More

    ಇಂದು ವಿಶ್ವ ಯುವ ಕೌಶಲ ದಿನ: ಕೌಶಲ ಅಭಿವೃದ್ಧಿಯಿಂದಲೇ ವ್ಯಕ್ತಿತ್ವದ ಉತ್ಕರ್ಷ

    | ಹರೀಶ್ ಬೇಲೂರು ಬೆಂಗಳೂರು

    ಇತ್ತೀಚಿನ ದಿನಗಳಲ್ಲಿ ಪದವಿಗಳು, ಮಾರ್ಕ್ಸ್​ಕಾರ್ಡ್ ಗಳು ಹಾಗೂ ಸರ್ಟಿಫಿಕೇಟ್​ಗಳು ಪ್ರಾಮುಖ್ಯ ಕಳೆದುಕೊಳ್ಳುತ್ತಿವೆ. ನೂರಕ್ಕೆ ನೂರು ಅಂಕ ಪಡೆದರೂ ಕೌಶಲ ಇಲ್ಲದಿದ್ದರೆ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟ. ಈ ಕೊರತೆ ನೀಗಿಸಲೆಂದೇ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಹಲವು ತರಬೇತಿ ಕೋರ್ಸ್​ಗಳನ್ನು ಅನುಷ್ಠಾನಕ್ಕೆ ತಂದಿದೆ. ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು, ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ(ಸಿಎಂಕೆಕೆವೈ), ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ), ಸ್ಕಿಲ್ ಕನೆಕ್ಟ್ ಪೋರ್ಟಲ್ ಹಾಗೂ ಇಂಟರ್​ನ್ಯಾಷನಲ್ ಮೈಗ್ರೇಷನ್ ಸೆಂಟರ್ ಫಾರ್ ಕರ್ನಾಟಕ (ಐಎಂಸಿಕೆ) ಯೋಜನೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳು ಆನ್​ಲೈನ್​ನಲ್ಲಿ ನೇರವಾಗಿ ಭೇಟಿ ಮಾಡುವ ಸಲುವಾಗಿ ‘ಸ್ಕಿಲ್ ಕನೆಕ್ಟ್ ಪೋರ್ಟಲ್’ ಜಾರಿಗೆ ತರಲಾಗಿದೆ. ಸ್ವಂತ ಉದ್ದಿಮೆ ಆರಂಭಿಸಲು ಹಾಗೂ ಉದ್ಯೋಗ ಪಡೆಯಲು ನಿರುದ್ಯೋಗಿ ಯುವ ಜನತೆಗೆ ಕೌಶಲಾಧಾರಿತ ತರಬೇತಿ ನೀಡುವ ಸಲುವಾಗಿ (https://www.kaushalkar.com/mission/)  ಸಿಎಂಕೆಕೆವೈ ಹಾಗೂ ಪಿಎಂಕೆವಿವೈ ಯೋಜನೆ ಜಾರಿಗೆ ತರಲಾಗಿದೆ. ಸಿಎಂಕೆಕೆವೈಯಡಿ ಕಳೆದ ವರ್ಷದಲ್ಲಿ 28 ಸಾವಿರ ಮಂದಿ ತರಬೇತಿ ಪೂರೈಸಿದ್ದಾರೆ. ಪಿಎಂಕೆವಿವೈಯಡಿ ಪ್ರತಿ ವರ್ಷ 3,600 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ 2,600 ಮಂದಿ ತರಬೇತಿ ಪೂರೈಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಉಳಿದವರು ತರಬೇತಿ ಪೂರೈಸಲು ಸಾಧ್ಯವಾಗಿಲ್ಲ.

    ಕೌಶಲ ದಿನಾಚರಣೆ ಏಕೆ?: 2014ರ ನವೆಂಬರ್​ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಜುಲೈ 15ರಂದು ವಿಶ್ವ ಯುವ ಕೌಶಲ ದಿನವನ್ನಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು. ಅದರಂತೆ, ಜಗತ್ತಿನಾದ್ಯಂತ ಕೌಶಲ ದಿನವನ್ನು ಆಚರಿಸಲಾಗುತ್ತಿದೆ. ಯುವ ಜನರಲ್ಲಿ ಕೌಶಲ ಅಗತ್ಯತೆ ಬಗ್ಗೆ ಅರಿವು ಮೂಡಿಸುವುದು, ಯುವಜನತೆ ಸಾಮಾಜಿಕ ಮತ್ತು ಆರ್ಥಿಕ ಉನ್ನತಿ ಸಾಧಿಸುವುದು ಇದರ ಮುಖ್ಯ ಉದ್ದೇಶ.

    ತರಬೇತಿ ನಂತರ ಕೆಲಸ: ವಿಶ್ವ ಯುವ ಕೌಶಲ ದಿನದ ಅಂಗವಾಗಿ ಪ್ರಮುಖ ಕಂಪನಿ ಮತ್ತು ಕೈಗಾರಿಕೆಗಳ ಜತೆ ನಿಗಮ ಹೊಸದಾಗಿ ತರಬೇತಿ ನೀಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಿದೆ. ಕಂಪನಿಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಹೊಸದಾಗಿ ತರಬೇತಿ ಕೇಂದ್ರ ಆರಂಭಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲೇ ತರಬೇತಿ ನೀಡಿ ಕೆಲಸ ನೀಡಬೇಕು ಎಂಬುದು ಯೋಜನೆ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯನ್ನು ಇಂದು (ಗುರುವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

    ಪೋರ್ಟಲ್ ಮೂಲಕ ನೆರವು: ಸ್ವಯಂಉದ್ಯೋಗ ಆರಂಭಿಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ‘ಕೋವಿಡ್ ಹೋಪ್ಸ್’ ಪೋರ್ಟಲ್ ಆರಂಭವಾಗಿದೆ. ಆಸಕ್ತರು ಈ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡು ಸ್ವಯಂ ಉದ್ಯೋಗ ಕಟ್ಟಿಕೊಳ್ಳಬಹುದು.

    ಕೃಷಿ ತರಬೇತಿಗೆ ಆದ್ಯತೆ: ಇತ್ತೀಚಿನ ದಿನಗಳಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಡೇರಿ, ಅಣಬೆ ಬೆಳೆ, ಕೋಳಿಸಾಕಣೆ, ಜೇನುಸಾಕಣೆ, ಮೀನುಗಾರಿಕೆ, ತೋಟಗಾರಿಕೆ ಸೇರಿ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಆರಂಭಿಸಲು ಮುಂದಾಗಿದ್ದೇವೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ತಿಳಿಸಿದ್ದಾರೆ. 2,400 ವಿವಿಧ ಕೋರ್ಸ್​ಗಳನ್ನು ಸರ್ಕಾರ ಗುರುತಿಸಿದೆ. 100-150 ವಿವಿಧ ಉದ್ಯೋಗ ನೀಡುವ ಸಲುವಾಗಿ ತರಬೇತಿ ನೀಡಲಾಗುತ್ತಿದೆ. ನಿಗಮದಲ್ಲಿ 16 ವಿದ್ಯಾಪೀಠಗಳಿವೆ. 200 ಮಂದಿ ತರಬೇತಿ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ. ನಿಗಮದಲ್ಲಿ 20 ಸರ್ಕಾರಿ ಸಂಸ್ಥೆಗಳಿವೆ. 100 ವಿವಿಧ ಕೌಶಲ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ತರಬೇತಿ ನೀಡುವವರಿಗೆ ಮಾತ್ರ ವೇತನ ಕೊಡಲಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಭ್ಯರ್ಥಿಗಳಿಗೆ ಟೂಲ್ಕಿಟ್ ಮತ್ತು ಶಿಷ್ಯವೇತನ ಕೊಡಿಸುವ ಬಗ್ಗೆ ಚಿಂತನೆ ಇದೆ ಎಂದರು ಡಾ.ಸೆಲ್ವಕುಮಾರ್.

    ಯಾರು ಅರ್ಜಿ ಸಲ್ಲಿಸಬಹುದು?: ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪೂರೈಸಿ ಕೆಲಸ ಸಿಗದ ಅಭ್ಯರ್ಥಿಗಳು ಹಾಗೂ ಆರ್ಥಿಕ ಸಮಸ್ಯೆಯಿಂದ ಓದಲು ಆಗದವರು ಸಿಎಂಕೆಕೆವೈ ಹಾಗೂ ಪಿಎಂಕೆವಿವೈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 18 ರಿಂದ 38 ವರ್ಷದೊಳಗಿನ ಅಭ್ಯರ್ಥಿಗಳು ಸಿಎಂಕೆಕೆವೈ ಹಾಗೂ 15ರಿಂದ 35 ವರ್ಷದೊಳಗಿನ ನಿರುದ್ಯೋಗಿಗಳು ಪಿಎಂಕೆವಿವೈ ಯೋಜನೆ ಪಡೆಯಲು ಅರ್ಹರಾಗಿದ್ದಾರೆ. ಪಿಎಚ್​ಡಿ ಪೂರೈಸಿರುವವರು ಸಹ ತರಬೇತಿ ಪಡೆಯಬಹುದು. ಪ್ರತಿ ತರಬೇತಿ ಅವಧಿ 15 ದಿನದಿಂದ ಮೂರೂವರೆ ತಿಂಗಳವರೆಗೆ ಇರಲಿದೆ.

    ಆಶಾದೀಪ ಯೋಜನೆ: ಖಾಸಗಿ ವಲಯದಲ್ಲಿ ಉದ್ಯೋಗ ವಂಚಿತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ದೊರಕಿಸಿಕೊಡುವುದು, ಪರಿಶಿಷ್ಟ ಸಮುದಾಯದವರಿಗೆ ಉದ್ಯೋಗ ನೀಡುವ ಖಾಸಗಿ ವಲಯದ ಸಂಸ್ಥೆಯವರಿಗೆ ಆರ್ಥಿಕ ಸಹಾಯ ಒದಗಿಸಿ ಉದ್ದಿಮೆದಾರರಿಗೆ ಉತ್ತೇಜನ ನೀಡುವುದು ಈ ಯೋಜನೆ ಉದ್ದೇಶವಾಗಿದೆ.

    ಪ್ರತಿ ವರ್ಷ ಸಾವಿರಾರು ಮಂದಿ ತರಬೇತಿ ಹೊಂದಿ, ಕೆಲಸ ಪಡೆಯುತ್ತಿದ್ದಾರೆ. ತರಬೇತಿ ನೀಡುವವರೇ ಕೆಲಸ ಕೊಡಿಸಬೇಕು. ಇಲ್ಲದಿದ್ದರೆ ಶೇಕಡ 20 ಶುಲ್ಕ ಕೊಡುವುದಿಲ್ಲ. ಈವರೆಗೆ ಎಲ್ಲರಿಗೂ ಆಫ್​ಲೈನ್​ನಲ್ಲಿ ತರಬೇತಿ ನೀಡಲಾಗುತ್ತಿದೆ. ಆನ್​ಲೈನ್ ತರಬೇತಿ ನೀಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಆಯಾ ಜಿಲ್ಲೆಯ ನಿಗಮ ಕಚೇರಿಗಳಲ್ಲಿ ತರಬೇತಿ ಸಂಬಂಧ ಮಾಹಿತಿ ಪಡೆಯಬಹುದು. ಪ್ರತಿ ವರ್ಷ 100-150 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎನ್ನುತ್ತಾರೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಡಾ.ಸೆಲ್ವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts