More

    ಸ್ವಚ್ಛತಾ ಕರ್ಮಿಗಳ ಬದುಕಿಗೆ ಭರವಸೆ

    ಪಿ.ಬಿ.ಹರೀಶ್ ರೈ ಮಂಗಳೂರು

    ಸ್ವಂತದ ಸೂರಿಲ್ಲ, ದಿನಪೂರ್ತಿ ದುಡಿದರೂ ಅದಕ್ಕೆ ಸಮನಾದ ಆದಾಯವಿಲ್ಲ, ರೇಶನ್ ಕಾರ್ಡ್, ಆಧಾರ್ ಕಾರ್ಡ್ ಯಾವುದೂ ಇಲ್ಲ.. ಇದು ಬೀದಿ ಸುತ್ತಿ ಚಿಂದಿ ಆಯುವವರ ಸ್ಥಿತಿ. ಎಲ್ಲ ಸೌಲಭ್ಯಗಳಿಂದ ವಂಚಿತರಾದರೂ ಇವರು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ಪ್ರಥಮ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ಚಿಂದಿ ಆಯುವವರಿಗೆ ಗುರುತಿನ ಚೀಟಿ ನೀಡಿದೆ. ಇದರಿಂದ ಅವರ ಬದುಕಿನಲ್ಲೂ ಭರವಸೆಯ ಕಿರು ಬೆಳಕು ಮೂಡಿದೆ.
    ನಗರಗಳಲ್ಲಿ ಚಿಂದಿ ಆಯುವ ಮೂಲಕ ಸ್ವಚ್ಛತೆಗೆ ಪರೋಕ್ಷ ಸಹಕಾರ ನೀಡುತ್ತಿರುವವರನ್ನು ಗುರುತಿಸುವಂತೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಯೋಜನೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚಿಸಿತ್ತು. 2015-16ರಲ್ಲಿ ಮನಪಾ 40 ಮಂದಿಯನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಿತ್ತು. ಬಳಿಕ ಅವರನ್ನು ತ್ಯಾಜ್ಯ ಸಂಗ್ರಹದ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಸಂಸ್ಥೆಗೆ ಸೇರ್ಪಡೆ ಮಾಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗಿತ್ತು.

    ಎನ್‌ಜಿಒ ಸರ್ವೇ: ನಗರದಲ್ಲಿ ಚಿಂದಿ ಆಯುವ ಮೂಲಕ ಸ್ವಚ್ಛತೆಗೆ ಸಹಕರಿಸುವವರನ್ನು ಗುರುತಿಸಲು ಮನಪಾ ಸರ್ಕಾರೇತರ ಸಂಸ್ಥೆಗಳಿಗೆ ಜವಾಬ್ದಾರಿ ನೀಡಿತ್ತು. 2019-20ರಲ್ಲಿ ಹಸಿರುದಳ, ಎಪಿಡಿ ಫೌಂಡೇಶನ್ ಸಂಸ್ಥೆಗಳು ಸರ್ವೇ ನಡೆಸಿ 156 ಮಂದಿಯನ್ನು ಗುರುತಿಸಿವೆ. ಈಗ ಪಾಲಿಕೆ ವತಿಯಿಂದ ಅವರಿಗೆ ಗುರುತಿನ ಚೀಟಿ ನೀಡುವ ಕಾರ್ಯ ನಡೆದಿದೆ. ಗುರುತಿನ ಚೀಟಿಯಲ್ಲಿ ಚಿಂದಿ ಆಯುವವರ ಹೆಸರು, ವಿಳಾಸ, ಭಾವಚಿತ್ರ, ಯಾವ ವಾರ್ಡ್‌ನ ಯಾವ ರಸ್ತೆಯಲ್ಲಿ ಕಸ ಸಂಗ್ರಹಿಸಬೇಕು ಎನ್ನುವ ಮಾಹಿತಿ ಮುದ್ರಿಸಲಾಗಿದೆ.

    ಸೌಲಭ್ಯ ವಂಚಿತರು: ಉತ್ತರ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಿಂದ ವಲಸೆ ಬಂದ ಕೆಲವರು ಚಿಂದಿ ಆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಜಾನೆಯಿಂದಲೇ ಈ ಕೆಲಸ ಮಾಡುತ್ತಾರೆ. 40ಕ್ಕೂ ಅಧಿಕ ಮಂದಿ ಪಚ್ಚನಾಡಿ ಪರಿಸರದಲ್ಲೇ ವಾಸವಾಗಿದ್ದಾರೆ. ಕಡು ಬಡತನ ಹಾಗೂ ಅಪರಿಚಿತರಾಗಿರುವ ಕಾರಣ ಬಾಡಿಗೆಗೆ ಕೂಡ ಅವರಿಗೆ ಮನೆ ನೀಡುವವರಿಲ್ಲ. ಸಂಗ್ರಹವಾದ ಪ್ಲಾಸ್ಟಿಕ್ ಹಾಗೂ ಕಬ್ಬಿಣದ ವಸ್ತುಗಳನ್ನು ಗುಜರಿ ಅಂಗಡಿಗೆ ಮಾರಿ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಾರೆ.

    ಹಸಿರು ದಳ ಸ್ಪಂದನೆ: ಬೆಂಗಳೂರಿನಲ್ಲಿ 2010ರಲ್ಲಿ ಆರಂಭವಾದ ಹಸಿರು ದಳ ಹೆಸರಿನ ಸ್ವಯಂಸೇವಾ ಸಂಸ್ಥೆ ಚಿಂದಿ ಆಯುವವರ ಕ್ಷೇಮಾಭಿವೃದ್ಧಿಗಾಗಿ ದುಡಿಯುತ್ತಿದೆ. ಮೈಸೂರು, ಮಂಗಳೂರು, ತುಮಕೂರು ಸಹಿತ ವಿವಿಧ ನಗರಗಳಲ್ಲಿ ಈ ಸಂಸ್ಥೆ ಸೇವಾ ಕಾರ್ಯ ನಡೆಸುತ್ತಿದೆ. ಹಸಿರುದಳ ಸಂಸ್ಥೆ ವತಿಯಿಂದ ಚಿಂದಿ ಅಯುವವರನ್ನು ಗುರುತಿಸಿ ಅವರಿಗೆ ನೈರ್ಮಲ್ಯದ ಬಗ್ಗೆ ತಿಳಿಸಲಾಗುತ್ತಿದೆ. ವೈದ್ಯಕೀಯ ಶಿಬಿರಗಳನ್ನು ನಡೆಸಲಾಗಿದೆ. ಅವರ ಬಳಿ ಆಧಾರ್ ಕಾರ್ಡ್ ಸಹಿತ ಯಾವುದೇ ದಾಖಲೆ ಇಲ್ಲದ ಕಾರಣ ಬ್ಯಾಂಕ್ ಖಾತೆ ಕೂಡ ತೆರೆಯಲು ಅವರಿಗೆ ಸಾಧ್ಯವಾಗಿಲ್ಲ. ಈಗ ಪಾಲಿಕೆ ಅವರಿಗೆ ಗುರುತಿನ ಚೀಟಿ ನೀಡಿರುವ ಕಾರಣ ಕೆಲವು ಸೌಲಭ್ಯ ಒದಗಿಸಲು ಸಹಕಾರಿಯಾಗಬಹುದು ಎನ್ನುತ್ತಾರೆ ಹಸಿರು ದಳದ ಮಂಗಳೂರಿನ ಸಂಯೋಜಕಿ ವಾಣಿಶ್ರೀ.

    ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಚಿಂದಿ ಆಯುವವರಿಗೂ ಗುರುತಿನ ಚೀಟಿ ನೀಡಲಾಗುತ್ತಿದೆ. ಗಾಂಧಿ ಜಯಂತಿಯಂದು ಸಾಂಕೇತಿಕವಾಗಿ ಕೆಲವರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಎಲ್ಲ 156 ಮಂದಿಗೆ ನೀಡಲಾಗುವುದು. ಪಾಲಿಕೆ ವತಿಯಿಂದ ಮಾಸ್ಕ್, ಗ್ಲೌಸ್ ನೀಡಲಾಗಿದ್ದು, ಆರೋಗ್ಯ ತಪಾಸಣೆ ಮಾಡಲಾಗಿದೆ. ಸರ್ಕಾರದ ಯೋಜನೆಗಳ ಮೂಲಕ ಅವರಿಗೆ ಯಾವ ಸೌಲಭ್ಯ ನೀಡಲು ಸಾಧ್ಯ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು.
    – ದಿವಾಕರ ಪಾಂಡೇಶ್ವರ, ಮೇಯರ್, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts