More

    ತಿಪ್ಪೇಶನ ತೇರಿಗೆ ತೆಂಗಿನ ಮಿಣಿ ಸಮರ್ಪಣೆ

    ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಕೇಂದ್ರಬಿಂದುವಾದ ತೇರು ಎಳೆಯುವ ಮಿಣಿ (ಬೃಹತ್ ಗಾತ್ರದ ಹಗ್ಗ)ಯನ್ನು ಸಮೀಪದ ತಳಕು, ಮನ್ನೆಕೋಟೆ ಗ್ರಾಮಸ್ಥರು ಭಾನುವಾರ ರಾತ್ರಿ ಶ್ರೀಸ್ವಾಮಿ ದೇವಾಲಯಕ್ಕೆ ಸಮರ್ಪಣೆ ಮಾಡಿದರು.

    ಜಾತ್ರೆಯ ಪ್ರಮುಖ ಆಕರ್ಷಣೆಯಾದ ಒಂಬತ್ತು ಮಜಲಿನ 70 ಅಡಿ ಎತ್ತರದ 70 ಟನ್ ಭಾರವಿರುವ ತೇರು ನೋಡುವುದೇ ಒಂದು ವಿಶಿಷ್ಟ ಅನುಭವ. ಪ್ರತಿ ವರ್ಷವೂ ತೇರನ್ನು ಎಳೆಯಲು ರಾಜ್ಯ, ಹೊರ ರಾಜ್ಯಗಳಿಂದ ಭಕ್ತ ಸಮೂಹ ಆಗಮಿಸುತ್ತದೆ. ಇಂತಹ ರಥವನ್ನು ಸಾಗಿಸಲು ಬೇಕಾಗುವ ತೆಂಗಿನ ನಾರಿನ ಬೃಹತ್ ಮಿಣಿಯನ್ನು ತಲೆತಲಾಂತರಗಳಿಂದಲೂ ಸಮೀಪದ ತಳಕು, ಮನ್ನೆಕೋಟೆ ಗ್ರಾಮಸ್ಥರು ಕೊಡುವುದು ರೂಢಿಯಲ್ಲಿದೆ. ಬಹುಕಾಲದಿಂದಲೂ ಎರಡೂ ಗ್ರಾಮಗಳ ಪ್ರತಿ ಮನೆಯಿಂದ ತೆಂಗಿನ ನಾರು ಸಂಗ್ರಹಿಸಿ ಗ್ರಾಮದ ಹಿರಿಯರೆಲ್ಲ ಒಗ್ಗೂಡಿ ಹಗ್ಗವನ್ನು ತಯಾರಿಸಿ ತಿಪ್ಪೇಶನಿಗೆ ಅರ್ಪಿಸುತ್ತಿದ್ದರು.

    ಈ ಬಾರಿ ತೆಂಗಿನ ನಾರು ಮತ್ತು ಹಗ್ಗ ತಯಾರಿಸುವವರ ಕೊರತೆ ಕಾರಣ ಸಿದ್ಧ ಹಗ್ಗವನ್ನೇ ಖರೀದಿಸಿ ಕೊಡಲಾಗಿದೆ. ಇದಕ್ಕಾಗಿ ಗ್ರಾಮದ ಪ್ರತಿ ಮನೆಯಿಂದ ಧನ ಸಂಗ್ರಹಿಸಿ ತಮಿಳುನಾಡಿನ ಸೇಲಂನಿಂದ ಹಗ್ಗ ತರಿಸಲಾಗಿದೆ. ಒಂದು ಲಕ್ಷ ರೂ. ಬೆಲೆಯ ಈ ಹಗ್ಗವನ್ನು ತೆಂಗಿನ ನಾರನ್ನು ಬಳಸಿ ಯಂತ್ರದ ಸಹಾಯದಿಂದ ಹುರಿಗೊಳಿಸಲಾಗಿದೆ.

    ತಲಾ 300 ಅಡಿ ಉದ್ದದ ಎರಡು ಹಗ್ಗ ತರಿಸಲಾಗಿದೆ. ಎಂಟು ವರ್ಷಗಳ ಹಿಂದೆ ಹೊಸ ಮಿಣಿಗಳನ್ನು ಕೊಡಲಾಗಿತ್ತು. ಕಳೆದ ವರ್ಷ ಬಿಗಿಕಳೆದುಕೊಂಡಿದ್ದ ಮಿಣಿಗಳನ್ನು ದುರಸ್ತಿಗೊಳಿಸಲಾಗಿತ್ತು. ಈ ಬಾರಿ ರಥ ಪರಿಶೀಲನೆಗೆ ಬಂದಿದ್ದ ಪಿಡಬ್ಲ್ಯುಡಿ ಇಂಜಿನಿಯರ್‌ಗಳು ಹೊಸ ಹಗ್ಗಗಳ ಬಳಕೆಗೆ ಸೂಚನೆ ನೀಡಿದ್ದರು.

    ಬೃಹತ್ ಗಾತ್ರದ ಎರಡು ಮಿಣಿಗಳನ್ನು ಟ್ರ್ಯಾಕ್ಟರ್‌ನಲ್ಲಿಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವಾಲಯಕ್ಕೆ ಅರ್ಪಿಸಲಾಯಿತು. ದೇಗುಲದ ಪರವಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್, ಸದಸ್ಯರು ಮಿಣಿಗಳನ್ನು ಸ್ವೀಕರಿಸಿದರು. ತಳಕು ಹಾಗೂ ಮನ್ನೇಕೋಟೆ ಗ್ರಾಮದ ಮುಖಂಡರು, ಯುವಕರು, ನೌಕರರು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts