More

    ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು: ನ್ಯಾ.ಮುಸ್ತಫಾ ಹುಸೇನ್ ಹೇಳಿಕೆ

    ಶಿವಮೊಗ್ಗ: ನಮ್ಮನ್ನಾಳಲು ಸಮರ್ಥ ನಾಯಕನನ್ನು ನಾವೇ ಆರಿಸುವ ಮತದಾನದ ಹಕ್ಕು ಅತ್ಯಂತ ಮಹತ್ವದ್ದು. ಆದರೆ ಈ ಸಾಂವಿಧಾನಿಕ ಹಕ್ಕಿನ ಮಹತ್ವದ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    18 ವರ್ಷ ತುಂಬಿದ ಯುವಜನತೆಗೆ ಸಂವಿಧಾನ ಮತದಾನದ ಹಕ್ಕು ನೀಡಿದೆ. ಈ ಹಕ್ಕು ಅತ್ಯಂತ ಜವಾಬ್ದಾರಿಯುತ ಮತ್ತು ಮಹತ್ವವುಳ್ಳದ್ದು. ಆದರೆ ಈ ಸಾಂವಿಧಾನಿಕ ಹಕ್ಕಿನ ಮಹತ್ವದ ಕುರಿತು ಇನ್ನೂ ಜನರಿಗೆ ಅರಿವಿಲ್ಲ ಎಂಬುದು ಇತ್ತೀಚಿನ ಚುನಾವಣೆಯಲ್ಲಿ ಆಗುತ್ತಿರುವ ಮತದಾನದ ಪ್ರಮಾಣದಿಂದ ವ್ಯಕ್ತವಾಗುತ್ತಿದೆ ಎಂದರು.
    ಪ್ರತಿ ಚುನಾವಣೆಯಲ್ಲೂ ಕಡಿಮೆ ಮತದಾನ ಆಗುತ್ತಿದೆ. ನಮ್ಮ ಹಕ್ಕನ್ನು ಚಲಾಯಿಸಲು ನಾವು ನಿರ್ಲಕ್ಷ್ಯ ತೋರುತ್ತಿದ್ದೇವೆ. ಹಾಗಾಗಿ ನಾವೆಲ್ಲ ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. ಮತದಾನದ ಹಕ್ಕನ್ನು ನಾವು ಜಾಗರೂಕರಾಗಿ ಚಲಾಯಿಸಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯವಾಗುತ್ತದೆ ಎಂದರು.
    ಡಿಸಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಎಲ್ಲ ಪ್ರೌಢಶಾಲೆ, ಕಾಲೇಜುಗಳಲ್ಲಿ ಮತದಾನ ಮತ್ತು ಚುನಾವಣೆ ಬಗ್ಗೆ ಅರಿವು ಮೂಡಿಸಲು ಎಲೆಕ್ಟರಲ್ ಲಿಟ್ರಸಿ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಕ್ಯಾಂಪಸ್ ಅಂಬಾಸಡರ್‌ಗಳನ್ನು ನೇಮಿಸಲಾಗಿದೆ. ಚುನಾವಣಾ ಅವ್ಯವಹಾರಗಳ ತಡೆಗಾಗಿ ಚುನಾವಣಾ ಆಯೋಗ ನವೀನ ತಂತ್ರಜ್ಞಾನ ಅಳವಡಿಸಿಕೊಂಡಿದೆ ಎಂದು ಡಿಸಿ ಡಾ. ಆರ್.ಸೆಲ್ವಮಣಿ ಹೇಳಿದರು.
    ಜಿಪಂ ಸಿಇಒ ಎಂ.ಎಲ್.ವೈಶಾಲಿ ಮಾತನಾಡಿ, ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನೇ ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸುವ ಮೂಲಕ ಮತದಾನ ಕುರಿತು ಜಾಗೃತಿ ಮತ್ತು ಅದರ ಮಹತ್ವ ತಿಳಿಸಲಾಗುತ್ತಿದೆ. ಕೇವಲ ದಾಖಲೆಗಾಗಿ ಮತದಾರರ ಗುರುತಿನ ಚೀಟಿ ಪಡೆಯಬಾರದು. ಮತದಾನದ ಹಕ್ಕು ಸದ್ಬಳಕೆ ಆಗಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾದ್ಯಂತ ಶಾಲೆಗಳಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅತ್ಯುತ್ತಮ ಸೇವೆ ಸಲ್ಲಿಸಿದ ಮತಗಟ್ಟೆ ಅಧಿಕಾರಿ ಪಾಲಾಕ್ಷ ಅವರನ್ನು ಗೌರವಿಸಲಾಯಿತು.
    ಎಡಿಸಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ ಮತದಾನ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಚುನಾವಣೆ ಶಾಖೆಯ ತಹಸೀಲ್ದಾರ್ ಮಂಜುಳಾ ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts