More

    ನವಭಾರತ ವೃತ್ತಕ್ಕೆ ನವ ಸ್ವರೂಪ, ತಲೆಯೆತ್ತಲಿದೆ ಗೋವಿಂದ ಪೈ ಕಂಚಿನ ಪುತ್ಥಳಿ

    ಮಂಗಳೂರು: ಅವೈಜ್ಞಾನಿಕವಾಗಿದೆ ಎಂಬ ಹಿನ್ನೆಲೆಯಲ್ಲಿ ಕೊಡಿಯಾಲ್‌ಬೈಲ್ ನವಭಾರತ ವೃತ್ತ(ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ)ವನ್ನು ತೆರವುಗೊಳಿಸಲಾಗಿದ್ದು, ಮುಂದೆ ಇಲ್ಲಿ ಸುವ್ಯವಸ್ಥಿತವಾಗಿ ನೂತನ ವೃತ್ತ ನಿರ್ಮಿಸಲು ಉದ್ದೇಶಿಸಲಾಗಿದೆ.
    ಈ ಭಾಗದಲ್ಲಿ ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಐದು ಪ್ರಮುಖ ರಸ್ತೆಗಳು ಸೇರುವ ಜಂಕ್ಷನ್ ಆಗಿರುವ ಇಲ್ಲಿ ಸಂಚಾರಕ್ಕೆ ಪೂರಕವಾಗುವಂತಹ ವೃತ್ತ ನಿರ್ಮಿಸಲು ಮಂಗಳೂರು ಮಹಾನಗರಪಾಲಿಕೆ ಮುಂದಾಗಿದೆ.

    ಬಹಳ ಹಿಂದೆಯೇ ಮಂಗಳೂರಿನಲ್ಲಿದ್ದ ಪತ್ರಿಕೆ ‘ನವಭಾರತ’ದ ಕಚೇರಿ ಈಗ ಓಶಿಯನ್‌ಪರ್ಲ್ ಹೋಟೆಲ್ ಸಮೀಪವೇ ಎಂದರೆ ಈಗಿನ ವೃತ್ತಕ್ಕೆ ಹತ್ತಿರವಿತ್ತು. ಅದೇ ಕಾರಣದಿಂದ ನವಭಾರತ ವೃತ್ತ ಎಂದೇ ಈ ಜಾಗ ಪ್ರಸಿದ್ಧ. ಅನೇಕ ದಶಕಗಳಿಂದ ಇದೇ ಗಾತ್ರದಲ್ಲಿದ್ದು ಬಳಿಕ ಅದನ್ನು ಮಂಗಳೂರು ಮಹಾನಗರಪಾಲಿಕೆಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ಎಂದು ಹೆಸರಿಸಲಾಯಿತು.
    ಆರಂಭದಲ್ಲಿ ಇಂಡಿಯನ್ ಆಯಿಲ್ ಕಂಪನಿ ಇದೇ ಭಾಗದಲ್ಲಿ ಕಚೇರಿ ಹೊಂದಿದ್ದು, ನಿರ್ವಹಣೆ ಮಾಡಿಕೊಂಡು ಬಂದಿತ್ತು. ಅವರ ಕಚೇರಿ ಇಲ್ಲಿಂದ ಸ್ಥಳಾಂತರಗೊಂಡ ಬಳಿಕ ವೃತ್ತದ ನಿರ್ವಹಣೆ ಸರಿಯಾಗಿ ಆಗದೆ ಗಿಡಗಂಟಿ ಬೆಳೆದುಕೊಂಡಿತ್ತು.
    ನವಭಾರತ ವೃತ್ತವೆಂದೇ ಈ ಜಾಗ ಖ್ಯಾತಿ ಪಡೆದಿದೆ. ಹಿಂದೆ ಈ ಪರಿಸರದಲ್ಲೇ ಮಂಗಳೂರಿನ ಬಸ್ ನಿಲ್ದಾಣವೂ ಇತ್ತು. ಆ ಬಳಿಕ ಅದು ಹಂಪನಕಟ್ಟೆಗೆ ಸ್ಥಳಾಂತರಗೊಂಡಿತು ಎಂದು ನೆನಪಿಸಿಕೊಳ್ಳುತ್ತಾರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ.

    ಈ ಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಕಾರಣ ಈಗ ವೃತ್ತವನ್ನು ತೆರವುಗೊಳಿಸಲಾಗಿದೆ. ಈ ವೃತ್ತ ಇಂಡಿಯನ್ ರೋಡ್ ಕಾಂಗ್ರೆಸ್‌ನ ಗುಣಮಟ್ಟ ಅರ್ಹತೆಗೆ ಪೂರಕವಾಗಿಲ್ಲದೆ ವಾಹನ ಸಂಚಾರಕ್ಕೆ ಅನನುಕೂಲವಾಗುತ್ತದೆ ಎಂದು ಸ್ಮಾರ್ಟ್‌ಸಿಟಿ ತಜ್ಞರು ತಿಳಿಸಿದ್ದರು.

    ನವೀನ ವಿನ್ಯಾಸದಲ್ಲಿ ಹೊಸ ವೃತ್ತ
    ಈ ವೃತ್ತವನ್ನು ಆದಷ್ಟು ಬೇಗ ನವೀನ ಮಾದರಿಯಲ್ಲಿ ಪುನರ್‌ನಿರ್ಮಾಣಗೊಳಿಸಲಾಗುವುದು. ಅದರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕಂಚಿನ ಪುತ್ಥಳಿಯನ್ನೂ ಇರಿಸುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸೇವಾಂಜಲಿ ಟ್ರಸ್ಟ್‌ನ ಹನುಮಂತ ಕಾಮತ್ ತಿಳಿಸಿದ್ದಾರೆ. ಈಗಿರುವ ಜಂಕ್ಷನ್‌ನಲ್ಲಿ ವೃತ್ತ ನಿರ್ಮಾಣಕ್ಕೆ ಸರಿಯಾದ ಜಾಗವನ್ನು ಮನಪಾ ವತಿಯಿಂದಲೇ ಮಾರ್ಕಿಂಗ್ ಮಾಡಿ ಕೊಟ್ಟ ಬಳಿಕ ಹೊಸ ವೃತ್ತ ನಿರ್ಮಿಸಲು ಉದ್ದೇಶಿಸಲಾಗಿದೆ.

    ಇಲ್ಲೂ ಸಿಕ್ಕಿತು ಬಾವಿ!
    ಹಳೇ ಮಂಗಳೂರಿನ ಗುರುತಾಗಿ ಇತ್ತೀಚೆಗಷ್ಟೇ ಹಂಪನಕಟ್ಟೆ ಸರ್ಕಲ್ ನವೀಕರಣ ವೇಳೆ ಪುರಾತನ ಬಾವಿಯೊಂದು ಸಿಕ್ಕಿತ್ತು. ಈಗ ನವಭಾರತ ವೃತ್ತದ ಸರದಿ. ಇಲ್ಲಿನ ಹಳೇ ವೃತ್ತವನ್ನು ತೆರವು ಮಾಡುವಾಗ ಸುಂದರವಾದ ಕೆಂಪುಕಲ್ಲಿನಲ್ಲಿ ಕಟ್ಟಲಾದ ಬಾವಿ ಕಂಡುಬಂದಿದೆ. ಇದರಲ್ಲಿ ನೀರೂ ಇದೆ. ಹಿಂದೆ ವೃತ್ತವನ್ನು ಬಾವಿಯ ಮೇಲೆ ನಿರ್ಮಾಣ ಮಾಡಲಾಗಿದ್ದು, ಬಾವಿ ಇದ್ದ ಬಗ್ಗೆ ಕುರುಹು ಇರಲಿಲ್ಲ.

    ಮಂಗಳೂರಿನ ಐತಿಹಾಸಿಕ ಹೆಸರಾದ ನವಭಾರತ ವೃತ್ತವನ್ನು ಬಿಡಬಾರದು. ಆ ಹೆಸರಿನೊಂದಿಗೇ ಗೋವಿಂದ ಪೈ ಅವರ ಪ್ರತಿಮೆ ಇರಿಸುವುದು ಸೂಕ್ತ.
    ಪ್ರದೀಪ್ ಕುಮಾರ್ ಕಲ್ಕೂರ, ದ.ಕ ಜಿಲ್ಲಾಧ್ಯಕ್ಷ, ಕಸಾಪ

    ಕರಾವಳಿಯ ಸಂಸ್ಕೃತಿಯ ಸ್ಪರ್ಶ ಇರುವ ನವೀನ ರೀತಿಯ ವೃತ್ತವನ್ನು ನಮ್ಮ ಟ್ರಸ್ಟ್‌ನಿಂದ ನಿರ್ಮಿಸಲಾಗುವುದು. ಗೋವಿಂದ ಪೈ ಅವರ ಕಂಚಿನ ಪುತ್ಥಳಿಯನ್ನೂ ನಿರ್ಮಿಸಿ ಮುಂದೆ ನಿರ್ವಹಣೆ ಮಾಡಲಾಗುವುದು.
    ಹನುಮಂತ ಕಾಮತ್, ಸೇವಾಂಜಲಿ ಟ್ರಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts