More

    ಎನ್‌ಸಿಪಿ ಅಭ್ಯರ್ಥಿ ಬೆಂಬಲಿಸಿ

    ಬೋರಗಾಂವ: ಭ್ರಷ್ಟಾಚಾರದ ಇಮೇಜ್ ಹೊಂದಿರುವ ಸರ್ಕಾರವನ್ನು ಕಿತ್ತೊಗೆದು ಅಭಿವೃದ್ಧಿಗಾಗಿ ಎನ್‌ಸಿಪಿ ಅಭ್ಯರ್ಥಿ ಉತ್ತಮ ಪಾಟೀಲ ಅವರನ್ನು ಗೆಲ್ಲಿಸಬೇಕು ಎಂದು ಎನ್‌ಸಿಪಿ ಅಧ್ಯಕ್ಷ ಶರದ ಪವಾರ್ ಕರೆ ನೀಡಿದರು.

    ನಿಪ್ಪಾಣಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎನ್‌ಸಿಪಿ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಣಬಲದಿಂದ ಸರ್ಕಾರ ಉರುಳಿಸಲಾಗುತ್ತಿದೆ. ಇಂಥವರಿಗೆ ಅವರ ಸ್ಥಾನ ತೋರಿಸುವ ಸಮಯ ಬಂದಿದೆ ಎಂದರು.

    ರಾಜ್ಯ ಸರ್ಕಾರ ಶೇ.40 ಕಮಿಷನ್ ಆರೋಪ ಹೊತ್ತು ಅಧಿಕಾರ ನಡೆಸುತ್ತಿದೆ. ಜನ ಹಿತಕ್ಕಾಗಿ ಇಂತಹ ಸರ್ಕಾರವನ್ನು ಮನೆಗೆ ಕಳುಹಿಸಬೇಕಿದೆ. ಡಾ. ಅಂಬೇಡ್ಕರ್ ಜನ್ಮದಿನವನ್ನು ಅಶುಭ ದಿನ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಬಗ್ಗೆ ಈ ರೀತಿ ಮಾತನಾಡುವ ಸಚಿವರನ್ನು ಸೋಲಿಸಬೇಕು ಎಂದರು.

    ನಾನು ಕಬ್ಬು ಸಂಶೋಧನಾ ಬೆಲೆ ಸಮಿತಿ ಅಧ್ಯಕ್ಷನಾಗಿದ್ದು, ಗುಣಮಟ್ಟದ ಕಬ್ಬು ಬೆಳೆದರೆ ನ್ಯಾಯಯುತ ಬೆಲೆ ನೀಡಲು ಪ್ರಯತ್ನಿಸುತ್ತಿದ್ದೇನೆ. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಚುನಾವಣೆ ಪ್ರಚಾರಕ್ಕೆ ನಿಪ್ಪಾಣಿಗೆ ಆಗಮಿಸಿದ್ದೆ. ಈಗ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಎನ್‌ಸಿಪಿ ಅಭ್ಯರ್ಥಿ ಉತ್ತಮ ಪಾಟೀಲ ಅವರನ್ನು ಗೆಲ್ಲಿಸಬೇಕು ಎಂದರು.

    ಹತ್ತು ವರ್ಷದಿಂದ ಅಧಿಕಾರದಲ್ಲಿರುವವರು ಕ್ಷೇತ್ರದ ಮೂಲಸೌಕರ್ಯ ಕಲ್ಪಿಸಿಲ್ಲ. ಉತ್ತಮ ಪಾಟೀಲ ಅವರನ್ನು ಆಯ್ಕೆ ಮಾಡಿದರೆ ಮುಂದಿನ 25 ವರ್ಷ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲಿದೆ. ಎನ್‌ಸಿಪಿ ಕೇವಲ ಮೂರುವರೆ ಜಿಲ್ಲೆಗಳ ಪಕ್ಷ ಎಂದು ಹೇಳುವ ಮಹಾ ಡಿಸಿಎಂ ದೇವೇಂದ್ರ ಫಡ್ನವೀಸ್ ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಂದರ್ಭದಲ್ಲಿ ನಮ್ಮ ಬಳಿ ಬಂದು ಸಹಾಯ ಪಡೆದಿರುವುದನ್ನು ಮರೆಯಬಾರದು. ಹಿಂಸಾಚಾರ ಮಾಡುವವರು ಎನ್‌ಸಿಪಿಯನ್ನು ಅಳೆಯಬಾರದು ಎಂದರು.

    ಮಾಜಿ ಸಚಿವ ಹಸನ್ ಮುಶ್ರೀಫ್ ಮಾತನಾಡಿ, ವೇದಗಂಗಾ, ದೂಧಗಂಗಾ ನಂತರ ನಿಪ್ಪಾಣಿಯಲ್ಲಿ ಜನರ ಪ್ರವಾಹ ನೋಡಲಾಗುತ್ತಿದೆ. ಇಂತಹ ಉಕ್ಕಿಹರಿಯುವ ಜನರನ್ನು ನೋಡಿದರೆ ಉತ್ತಮ ಪಾಟೀಲ ಗೆಲುವು ನಿಶ್ಚಿತ. ಕಾಕಾಸಾಹೇಬ ಪಾಟೀಲ ಅವರ ಆರೋಗ್ಯ ಸರಿ ಇಲ್ಲ ಎಂದು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸಲಹೆ ನೀಡಲಾಗಿತ್ತು. ಆದರೆ, ಅವರು ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ಬೀರೇಶ್ವರ ಹಾಗೂ ಅರಿಹಂತ ನಡುವೆ ಕುಸ್ತಿ ನಡೆಯುತ್ತಿದ್ದು, ಅರಿಹಂತ ಗೆಲುವು ಖಚಿತ ಎಂದರು.

    ಅಭ್ಯರ್ಥಿ ಉತ್ತಮ ಪಾಟೀಲ ಮಾತನಾಡಿ, ಸಮಾಜಮುಖಿ ಕೆಲಸಗಳನ್ನು ಗಮನಿಸಿ ಎನ್‌ಸಿಪಿ ಅಧ್ಯಕ್ಷ ಶರದ ಪವಾರ್ ನನಗೆ ಟಿಕೆಟ್ ನೀಡಿದ್ದಾರೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಡಂಗುರ ಹೊಡೆಯುತ್ತಿರುವ ಸಚಿವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮುಖಂಡರಾದ ರಾವಸಾಹೇಬ ಪಾಟೀಲ, ಮಾಜಿ ಶಾಸಕ ಕೆ.ಪಿ.ಪಾಟೀಲ, ರಾಜು ಆವಳೆ, ಪ್ರೊ. ಸುಭಾಷ ಜೋಶಿ, ಶೀತಲ್ ಫರಕ್ತೆ ,ಅಭಿನಂದನ ಪಾಟೀಲ್, ಅಶೋಕಕುಮಾರ್ ಅಸೋದೆೆ, ಸುನೀಲ ಪಾಟೀಲ, ರವೀಂದ್ರ ಶಿಂಧೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts