More

  ನಿಧಿ ಆಸೆಗಾಗಿ ನಂದಿ ವಿಗ್ರಹ ಭಗ್ನ

  ನಾಯಕನಹಟ್ಟಿ: ನಿಧಿ ಆಸೆಗಾಗಿ ಪಟ್ಟಣ ಸಮೀಪದ ರಾಮದುರ್ಗ ಹೊಸಗುಡ್ಡದ ರಾಮಲಿಂಗೇಶ್ವರ ಗುಹಾಂತರ ದೇವಾಲಯದಲ್ಲಿ ಭಾನುವಾರ ತಡರಾತ್ರಿ ನಂದಿವಿಗ್ರಹ ವಿರೂಪಗೊಳಿಸಿರುವ ಘಟನೆ ನಡೆದಿದೆ.

  ಈ ಗುಹಾಂತರ ದೇವಾಲಯ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಬದಾಮಿಯ ಗುಹಾಂತರ ದೇವಾಲಯ ಬಿಟ್ಟರೆ ರಾಜ್ಯದ 2ನೇ ಅತಿದೊಡ್ಡ ಏಕಶಿಲಾ ಗುಹಾಂತರ ದೇವಾಲಯ ಎಂಬ ಖ್ಯಾತಿ ಪಡೆದಿದೆ.

  ಇದು ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ನಾಮಫಲಕ ಬಿಟ್ಟರೆ ದೇಗುಲದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಹೊಸಗುಡ್ಡದಲ್ಲಿ ಹಲವು ಬಾರಿ ಶೋಧ ನಡೆಸಿದ ನಿಧಿಗಳ್ಳರು, ಗುಡ್ಡದಲ್ಲಿ ಕಂದಕಗಳನ್ನು ಸೃಷ್ಟಿಸಿದ್ದರು. ವಾಮಾಚಾರ ಮಾಡಿದ ಕುರುಹುಗಳು ಕಂಡು ಬಂದಿವೆ.

  ನಿಧಿಗಳ್ಳರು ಈ ಹಿಂದೆ ನಂದಿ ವಿಗ್ರಹದ ಬಾಯಿಗೆ ಹಾನಿ ಮಾಡಿದ್ದರು. ಆಗ ಗ್ರಾಮಸ್ಥರು ಹಿತ್ತಾಳೆಯ ಪಟ್ಟಿ ಮಾಡಿಸಿ ಬಾಯಿಯ ಸುತ್ತ ಕಟ್ಟಿದ್ದರು. ನಂತರದ ದಿನಗಳಲ್ಲಿ ವಿಗ್ರಹದ ಬೆನ್ನಿನ ಭಾಗದಲ್ಲಿ ರಂಧ್ರಮಾಡಿ ಒಡೆಯಲು ಯತ್ನಿಸಿ ವಿಫಲರಾಗಿದ್ದರು. ಆದರೆ, ಭಾನುವಾರ ರಾತ್ರಿ ದೇವಾಲಯದಲ್ಲಿ ಯಾರೂ ಇಲ್ಲದಿದ್ದಾಗ ಪುನಃ ನಂದಿ ವಿಗ್ರಹ ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ.

  ಇಂತಹ ಘಟನೆ ಮತ್ತೆಂದೂ ನಡೆಯದಂತೆ ಸಂಬಂಧಿಸಿದ ಅಧಿಕಾರಿಗಳು ದೇಗುಲಕ್ಕೆ ಬಂದೋಬಸ್ತ್ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ಅರ್ಚಕ ಗೋಪಾಲನಾಯಕ ಹೇಳಿಕೆ: ನಿಧಿಗಳ್ಳರು ಈ ಹಿಂದೆ ಹಲವು ಬಾರಿ ನಿಧಿಶೋಧಕ್ಕಾಗಿ ನಂದಿ ವಿಗ್ರಹ ಧ್ವಂಸಗೊಳಿಸಿದ್ದರು. ಗ್ರಾಮಸ್ಥರು ಹಾಗೂ ಭಕ್ತರ ನೆರವಿನಿಂದ ದೇಗುಲದ ಮುಂಭಾಗ ಕಬ್ಬಿಣದ ಸರಳು ಹಾಕಿ ಬಂದೋಬಸ್ತ್ ಮಾಡಲಾಗಿತ್ತು. ಈಗ ವಿಗ್ರಹ ಒಳಗೊಂಡಂತೆ ಇಡೀ ದೇಗುಲಕ್ಕೆ ಕಬ್ಬಿಣದ ರಕ್ಷಣಾ ಜಾಲರಿ ಹಾಕಿಸಬೇಕಿದೆ. ಇದಕ್ಕೆ ಭಕ್ತರು, ಸಂಬಂಧಿಸಿದ ಇಲಾಖೆ ಸಹಕಾರ ನೀಡಬೇಕು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts