More

    40 ಕೋಟಿ ಜನರಿಗೆ ಕೌಶಲ ತರಬೇತಿ ಗುರಿ

    ಎಚ್.ಡಿ.ಕೋಟೆ: ಜಪಾನ್‌ನಲ್ಲಿ ಶೇ.90 ರಷ್ಟು ಕೌಶಲಾಭಿವೃದ್ಧಿ ಹೊಂದಿರುವವರು ಇದ್ದಾರೆ. ಆದರೆ ಭಾರತದಲ್ಲಿ ಶೇ. 90ರಷ್ಟು ಜನ ಕೌಶಲಾಭಿವೃದ್ಧಿಯಿಂದ ವಂಚಿತರಾಗಿದ್ದಾರೆ ಎಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕ ರಮೇಶ ಬೇಸರ ವ್ಯಕ್ತಪಡಿಸಿದರು.

    ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ಶುಕ್ರವಾರ ಮೈಸೂರಿನ ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆ ಮತ್ತು ಭಾರತೀಯ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಯೋಜನೆ ವತಿಯಿಂದ ವಿವೇಕಾನಂದರ 161 ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಮತ್ತು ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ದೇಶದಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸುಮಾರು 40 ಕೋಟಿ ಜನರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಗುರಿ ಹೊಂದಿದೆ. ಈ ಸಂಬಂಧ ದೇಶದಲ್ಲಿ 304 ಜನಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲೂ 12 ಸಂಸ್ಥೆಗಳಿದ್ದು, ಮೈಸೂರು ಮತ್ತು ಬೆಂಗಳೂರಿನ ಸಂಸ್ಥೆಗಳನ್ನು ಜೆ.ಎಸ್.ಎಸ್ ವಿದ್ಯಾಪೀಠ ವಹಿಸಿಕೊಂಡಿದೆ ಎಂದು ತಿಳಿಸಿದರು.

    ದೇಶವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. ಹೆಚ್ಚಿನ ಜನಸಂಖ್ಯೆಯುಳ್ಳ ಭಾರತ ಆರ್ಥಿಕವಾಗಿ ಸದೃಢವಾಗಲು ಕೌಶಲಾಭಿವೃದ್ಧಿ ತರಬೇತಿಗಳು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ಈಗಾಗಲೇ ಜೆಎಸ್‌ಎಸ್ ವತಿಯಿಂದ 57 ಸಾವಿರ ಜನರಿಗೆ ವಿವಿಧ ತರಬೇತಿ ನೀಡಲಾಗಿದೆ. ವರ್ಷಕ್ಕೆ 90 ಬ್ಯಾಚ್‌ನಂತೆ 1800 ಜನರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರೈಸಿದವರಿಗೆ ಮುದ್ರಾ ಯೋಜನೆಯಡಿ ಬ್ಯಾಂಕ್‌ಗಳಲ್ಲಿ ಹಲವು ಸಾಲ ಸೌಲಭ್ಯಗಳು ದೊರೆಯುತ್ತವೆ ಎಂದರು. ಜನಶಿಕ್ಷಣ ಯೋಜನೆಯ ಸೌಭಾಗ್ಯ, ಸಹಾಯಕ ಕಾರ್ಯಕ್ರಮ ಅಧಿಕಾರಿ ಸುರೇಶ್, ತರಬೇತುಗಾರ್ತಿ ಲಕ್ಷ್ಮೀ, ಡೇರಿ ಅಧ್ಯಕ್ಷೆ ಅಮೃತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ರಮೇಶ್, ಮಾಜಿ ಸದಸ್ಯೆ ಯಶೋಧಮ್ಮ , ಸದಸ್ಯ ಎಂ.ಎಸ್. ರವಿ, ಗಂಗಾಧರಗೌಡ, ನಾಗೇಂದ್ರ, ಎಂ.ಎಸ್. ನಾಗರಾಜು, ಜವರಯ್ಯ, ಸಣ್ಣಗಂಡಯ್ಯ, ಶಿವಪ್ಪ, ಎಸ್‌ಡಿಎಂಸಿ ಅಧ್ಯಕ್ಷ ರವಿ, ಮುಖ್ಯ ಶಿಕ್ಷಕ ಚಂದ್ರು, ಶೀಲಾ, ಪ್ರೇಮ, ಸಣ್ಣಕೂಸಮ್ಮ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts