More

    ಸರ್ವರಿಗೂ ಒಳಿತು ತರುವ ದೇವಿ ಆರಾಧನೆ: ನವರಾತ್ರಿ ವೈಭವ 9

    | ಡಾ.ಗಣಪತಿ ಹೆಗಡೆ

    ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈಃ ಅಮರೈಃ ಅಪಿ|

    ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ||

    ‘ಸಕಲ ಇಷ್ಟಾರ್ಥ ಸಿದ್ಧಿಪ್ರಾಪ್ತಿಗಾಗಿ ಸಿದ್ಧರು, ಗಂಧರ್ವರು, ಯಕ್ಷರು, ಅಸುರರು, ದೇವತೆಗಳು ಹೀಗೆ ಸಕಲರಿಂದಲೂ ಸೇವೆಯನ್ನು ಪಡೆಯುತ್ತಿರುವ ಸಿದ್ಧಿದಾಯಿನಿಯಾದ ದೇವಿಯು ಸದಾ ಸಿದ್ಧಿಯನ್ನು ದಯಪಾಲಿಸುವವಳಾಗಲಿ.’

    ನವರಾತ್ರಿಯ ಒಂಬತ್ತನೆಯ ದಿನ ಅಂದರೆ ಶರದೃತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ನವಮಿಯಂದು ದೇವಿಯನ್ನು ‘ಸಿದ್ಧಿದಾತ್ರೀ’ ಎಂಬ ರೂಪದಲ್ಲಿ ಅರ್ಚಿಸಲಾಗುತ್ತದೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿಃ, ಪ್ರಾಕಾಮ್ಯಮ್ ಈಶಿತ್ವಮ್ ವಶಿತ್ವಮ್ ಎಂಬ ಅಷ್ಟಸಿದ್ಧಿಗಳಿವೆ. ಈ ಎಲ್ಲ ಸಿದ್ಧಿಗಳನ್ನು ದಯಪಾಲಿಸುವವಳು ಎಂಬ ಕಾರಣಕ್ಕೆ ಅವಳನ್ನು ‘ಸಿದ್ಧಿದಾತ್ರೀ’ ಎಂಬುದಾಗಿ ಕರೆಯುತ್ತಾರೆ. ಬ್ರಹ್ಮವೈವರ್ತ ಪುರಾಣದಲ್ಲಿ ಅಷ್ಟಾದಶ ಸಿದ್ಧಿಗಳಿವೆ ಎಂದು ಹೇಳಲಾಗಿದೆ. ಯೋಗಿಗಳು, ಸಾಧಕರಿಗೆ ವಿಶೇಷಸಿದ್ಧಿಯನ್ನು ಕರುಣಿಸುವವಳು ಸಿದ್ಧಿದಾತ್ರೀ. ದೇವೀಪುರಾಣದಲ್ಲಿ ಉಲ್ಲೇಖಿತವಾದ ವಿಚಾರವನ್ನು ಗಮನಿಸಿದರೆ ಸಾಕ್ಷಾತ್ ಪರಶಿವನಿಗೂ ಸಿದ್ಧಿ ದೊರೆತಿರುವುದು ಸಿದ್ಧಿದಾತ್ರಿಯಿಂದಲೇ. ಸಿಂಹವಾಹಿನಿಯಾದ ಸಿದ್ಧಿದಾತ್ರಿಯು ಕಮಲಪುಷ್ಪದ ಮೇಲೆ ಕುಳಿತಿದ್ದಾಳೆ. ಇವಳಿಗೆ ನಾಲ್ಕು ಭುಜಗಳಿವೆ. ಮೇಲಿನ ಬಲ ಹಸ್ತದಲ್ಲಿ ಕಮಲ, ಕೆಳಗಿನ ಬಲ ಹಸ್ತದಲ್ಲಿ ಗದೆ, ಮೇಲಿನ ಎಡ ಹಸ್ತದಲ್ಲಿ ಶಂಖ, ಕೆಳಗಿನ ಎಡ ಹಸ್ತದಲ್ಲಿ ಕಮಲವನ್ನು ಹಿಡಿದು ಶೋಭಿಸುತ್ತಿದ್ದಾಳೆ. ವಿಶೇಷವಾಗಿ ನವಮಿಯ ದಿನ ದೇವಿಯನ್ನು ಆರಾಧಿಸುವ ಭಕ್ತನು ಸಂಸಾರದ ಬಂಧನಗಳಿಂದ ಮುಕ್ತನಾಗಿ ನಿರ್ಲಿಪ್ತ ಭಾವವನ್ನು ಪಡೆದು ಜನ್ಮಸಾರ್ಥಕ್ಯ ಹೊಂದುತ್ತಾನೆ ಹಾಗೂ ಪರಮಶ್ರೇಷ್ಠವಾದ ಮೋಕ್ಷಫಲವನ್ನು ಪಡೆಯುತ್ತಾನೆ.

    ಮಾರ್ಕಂಡೇಯ ಪುರಾಣದಲ್ಲಿರುವ ಸಪ್ತಶತಿಯಲ್ಲಿ ಹೇಳಿರುವಂತೆ ಒಂದಾನೊಂದು ಕಾಲದಲ್ಲಿ ರಾಕ್ಷಸರು ದೇವತೆಗಳನ್ನು ಅತ್ಯಂತ ಕ್ರೂರವಾಗಿ ಹಿಂಸಿಸುತ್ತಿದ್ದರು. ಅನನ್ಯಗತಿಕರಾದ ದೇವತೆಗಳು ಇದರಿಂದ ಪಾರಾಗಲು ಪರಾಶಕ್ತಿಯ ಅನುಗ್ರಹಪ್ರಾಪ್ತಿಗಾಗಿ ಅವಳ ಮೊರೆ ಹೋದರು. ಆಗ ಶಕ್ತಿಸ್ವರೂಪಿಣಿಯಾದ ಮಾತೆಯು ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿಯರ ರೂಪದಲ್ಲಿ ಅವತರಿಸಿ ದಾನವರನ್ನು ಸಂಹರಿಸಿ ದೇವತೆಗಳನ್ನು ರಕ್ಷಿಸಿದಳು. ಕೊನೆಗೆ ಅವಳು ‘ಯಾವುದೇ ಸಂಕಟ ಬಂದಾಗ ನನ್ನನ್ನು ಪೂಜಿಸಿ ಧ್ಯಾನಿಸಿದರೆ ಅಂತಹವರನ್ನು ಸಲಹುತ್ತೇನೆ’ ಎಂಬುದಾಗಿ ಅಭಯ ನೀಡುತ್ತಾಳೆ. ಹೀಗೆ ಕಥಾರೂಪದಿಂದಾರಂಭವಾಗುವ ಸಪ್ತಶತಿಯಲ್ಲಿ ಬಹುಮುಖ್ಯವಾಗಿ ವಿವರಿಸಲ್ಪಡುವ ವಿಚಾರಗಳೆಂದರೆ ಪ್ರತಿಯೊಬ್ಬರಿಗೂ ಮೋಕ್ಷ ಬಹಳ ಮುಖ್ಯ. ಅಂತಹ ಮೋಕ್ಷಮಾರ್ಗ ಸುಲಭವಾಗಬೇಕಾದರೆ ಅದಕ್ಕೆ ಅಡಚಣೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಷಡ್ವೈರಿಗಳು ಹಾಗೂ ಅಹಂಕಾರ-ಅಜ್ಞಾನ ಇವುಗಳನ್ನು ನಿವಾರಿಸಿಕೊಳ್ಳಬೇಕು. ಅವುಗಳ ನಿವಾರಣೆಯ ಉಪಾಯವೇನು ಅಂದರೆ ದಿವ್ಯಮಾತೆಯಾದ ಶಕ್ತಿಯ ಅನುಗ್ರಹವಿರಬೇಕು. ಅವಳಲ್ಲಿ ನಾವು ಏಕಾಗ್ರಚಿತ್ತದಿಂದ ನಿವಾರಣೆಯ ಶಕ್ತಿಯನ್ನು ದಯಪಾಲಿಸೆಂದು ಬೇಡಿಕೊಂಡಾಗ ಸಿದ್ಧಿದಾತ್ರಿಯು ಸಿದ್ಧಿಯನ್ನು ಕರುಣಿಸುತ್ತಾಳೆ.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts