ಸ್ವಯಂ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಈ ಪ್ರಮಾಣದಲ್ಲಿ ಆತ್ಮಹತ್ಯೆಗಳು ದಾಖಲಾಗಿರಲಿಲ್ಲ. ಆತ್ಮಹತ್ಯೆಗೆ ಶರಣಾದವರಲ್ಲಿ 1.19 ಲಕ್ಷ ಪುರುಷರು, 45,026 ಮಹಿಳೆಯರು ಹಾಗೂ 28 ತೃತೀಯ ಲಿಂಗಿಗಳಿದ್ದಾರೆ (ಟ್ರಾನ್ಸ್​ಜೆಂಡರ್) ಎಂದು ಎನ್​ಸಿಆರ್​ಬಿ ವರದಿ ಹೇಳಿದೆ.

    ಸಾವಿಗಿಂತ ಹೆಚ್ಚು ಗಾಯ: ಸಾಮಾನ್ಯವಾಗಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರಿ ಗಿಂತ ಗಾಯಾಳುಗಳಾದವರ ಸಂಖ್ಯೆಯೇ ಹೆಚ್ಚಿರುತ್ತದೆ. ಆದರೆ ಮಿಜೋರಾಂ, ಪಂಜಾಬ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ರಸ್ತೆ ಅವಘಡಗಳಲ್ಲಿ ಗಾಯಗೊಂಡವರಿಗಿಂತ ಮೃತಪಟ್ಟವರೇ ಜಾಸ್ತಿ ಎಂಬ ಆಘಾತಕಾರಿ ಅಂಶ ಕಂಡುಬಂದಿದೆ.

    ಬಸ್​ಗಳು ಸುರಕ್ಷಿತ: ಮೋಟರ್ ಸೈಕಲ್​ನಂಥ ಖಾಸಗಿ ವಾಹನಗಳಿಗಿಂತ ಬಸ್​ನಂಥ ಸಾರ್ವಜನಿಕ ಸಾರಿಗೆ ವಿಧಾನ ಹೆಚ್ಚು ಸುರಕ್ಷಿತ ಎಂಬುದನ್ನು ಎನ್​ಸಿಆರ್​ಬಿ ಅಂಕಿಅಂಶಗಳು ಸೂಚಿಸುತ್ತವೆ. ರಸ್ತೆ ಅಪಘಾತದ ಸಾವುಗಳಲ್ಲಿ ಶೇಕಡ 44.5 ಜನರು ದ್ವಿಚಕ್ರ ವಾಹನ ಚಾಲಕರಾಗಿದ್ದಾರೆ. ನಂತರದ ಸ್ಥಾನ ಅನುಕ್ರಮವಾಗಿ ಕಾರು (15.1%), ಟ್ರಕ್ ಅಥವಾ ಲಾರಿ (9.4%), ಮತ್ತು ಬಸ್ (3%) ಗಳದ್ದಾಗಿದೆ. ಶೇಕಡ 59.7ರಷ್ಟು ಅಪಘಾತಗಳು ಅತಿ ವೇಗದ ಚಾಲನೆಯಿಂದ ಸಂಭವಿಸಿವೆ.

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ನಿನ್ನೆಯಷ್ಟೇ ಜನ್ಮದಿನ, ಇಂದು ಸಾವು!; ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts