More

    ಸಮಾನತೆಯ ಪರಿಕಲ್ಪನೆ ನೀಡಿದ ವಚನಕಾರರು

    ನಾಯಕನಹಟ್ಟಿ: ದೇಶ ಮತ್ತು ಕನ್ನಡ ಪರಿಸರಕ್ಕೆ ಮೊಟ್ಟಮೊದಲ ಬಾರಿಗೆ ಸಮಾನತೆಯ ಪರಿಕಲ್ಪನೆಯನ್ನು ನೀಡಿದ ಕೀರ್ತಿ 12ನೇ ಶತಮಾನದಲ್ಲಿ ಜೀವಿಸಿದ್ದ ವಚನಕಾರರಿಗೆ ಸಲ್ಲುತ್ತದೆ ಎಂದು ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಹೇಳಿದರು.

    ಸಮೀಪದ ತಳಕು ಹೋಬಳಿಯ ಘಟ್ಟಪರ್ತಿಯ ವಸತಿ ಪ್ರೌಢಶಾಲೆಯಲ್ಲಿ ಸೋಮವಾರ ಕನ್ನಡ ಭಾಷಾ ಕ್ಲಬ್, ಸಾಕ್ಷರತಾ ಕ್ಲಬ್ ಹಾಗೂ ಕನ್ನಡಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ-ಕನ್ನಡಿಗ-ಕರ್ನಾಟಕ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

    ಕನ್ನಡ ಸಾಹಿತ್ಯಕ್ಕೆ 2,500 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಸಾವಿರಾರು ಕವಿಗಳು ಅಸಂಖ್ಯಾತ ಪ್ರಮಾಣದಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಕವಿಗಳು ಓದುಗರನ್ನು ಸಾಹಿತ್ಯದ ಮೂಲಕ ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ. ಶತಮಾನಗಳಿಂದ ಬೇರೂರಿದ್ದ ಮೌಢ್ಯಗಳನ್ನು ತೊಡೆದುಹಾಕಿ ಮೊಟ್ಟಮೊದಲ ಬಾರಿಗೆ ಸಮಾನತೆಯ ತತ್ವವನ್ನು ಭಾರತೀಯ ಸಮಾಜಕ್ಕೆ ಕೊಡುಗೆ ನೀಡಿದ ಹೆಗ್ಗಳಿಕೆ ವಚನಕಾರರಿಗೆ ಸಲ್ಲುತ್ತದೆ. ವಚನಗಳ ಸರಳ ಭಾಷೆಯೇ ವೈಚಾರಿಕಾ ಕ್ರಾಂತಿಗೆ ಮುನ್ನಡಿ ಬರೆಯಿತು. ಅಲ್ಲಿಯವರೆಗೂ ಕನ್ನಡ ಸಾಹಿತ್ಯದಲ್ಲಿದ್ದ ಮಡಿವಂತಿಕೆ, ಸಂಪ್ರದಾಯ ಮುರಿದು ಹೊಸ ಮಾರ್ಗವನ್ನು ಬಸವಾದಿ ಶರಣರು ರೂಪಿಸಿದರು ಎಂದರು.

    ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ಭಾಷೆ ನಲಿದಾಡುವವರೆಗೂ ಯಾವುದೇ ಆತಂಕವಿಲ್ಲ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷಾ ಬಳಕೆಯ ಬೇರುಗಳು ಗಟ್ಟಿಯಾಗಿವೆ. ಹಾಗೆಯೇ ಕನ್ನಡ ಭಾಷೆಯು ಅನ್ನದ ಭಾಷೆಯಾಗಿ ರೂಪಿಸುವ ಹೊಣೆಗಾರಿಕೆ ವ್ಯವಸ್ಥೆಯ ಮೇಲಿದೆ. ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಹಾಸುಹೊಕ್ಕಾಗಬೇಕು ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಮುಖ್ಯಶಿಕ್ಷಕ ಬಿ.ಜಿ.ಶಾಂತಮ್ಮ, ಗ್ರಾಪಂ ಸದಸ್ಯ ಕೆ.ಬಿ.ರವಿಕುಮಾರ್, ತಾಲೂಕು ಸಮಾಜ ವಿಜ್ಞಾನ ವಿಷಯ ಕ್ಲಬ್ ಕಾರ್ಯದರ್ಶಿ ಶಿವಮೂರ್ತಿ ಮಾತನಾಡಿದರು. ಶಿಕ್ಷಕರಾದ ರಾಜಣ್ಣ, ಪ್ರಕಾಶ್, ಮಲ್ಲನಗೌಡರ್, ಬಿ.ಎಂ.ನಾಗರಾಜ್, ತಿಪ್ಪೇಸ್ವಾಮಿ, ಶ್ರುತಿ, ಅರ್ಚನ, ನಾಗರಾಜ್, ನಿವೃತ್ತ ಶಿಕ್ಷಕ ಎಸ್.ರೇವಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts