More

    ಎಳೆಯೋಣ ಬಾರ ತಿಪ್ಪೇಶನ ತೇರ…

    ನಾಯಕನಹಟ್ಟಿ: ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗುರುವಾರ (ಮಾ.12 ) ನಡೆಯಲಿದ್ದು ಭರದಿಂದ ಸಿದ್ಧತೆ ನಡೆದಿವೆ.

    ನಾಯಕನಹಟ್ಟಿಯಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಜಾತ್ರೆಗೆಂದೇ ದೂರದೂರುಗಳಿಂದ ಬೀಗರು , ಬಿಜ್ಜರು ಆಗಮಿಸಿದ್ದಾರೆ.

    ದೇವಸ್ಥಾನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ರಥ ಸಾಗುವ ಮಾರ್ಗದಲ್ಲಿ ತಳಿರು ತೋರಣ ಕಟ್ಟಲಾಗುತ್ತಿದೆ. ಮನೆಗಳಿಗೆ ಸುಣ್ಣ, ಬಣ್ಣ ಬಳಿಯಲಾಗಿದೆ.

    ಈ ಬಾರಿ ಬಿಸಿಲು ಹೆಚ್ಚಿರುವುದರಿಂದ ಕುಡಿವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ.ಬುಧವಾರದಿಂದಲೇ 55 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

    ಆರೋಗ್ಯ ಸೇವೆ: ಭಕ್ತರಿಗೆ ಆರೋಗ್ಯ ಸೇವೆ ಒದಗಿಸಲು 22 ವೈದ್ಯರು ಹಾಗೂ 140 ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ.

    ಹೊರ ಹಾಗೂ ಒಳಮಠ, ಈಶ್ವರ ದೇವಾಲಯ, ಅಂಬೇಡ್ಕರ್ ಭವನಗಳಲ್ಲಿ ನಾಲ್ಕು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಐದು ಆಂಬ್ಯುಲೆನ್ಸ್‌ಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿವೆ.

    ಸಮುದಾಯ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ಇಂಜಕ್ಷನ್, ಫ್ಲೂಯಿಡ್ಸ್‌ಗಳನ್ನು ದಾಸ್ತಾನಿರಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸಿ.ಎಲ್ ಪಾಲಾಕ್ಷ ತಿಳಿಸಿದ್ದಾರೆ.

    ಪೊಲೀಸ್ ಬಂದೋಬಸ್ತ್: ರಥಕ್ಕೆ ಮತ್ತು ಜಾತ್ರೆಗೆ ಡಿವೈಎಸ್‌ಪಿ ಮಟ್ಟದ ಭದ್ರತೆ ಒದಗಿಸಲಾಗಿದೆ. ರಥದ ಸುತ್ತಲೂ 30 ತುರ್ತು ಪ್ರತಿಕ್ರಿಯಾ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ಪಟ್ಟಣದ 7 ಕಡೆ ಚೆಕ್‌ಪೋಸ್ಟ್ ತೆರೆಯ ಲಾಗಿದೆ. ಇಡೀ ಜಾತ್ರೆಯನ್ನು 18 ಸೆಕ್ಟರ್‌ಗಳಾಗಿ ವಿಂಗಡಿಸಿ ಪ್ರತಿ ಸೆಕ್ಟರ್‌ಗೂ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ.

    10 ಸಂಚಾರ ಪೊಲೀಸ್ ದಳ, 22 ಸಹಾಯವಾಣಿ, 3 ಗಸ್ತು ಗೋಪುರ, 10 ಸ್ಕೈ ಸೆಂಟರ್, 3 ಕೆಎಸ್‌ಆರ್‌ಪಿ ತುಕಡಿ, 3 ಕ್ಯೂಆರ್‌ಟಿ ವಿಭಾಗದ ಪರಿಣತ ಸಿಬ್ಬಂದಿ, 7 ಡಿಎಆರ್ ತುಕಡಿ, 2 ಅಗ್ನಿ ಶಾಮಕದಳ, 2 ಆಂಬುಲೆನ್ಸ್, 8 ಜಾಗೃತಿ ವಾಹನ, 1 ವಜ್ರ ವಾಹನ ವ್ಯವಸ್ಥೆ ಮಾಡಲಾಗಿದ್ದು 1800ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.

    ಸಾರಿಗೆ ವ್ಯವಸ್ಥೆ: ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬರುವ ಭಕ್ತರಿಗಾಗಿ 150 ಸರ್ಕಾರಿ, 75 ಖಾಸಗಿ ಬಸ್‌ಗಳು ಸಂಚರಿಸಲಿವೆ. ಜಗಳೂರು ಕಡೆಯಿಂದ ಬರುವ ಭಕ್ತರಿಗೆ ಚಿಕ್ಕಕೆರೆ ಬಳಿ, ಚಳ್ಳಕೆರೆ ಕಡೆಯಿಂದ ಬರುವವರಿಗೆ ಚಿತ್ರದುರ್ಗ ಕ್ರಾಸ್ ಬಳಿ ಬಸ್ ನಿಲ್ದಾಣವಿರುತ್ತದೆ.

    ಗೂಗಲ್ ಮ್ಯಾಪ್ ಸಹಾಯ: ಕುಡಿವ ನೀರು, ಬಸ್ ನಿಲ್ದಾಣ, ಚೆಕ್ ಪೋಸ್ಟ್ ಮತ್ತಿತರ ಮಾಹಿತಿಯನ್ನು ಗೂಗಲ್ ಮ್ಯಾಪ್ ಸಹಾಯದಿಂದ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಪೊಲೀಸ್ ಇಲಾಖೆ ಹಲವೆಡೆ ಮಾಹಿತಿ ಫಲಕ ಸಹ ಅಡಳವಡಿಸಿದೆ.

    ಕಳೆದ ಜಾತ್ರೆಯಿಂದ ಈವರೆಗೆ ವಿವಾಹವಾದ ನವ ಜೋಡಿಗಳು ರಥೋತ್ಸವ ಸಂದರ್ಭದಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಹೊಸದಾಗಿ ಮದುವೆಯಾದ ದಂಪತಿ ತಿಪ್ಪೇಶನ ತೇರಿನ ಕಳಶ ನೋಡಿದರೆ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts