More

    ಮಾತೃಭಾಷೆ ಪೋಷಣೆ ಸವಾಲಿನ ಕೆಲಸ

    ಚಳ್ಳಕೆರೆ: ರಾಜ್ಯದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಷಿ ಕಳವಳ ವ್ಯಕ್ತಪಡಿಸಿದರು.

    ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ 16ನೇ ಸಮ್ಮೇಳನದ ಪ್ರಧಾನ ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ದಕ್ಷಿಣ ಭಾರತದಲ್ಲಿ ಮಲಯಾಳಿ ಭಾಷಿಕರು ನೂರಕ್ಕೆ ಶೇ.95ರಷ್ಟು, ತಮಿಳಿಗರು 92, ತೆಲುಗರು ಶೇ.86ರಷ್ಟು ಅವರವರ ಭಾಷೆಯನ್ನು ದಿನನಿತ್ಯದ ವ್ಯವಹಾರದಲ್ಲಿ ಬಳಸುತ್ತಾರೆ ಎಂದರು.

    ಕನ್ನಡಿಗರಲ್ಲಿ ಶೇ.64ರಷ್ಟು ಜನರು ಮಾತ್ರ ಕನ್ನಡ ಬಳಸುವುದನ್ನು ಕಾಣುತ್ತಿದ್ದೇವೆ. ಇದರಿಂದ ಬದಲಾಗುತ್ತಿರುವ ಸಮಾಜದ ವ್ಯವಸ್ಥೆಯಲ್ಲಿ ಭಾಷೆಯನ್ನು ಪೋಷಿಸುವುದು ಒಂದು ಸವಾಲಾಗಿ ಕಾಣುತ್ತಿದೆ ಎಂದು ಹೇಳಿದರು.ಮಾತೃಭಾಷೆ ಪೋಷಣೆ ಸವಾಲಿನ ಕೆಲಸ

    ವೀರ ಮತ್ತು ಶೂರತ್ವಕ್ಕೆ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಮತ್ತು ಅವಧೂತ ಸಂಸ್ಕೃತಿ ಪರಂಪರೆ ಕಾಣುತ್ತೇವೆ. ಪವಾಡ ಪುರುಷ ತಿಪ್ಪೇರುದ್ರಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೋಟೆ ನಾಡಿನ ಇತಿಹಾಸ ಅನಾವರಣ ಮಾಡಿರುವ ತರಾಸು ಅವರ ಸಾಹಿತ್ಯ ಓದಲೇಬೇಕಾದ ಬರವಣಿಗೆಯಾಗಿದೆ ಎಂದರು.

    ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ಮತ್ತು ತೆಲುಗು ಭಾಷಿಕರ ನೆಲೆಯಲ್ಲಿ ಕನ್ನಡ ಭಾಷಾ ಕಾರ್ಯಗಳಿಗೆ ಪ್ರೋತ್ಸಾಹ ಸಿಗಬೇಕಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣಕ್ಕೆ ಅವಕಾಶವಾಗಬೇಕು ಎಂದು ಮನವಿ ಮಾಡಿದರು.

    ಸಚಿವ ಬಿ.ಶ್ರೀರಾಮುಲು ಮಾತನಾಡಿ, ತಾಲೂಕಿನ ತಳಕು ಮತ್ತು ಬೆಳಗೆರೆ ಮನೆತನಗಳು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. 15 ದಿನಗಳ ಒಳಗೆ ತಳಕು ಗ್ರಾಮದಲ್ಲಿ 20 ಅಡಿ ಎತ್ತರದ ಟಿ.ಎಸ್.ವೆಂಕಣ್ಣಯ್ಯ ಪುತ್ಥಳಿ ನಿರ್ಮಿಸಲಾಗುವುದು ಎಂದು ಘೋಷಿಸಿದರು.

    ಕಸಾಪ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಜಿಪಂ ಮಾಜಿ ಸದಸ್ಯರಾದ ಜಿ.ತಿಪ್ಪೇಸ್ವಾಮಿ, ಡಾ.ಬಿ.ಯೋಗೇಶ್ ಬಾಬು, ಮುಖಂಡರಾದ ಪಟೇಲ್ ಜಿ.ಎನ್.ತಿಪ್ಪೇಸ್ವಾಮಿ, ಎಂವೈಟಿ ಸ್ವಾಮಿ, ಜಿ.ಟಿ.ರವಿಶಂಕರ್, ಜಿ.ಪಿ.ಜಯಪಾಲಯ್ಯ, ಆರ್.ಮಾರುತೇಶ್, ಎಚ್.ಗಂಗಾಧರಪ್ಪ, ಬಾಲರಾಜ್, ಪಿ.ತಿಪ್ಪೇಸ್ವಾಮಿ, ಕೆ.ಪಿ.ಭೂತಯ್ಯ, ಎಂ.ಎನ್.ಮೃತ್ಯುಂಜಯ, ಟಿ.ಜೆ.ತಿಪ್ಪೇಸ್ವಾಮಿ, ಬಿಇಒ ಕೆ.ಎಸ್.ಸುರೇಶ್, ಇಒ ಬಿ.ಕೆ.ಹೊನ್ನಯ್ಯ, ಪಪಂ ಮುಖ್ಯಾಧಿಕಾರಿ ಟಿ.ಲೀಲಾವತಿ, ಕೆ.ಚಿತ್ತಯ್ಯ, ಜಿ.ವಿ.ರಾಜಣ್ಣ, ಧನಂಜಯ ಇತರರಿದ್ದರು.

    ಯುವಕರು ಸಾಧಕರ ವಾರಸುದಾರರು
    ಕಾಲಿಗೆ ಪೆಟ್ಟು ಬಿದ್ದಾಗ ಕಣ್ಣೀರು ಸುರಿಸುವ ಕಣ್ಣಿನಂತೆ ಕನ್ನಡ ಭಾಷಾ ಕಟ್ಟುವ ಕಾರ್ಯಕ್ಕೆ ಶರೀರೋಪಾದಿಯಲ್ಲಿ ಸಮಾಜದ ಎಲ್ಲ ಸ್ಥರದ ವರ್ಗವೂ ಒಗ್ಗೂಡುವ ಕೆಲಸ ಆಗಬೇಕು ಸಮ್ಮೇಳನ ಅಧ್ಯಕ್ಷ ಬಿ.ತಿಪ್ಪಣ್ಣ ಮರಿಕುಂಟೆ ಹೇಳಿದರು.
    ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮಹನೀಯರ ಸಂಖ್ಯೆ ಸಾಕಷ್ಟಿದೆ. ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಆಶು ಕವಿಗಳಾಗಿದ್ದವರು. ಇವರ ಆದಿಯಾಗಿ ಬೆಳಗೆರೆ ಕೃಷ್ಣಶಾಸ್ತ್ರಿ, ಜಾನಕಮ್ಮ, ತಳುಕಿನ ವೆಂಕಣ್ಣಯ, ತರಾಸು ಹೀಗೆ ಸಾಧಕರ ಸಾಹಿತ್ಯ ಸೇವೆಯ ವಾರಸುದಾರರಾಗಿ ಭಾಷೆಯನ್ನು ಬೆಳೆಸುವ ಹೊಣೆ ಯುವಕರ ಮೇಲಿದೆ. ಬುಡಕಟ್ಟು ಸಂಪ್ರದಾಯ ಭಾಗವಾಗಿರುವ ನಮ್ಮಲ್ಲಿ ಜನಪದ ಮತ್ತು ಶಿಷ್ಟ ಸಾಹಿತ್ಯ ಅಪಾರವಾಗಿದೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts