More

    ಹಟ್ಟಿ ಜಾತ್ರೆ ಧಾರ್ಮಿಕ ಕಾರ್ಯಕ್ಕೆ ಚಾಲನೆ

    ನಾಯಕನಹಟ್ಟಿ: ಚಳ್ಳಕೆರೆ ತಾಲೂಕು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಂಕಣಧಾರಣೆಯೊಂದಿಗೆ ಜಾತ್ರೆಯ ಧಾರ್ಮಿಕ ಆಚರಣೆಗಳಿಗೆ ಶುಕ್ರವಾರ ರಾತ್ರಿ ಚಾಲನೆ ದೊರೆತಿದೆ.

    ಮಾ.10ರಂದು ತಿಪ್ಪೇರುದ್ರಸ್ವಾಮಿ ರಥೋತ್ಸವ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿವೆ. ದೇಗುಲದ ಒಳಾಂಗಣದಲ್ಲಿ ಅಲಂಕೃತ ಕುಂಭ ಹಾಗೂ ದೀಪಗಳೊಂದಿಗೆ ವಿಶೇಷ ಪೂಜೆ ನೆರವೇರಿದವು.

    ಪುರೋಹಿತರ ಮಂತ್ರ ಘೋಷ ಹಾಗೂ ಮಂಗಳ ವಾದ್ಯಗಳೊದಿಗೆ ಕಂಕಣಧಾರಣೆ ನಡೆಯಿತು. ರಥೋತ್ಸವದಲ್ಲಿ ಪಾಲ್ಗೊಳ್ಳುವ ಪ್ರಮುಖರಿಗೆ ಕಂಕಣ ಕಟ್ಟಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಕ್ಕೆ ಕಟ್ಟುಪಾಡುಗಳನ್ನು ವಿಧಿಸಲಾಯಿತು.

    ಕಂಕಣಧಾರಣೆ ನಂತರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಪಲ್ಲಕ್ಕಿ ಹಾಗೂ ದೇಗುಲವನ್ನು ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.

    ಉತ್ಸವ ಮೂರ್ತಿಗೆ ಹೊಸ ಶೈಲಿ ವಿನ್ಯಾಸದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು. ಭಕ್ತಾದಿಗಳು ನೀಡಿದ್ದ ಚಿನ್ನದ ಆವರಣಗಳನ್ನು ಉತ್ಸವ ಮೂರ್ತಿಗೆ ಅಳವಡಿಸಲಾಗಿತ್ತು. ಚಿನ್ನದ ಕಿರೀಟ ವಿಶೇಷವಾಗಿ ಗಮನಸೆಳೆಯಿತು.

    ಇವುಗಳ ಜತೆಗೆ ಮಲ್ಲಿಗೆ, ಕನಕಾಂಬರ ಸೇರಿ ಹೂವಿನ ಅಲಂಕಾರ ವಿಶೇಷವಾಗಿತ್ತು. ಚಳ್ಳಕರೆಯ ಖಜಾನೆಯಲ್ಲಿದ್ದ ದೇವರ ಆಭರಣಗಳನ್ನು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ತರಲಾಗಿತ್ತು. ಜಾತ್ರೆ ಮುಕ್ತಾಯದ ವರೆಗೆ ಉತ್ಸವ ಮೂರ್ತಿಗೆ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.

    ಅಲಂಕೃತ ಉತ್ಸವ ಮೂರ್ತಿಯನ್ನು ನಂತರ ದೇವಾಲಯದ ಒಳಾಂಗಣದಲ್ಲಿ ಮೂರು ಬಾರಿ ಪ್ರದಕ್ಷಿಣೆ ಮಾಡಲಾಯಿತು. ಭಕ್ತರು ದೇಗುಲದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಉತ್ಸವದಲ್ಲಿ ನಂದಿಧ್ವಜ ದೇವಾಲಯದ ಮಂಗಳ ವಾದ್ಯಗಳಿದ್ದವು.

    ಆಯಗಾರರಾದ ಮಡಿವಾಳ, ಗೌಡ, ಗೊಂಚಿಗಾರ, ತಳವಾರ ಸೇರಿ ಸೇವಾಕರ್ತರು ಭಾಗವಹಿಸಿದ್ದರು. ಪ್ರತಿದಿನ ಒಂದು ವಾಹನದಲ್ಲಿ ದೇವರ ಉತ್ಸವ ನಡೆಯಲಿದೆ.
    ಗಜ, ಅಶ್ವ, ನವಿಲು ಸೇರಿ ವಾಹನಗಳ ಉತ್ಸವಗಳು ರಥಬೀದಿಯಲ್ಲಿ ಸಾಗಲಿವೆ. ರಥೋತ್ಸವಕ್ಕಾಗಿ ಹೊರಮಠ, ಒಳಮಠಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ.
    ದೇವಾಲಯದ ಇಒ ಎಚ್.ಗಂಗಾಧರಪ್ಪ, ಮಾಜಿ ಎಂಎಲ್ಸಿ ಜಯಮ್ಮ ಬಾಲರಾಜ್, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಕೆ.ತಿಪ್ಪೇರುದ್ರಪ್ಪ, ಎಂ.ವೈ.ಟಿ.ಸ್ವಾಮಿ, ಪಪಂ ಸದಸ್ಯೆ ವಿನುತಾ, ಸತೀಶ್, ಎಸ್.ವೈ.ಮುರಳಿಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts