More

    ಇಂದು ಧ್ಯಾನ್‌ಚಂದ್ 115ನೇ ಜನ್ಮದಿನ, ರಾಷ್ಟ್ರೀಯ ಕ್ರೀಡಾ ದಿನಾಚರಣೆ

    ನವದೆಹಲಿ: ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಸ್ಮರಣಾರ್ಥವಾಗಿ ಅವರ ಜನ್ಮದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಿಸಲಾಗುತ್ತದೆ. ಶನಿವಾರ ಅವರ 115ನೇ ಜನ್ಮದಿನವಾಗಿದೆ. ಕರೊನಾ ಹಾವಳಿಯ ನಡುವೆ ಕ್ರೀಡಾ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿರುವ ಈ ಸಮಯದಲ್ಲಿ ಕ್ರೀಡಾ ದಿನಾಚರಣೆಯ ಸಂಭ್ರಮ, ಕ್ರೀಡಾ ವಲಯಕ್ಕೆ ಹೊಸ ಚೈತನ್ಯವನ್ನು ತುಂಬುವ ನಿರೀಕ್ಷೆ ಇದೆ.

    ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ 1905ರ ಆಗಸ್ಟ್ 29ರಂದು ಜನಿಸಿದ ಧ್ಯಾನ್‌ಚಂದ್, ಹಾಕಿ ಸ್ಟಿಕ್‌ನ ಅಪೂರ್ವ ಕೌಶಲ್ಯದಿಂದ ಜಗತ್ತನ್ನೇ ಮಂತ್ರಮುಗ್ಧಗೊಳಿಸಿದ್ದರು. 14ನೇ ವಯಸ್ಸಿನಲ್ಲೇ ಹಾಕಿ ಸ್ಟಿಕ್ ಹಿಡಿದ ಅವರು 1926ರಲ್ಲಿ ಅಂತಾರಾಷ್ಟ್ರೀಯ ಹಾಕಿ ಪ್ರವೇಶಿಸಿದರು. ನಂತರ ತಂಡದ ನಾಯಕರೂ ಆದ ಅವರು 3 ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತರು.

    42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದ ಅವರು, 1948ರಲ್ಲಿ ನಿವೃತ್ತರಾದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು. 1979ರ ಡಿ. 3ರಂದು ಪಿತ್ತಜನಕಾಂಗದ ಕ್ಯಾನ್ಸರ್‌ನಿಂದ ಅವರು ಮೃತಪಟ್ಟರು. ಅವರಿಗೆ ಭಾರತರತ್ನ ಗೌರವ ನೀಡದ ಬೇಸರ ಈಗಲೂ ಕ್ರೀಡಾಪ್ರೇಮಿಗಳನ್ನು ಕಾಡುತ್ತಿದೆ.

    ಇದನ್ನೂ ಓದಿ: ರೊನಾಲ್ಡೊ-ಮೆಸ್ಸಿ ಒಂದೇ ತಂಡದಲ್ಲಿ ಆಡ್ತಾರಾ? ಜುವೆಂಟಸ್ ಕ್ಲಬ್​ ಹೇಳೋದೇನು?

    ಮೇಜರ್ ಧ್ಯಾನ್‌ಚಂದ್ ಸಾಧನೆ ಹಾದಿ:
    *16ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರ್ಪಡೆ.
    *ತಂದೆ ಸಮೇಶ್ವರ್ ದತ್ ಸಿಂಗ್ ಕೂಡ ಸೈನಿಕರು.
    *3 ಒಲಿಂಪಿಕ್ಸ್ ಸ್ವರ್ಣ ಪದಕ (1928, 1932, 1936).
    *ಅಂತಾರಾಷ್ಟ್ರೀಯ ಹಾಕಿಯಲ್ಲಿ 400ಕ್ಕೂ ಹೆಚ್ಚು ಗೋಲು.
    *ವಿಶ್ವ ಕಂಡ ಸರ್ವಶ್ರೇಷ್ಠ ಹಾಕಿ ಆಟಗಾರ.
    *‘ಹಾಕಿ ಮಾಂತ್ರಿಕ’ ಎಂಬುದು ಅವರ ಬಿರುದು.
    *1926ರಿಂದ 1948ರ ನಡುವಿನ ಹಾಕಿ ವೃತ್ತಿಜೀವನದಲ್ಲಿ ಸಾವಿರಕ್ಕೂ ಅಧಿಕ ಗೋಲು!
    *ರಾತ್ರಿ ಚಂದ್ರನ ಬೆಳಕಿನಲ್ಲಿ ಅಭ್ಯಾಸ ನಡೆಸುತ್ತಿದ್ದರಿಂದ ಗೆಳೆಯರು ಅವರನ್ನು ‘ಚಂದ್’ ಎಂದು ಕರೆಯುತ್ತಿದ್ದರು.
    *1936ರ ಬರ್ಲಿನ್ ಒಲಿಂಪಿಕ್ಸ್ ಫೈನಲ್‌ನಲ್ಲಿ ಧ್ಯಾನ್‌ಚಂದ್ ಆಟ ಕಂಡು ಬೆರಗಾಗಿದ್ದ ಅಡಾಲ್ಫ್ ಹಿಟ್ಲರ್ ಜರ್ಮನಿ ಪೌರತ್ವದ ಆಹ್ವಾನ ನೀಡಿದ್ದರೂ ಅದನ್ನು ನಿರಾಕರಿಸಿದ್ದರು.
    *1936ರ ಒಲಿಂಪಿಕ್ಸ್‌ನಲ್ಲಿ ಧ್ಯಾನ್‌ಚಂದ್ ಭಾರತ ತಂಡದ ನಾಯಕರೂ ಆಗಿದ್ದರು.
    *ಭಾರತದಲ್ಲಿ ಹಾಕಿ ರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುವಲ್ಲಿ ಧ್ಯಾನ್‌ಚಂದ್ ಕೊಡುಗೆ ಅಪಾರ.
    *ಧ್ಯಾನ್‌ಚಂದ್ ಜನ್ಮದಿನವನ್ನು (ಆಗಸ್ಟ್ 29) ರಾಷ್ಟ್ರೀಯ ಕ್ರೀಡಾದಿನವೆಂದು ಆಚರಿಸಲಾಗುತ್ತದೆ.
    *‘ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಿದಂತೆ ಧ್ಯಾನ್‌ಚಂದ್ ಹಾಕಿಯಲ್ಲಿ ಗೋಲು ಬಾರಿಸುತ್ತಾರೆ’ ಎಂದು 1935ರಲ್ಲಿ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಧ್ಯಾನ್‌ಚಂದ್‌ರನ್ನು ಪ್ರಶಂಸಿಸಿದ್ದರು.
    *‘ಹಾಕಿ ಕೇವಲ ಆಟವಲ್ಲ ಜಾದೂ. ಧ್ಯಾನ್‌ಚಂದ್ ಹಾಕಿಯ ಜಾದೂಗಾರ’ ಎಂದು 1928ರ ಒಲಿಂಪಿಕ್ಸ್ ವೇಳೆ ಪತ್ರಿಕೆಗಳಿಂದ ಬಣ್ಣನೆ.
    *ಆಸ್ಟ್ರೀಯಾದ ಜನರು 4 ಕೈ ಮತ್ತು 4 ಸ್ಟಿಕ್ ಹೊಂದಿದ ಧ್ಯಾನ್‌ಚಂದ್‌ರ ಪ್ರತಿಮೆಯನ್ನು ಅವರ ಗೌರವಾರ್ಥ ವಿಯೆನ್ನಾದಲ್ಲಿ ಸ್ಥಾಪಿಸಿದ್ದಾರೆ.
    *2002ರಿಂದ ಧ್ಯಾನ್‌ಚಂದ್ ಹೆಸರಿನಲ್ಲಿ ಜೀವಮಾನ ಸಾಧನೆ ಕ್ರೀಡಾಪ್ರಶಸ್ತಿಯನ್ನು ನೀಡಲಾಗುತ್ತಿದೆ.
    *ದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಧ್ಯಾನ್‌ಚಂದ್ ಹೆಸರು ಇಡಲಾಗಿದೆ.
    *1956ರಲ್ಲಿ 51ನೇ ವಯಸ್ಸಿನಲ್ಲಿ ಮೇಜರ್ ಪದವಿಯೊಂದಿಗೆ ಸೇನೆಯಿಂದ ನಿವೃತ್ತರಾದ ಧ್ಯಾನ್‌ಚಂದ್‌ಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು.

    ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ವಿರೂಷ್ಕಾ ಗುಡ್‌ನ್ಯೂಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts